ಬುಧವಾರ, ಜನವರಿ 29, 2020
30 °C

ಚಿಕ್ಕಬಳ್ಳಾಪುರದಲ್ಲಿ ಖಾತೆ ತೆರೆದ ಕಮಲ: ಸುಧಾಕರ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಸೋಮವಾರ 34,802 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಮಲದ ಖಾತೆ ತೆರೆದ ಖ್ಯಾತಿಗೆ ಪಾತ್ರರಾದರು.

ಈ ಹಿಂದೆ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಸತತವಾಗಿ ಎರಡನೇ ಬಾರಿ ಗೆದ್ದ ಉದಾಹರಣೆ ಇರಲಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಸುಧಾಕರ್ ಅವರು ಎರಡನೇ ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದರು. ಇದೀಗ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿ ಗೆದ್ದು ಎರಡನೇ ಬಾರಿಗೆ ದಾಖಲೆ ಬರೆದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಅಖಾಡದಲ್ಲೊಂದು ಸುತ್ತು| ಮೂವರ ಸಮಬಲದ ಸ್ಪರ್ಧೆ

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ 88.6ರಷ್ಟು ಮತದಾನವಾಗಿತ್ತು. ಅದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಾ.ಕೆ.ಸುಧಾಕರ್ 82,006 (ಶೇ47.5) ಮತಗಳನ್ನು, ಬಿಜೆಪಿ ಅಭ್ಯರ್ಥಿ ಡಾ.ಜಿ.ವಿ.ಮಂಜುನಾಥ್ 5,576 (ಶೇ3.2) ಮತಗಳನ್ನು ಪಡೆದಿದ್ದರು. 
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಅಭ್ಯರ್ಥಿಯಾದ ಸುಧಾಕರ್ ಅವರು 84,389 ಮತಗಳನ್ನು ಪಡೆಯುವ ಮೂಲಕ ಕಳೆದ ಬಾರಿಗಿಂತಲೂ 2,383 ಹೆಚ್ಚು ಮತಗಳನ್ನು ಪಡೆದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರು 49,588, ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ ಅವರು 35,869 ಮತಗಳನ್ನು ಪಡೆದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ 51,575 ಮತಗಳನ್ನು ಪಡೆದಿದ್ದರು.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದರು. ಅದರ ಬೆನ್ನಲ್ಲೇ ಈ ಫಲಿತಾಂಶ ಕೇಸರಿ ಪಾಳೆಯದಲ್ಲಿ ಉತ್ಸಾಹ ನೂರ್ಮಡಿಗೊಳಿಸಿದೆ. 

ಉಪ ಚುನಾವಣೆಯಲ್ಲಿ ಶೇ 86.84 ರಷ್ಟು ಮತದಾನವಾಗಿತ್ತು. 2 ಲಕ್ಷ ಮತದಾರರ ಪೈಕಿ 1.73 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಸಮ್ಮಿಶ್ರ ಸರ್ಕಾರದ ಪತನದ ಬೆನ್ನಲ್ಲೇ ಅಧಿಕಾರಕ್ಕೆ ಬಂದ ಬಿಜೆಪಿಗೆ ಅಳಿವು ಉಳಿವಿನ ಪ್ರಶ್ನೆಯಾಗಿ ಬಂದ ಈ ಉಪ ಚುನಾವಣೆ ‘ಹೈವೋಲ್ಟೆಜ್ ಎಲೆಕ್ಷನ್’ ಎಂಬ ಕಾವು ಸೃಷ್ಟಿಸಿತ್ತು. 

ಎರಡು ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿ, ಎರಡನೇ ಅವಧಿಯಲ್ಲಿ 14 ತಿಂಗಳಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಅನರ್ಹ ಶಾಸಕ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಬಿಜೆಪಿಗೆ ಸೇರ್ಪಡೆಗೊಂಡು ಮೂರನೇ ಬಾರಿಗೆ ಕಣಕ್ಕಿಳಿದ ಡಾ.ಕೆ.ಸುಧಾಕರ್ ಅವರಿಗೆ ಇದು ‘ಅಸ್ತಿತ್ವ‘ದ ಜತೆಗೆ ‘ಪ್ರತಿಷ್ಠೆ’ಯ ಚುನಾವಣೆಯಾಗಿತ್ತು.

ಶಾಸಕರನ್ನು ಮತ್ತು ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ಕೂಡ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ ಪರಿಣಾಮ, ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಾಣಿಸಿಕೊಂಡ ಉಪ ಚುನಾವಣೆ ಹಿಂದೆಂದೂ ಕಂಡರಿಯದಷ್ಟು ಕುತೂಹಲ ಕೆರಳಿಸಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು