ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10 ಲಕ್ಷ ಪಡೆದು ವಂಚನೆ: ಡಿವೈಎಸ್ಪಿ ಸೇರಿ ನಾಲ್ವರ ಬಂಧನ

ಹಣ ದ್ವಿಗುಣಗೊಳಿಸುವುದಾಗಿ ಹೇಳಿ ‌ವಂಚನೆ * ಪೊಲೀಸರ ಸೋಗಿನಲ್ಲಿ ಅಪಹರಣ
Last Updated 12 ನವೆಂಬರ್ 2018, 0:30 IST
ಅಕ್ಷರ ಗಾತ್ರ

ಬೆಂಗಳೂರು: ಹಣ ದ್ವಿಗುಣಗೊಳಿಸುವುದಾಗಿ ಹೇಳಿ ₹10 ಲಕ್ಷ ಪಡೆದುಕೊಂಡು ವಂಚಿಸಿದ ಆರೋಪದಡಿ ಡಿವೈಎಸ್ಪಿ ಸೇರಿದಂತೆ ನಾಲ್ವರನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ನಾಗೇಂದ್ರ ಕುಮಾರ್,ಹೆಡ್‌ ಕಾನ್‌ಸ್ಟೆಬಲ್ ವೆಂಕಟರಮಣ, ಕಾನ್‌ಸ್ಟೆಬಲ್ ಸಂತೋಷ್ ಹಾಗೂ ಖಾಸಗಿ ಕಾರು ಚಾಲಕ ಶಮಸೂದ್ದಿನ್ ಬಂಧಿತರು.

‘ಖಾಸಗಿ ಕಂಪನಿ ಉದ್ಯೋಗಿ ಶಿವಕುಮಾರ್‌ ಎಂಬುವರನ್ನು ಸಂಪರ್ಕಿಸಿದ್ದ ಆರೋಪಿ ಶಮಸೂದ್ದಿನ್, ‘₹2,000 ಮುಖಬೆಲೆಯ ನೋಟುಗಳ ಸಮೇತ ₹10 ಲಕ್ಷ ಕೊಟ್ಟರೆ, ಅದಕ್ಕೆ ಪ್ರತಿಯಾಗಿ ₹500 ಮುಖಬೆಲೆಯ ನೋಟುಗಳ ಸಮೇತ ₹20 ಲಕ್ಷ ವಾಪಸ್‌ ಕೊಡುತ್ತೇನೆ’ ಎಂದು ಹೇಳಿದ್ದ. ಅದನ್ನು ನಂಬಿದ್ದ ಶಿವಕುಮಾರ್, ಹಣ ಕೊಡಲು ಒಪ್ಪಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಶಿವಕುಮಾರ್ ಅವರನ್ನು₹10 ಲಕ್ಷ ಸಮೇತ ನ. 8ರಂದು ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದ ಶಮಸೂದ್ದಿನ್, ಮಾತುಕತೆ ನಡೆಸುತ್ತಿದ್ದ. ಅದೇ ವೇಳೆಯೇ ಡಿವೈಎಸ್ಪಿ ನಾಗೇಂದ್ರ ಕುಮಾರ್ ಹಾಗೂ ಇತರೆ ಆರೋಪಿಗಳು, ಸಿಸಿಬಿ ಪೊಲೀಸರ ಸೋಗಿನಲ್ಲಿ ಮನೆಯೊಳಗೆ ನುಗ್ಗಿದ್ದರು. ಹಣದ ಚೀಲವನ್ನು ಕಿತ್ತುಕೊಂಡಿದ್ದರು’ ಎಂದರು.

‘ಹಣ ಯಾರದ್ದು? ಇದು ಅಕ್ರಮವಾದ ಹಣ. ಇದನ್ನು ಜಪ್ತಿ ಮಾಡುತ್ತೇವೆ. ನಿನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ’ ಎಂದು ನಾಗೇಂದ್ರ ಕುಮಾರ್, ದೂರುದಾರ ಶಿವಕುಮಾರ್‌ ಅವರನ್ನು ಹೆದರಿಸಿದ್ದರು. ನಂತರ, ಅವರನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ವಿದ್ಯಾರಣ್ಯಪುರ, ತಿಂಡ್ಲು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸುತ್ತಾಡಿಸಿದ್ದರು. ಬಳಿಕವೇ ಅವರನ್ನು ಕೊಡಿಗೇಹಳ್ಳಿ ಬಳಿ ಇಳಿಸಿ ಹೋಗಿದ್ದರು’.

‘ತಮ್ಮ ಹಣ ಕಿತ್ತುಕೊಂಡು ಹೋದವರು ನಕಲಿ ಪೊಲೀಸರು ಎಂಬುದು ಗೊತ್ತಾಗುತ್ತಿದ್ದಂತೆ ಶಿವಕುಮಾರ್, ಠಾಣೆಗೆ ಬಂದು ದೂರು ನೀಡಿದ್ದರು. ಡಿವೈಎಸ್ಪಿ ನಾಗೇಂದ್ರ ಕುಮಾರ್‌ ಅವರೇ ಪೊಲೀಸರ ಸೋಗಿನಲ್ಲಿ ಕೃತ್ಯ ಎಸಗಿದ್ದು ಎಂಬುದು ತನಿಖೆಯಲ್ಲಿ ತಿಳಿಯಿತು’ ಎಂದು ವಿವರಿಸಿದರು.

‘ಗಂಗಮ್ಮನಗುಡಿ ನಿವಾಸಿಯಾದ ಶಮಸೂದ್ದಿನ್, ಶಿವಕುಮಾರ್ ಬಳಿ ಹಣ ಇರುವುದನ್ನು ತಿಳಿದುಕೊಂಡಿದ್ದ. ಆ ಹಣ ದೋಚಲು ಸಂಚು ರೂಪಿಸಿದ್ದ ಆತ, ಡಿವೈಎಸ್ಪಿ ನಾಗೇಂದ್ರ ಕುಮಾರ್‌ ಜೊತೆ ಚರ್ಚಿಸಿದ್ದ. ಪೊಲೀಸರ ಸೋಗಿನಲ್ಲಿ ದಾಳಿ ಮಾಡಿ ಹಣ ದೋಚಿದರೆ ಯಾರಿಗೂ ಅನುಮಾನ ಬರುವುದಿಲ್ಲವೆಂದು ನಾಗೇಂದ್ರ ಕುಮಾರ್‌, ಆತನಿಗೆ ಹೇಳಿದ್ದರು. ನಂತರ, ಎಲ್ಲರೂ ಸೇರಿಯೇ ಕೃತ್ಯ ಎಸಗಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳ ಬಳಿ ಯಾವುದೇ ಹಣ ಇರಲಿಲ್ಲ. ಶಿವಕುಮಾರ್ ಅವರಿಗೆ ಸುಳ್ಳು ಹೇಳಿದ್ದರು. ಪ್ರಕರಣ ಸಂಬಂಧ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಶಾಮೀಲಾಗಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ದೂರುದಾರರಿಂದ ಪಡೆದ ಹಣವನ್ನು ಆರೋಪಿಗಳು ಎಲ್ಲಿಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT