ಚಿಕ್ಕಬಳ್ಳಾಪುರ: ಖಾಲಿ ನಿವೇಶನ, ಸಮಸ್ಯೆಗಳ ಆವಾಸಸ್ಥಾನ

ಶನಿವಾರ, ಜೂಲೈ 20, 2019
26 °C
ದಿನೇ ದಿನೇ ಹೆಚ್ಚುತ್ತಿರುವ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವ ಪ್ರವೃತ್ತಿ, ಖಾಲಿ ನಿವೇಶನಗಳ ಅಕ್ಕಪಕ್ಕ ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣ

ಚಿಕ್ಕಬಳ್ಳಾಪುರ: ಖಾಲಿ ನಿವೇಶನ, ಸಮಸ್ಯೆಗಳ ಆವಾಸಸ್ಥಾನ

Published:
Updated:
Prajavani

ಚಿಕ್ಕಬಳ್ಳಾಪುರ: ತೊಡಲಾಗದ ಮಾಸಿದ ಬಟ್ಟೆಗಳು, ಉಂಡು ಮಿಕ್ಕಿದ ಆಹಾರ ಪದಾರ್ಥ, ಕುಡಿದು ಖಾಲಿ ಮಾಡಿದ ಮದ್ಯದ ಬಾಟಲಿಗಳು, ಮನೆ ಸಾಮಾನುಗಳನ್ನು ತಂದ ಪ್ಲಾಸ್ಟಿಕ್‌ ಕವರ್‌ಗಳು, ಬಳಸಲಾಗದ ಹಾಸಿಗೆಗಳು, ಮಕ್ಕಳಿಗೆ ಹಾಕಿದ ಡೈಪರ್‌ಗಳು, ಹರಿದು ಹೋದ ಪಾದರಕ್ಷೆಗಳು, ಹಳೆಯ ಕಟ್ಟಡಗಳ ಅವಶೇಷಗಳು, ಸತ್ತ ಪ್ರಾಣಿಗಳ ಕಳೇಬರ ಬಳಸಿ ಬಿಸುಟಿದ ತ್ಯಾಜ್ಯ ವಸ್ತುಗಳ ಮೂಟೆ, ಮೂಟೆಗಳ ರಾಶಿ.

ಹೀಗೆ.. ನಗರದ ಜನವಸತಿ ಪ್ರದೇಶದಲ್ಲಿ ಒಂದು ಸುತ್ತು ಹಾಕಿ ಬಂದರೆ ಹೇವರಿಕೆ ಹುಟ್ಟಿಸುವ, ನಗರದ ಸೌಂದರ್ಯಕ್ಕೆ ಕುಂದುಂಟು ಮಾಡುವ ಖಾಲಿ ನಿವೇಶನಗಳ ದೃಶ್ಯಗಳು ಗೋಚರಿಸುತ್ತವೆ.

ನಗರದಲ್ಲಿ 31 ವಾರ್ಡ್‌ಗಳಿದ್ದು, ನೂರಾರು ಬಡಾವಣೆಗಳಿವೆ. ಅವುಗಳ ನಡುವೆ ಅಲ್ಲಲ್ಲಿ ಇರುವ ಖಾಲಿ ನಿವೇಶನಗಳು ಅಕ್ಷರಶಃ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಕೆಲವೆಡೆ ಗಿಡಗಂಟಿ ಬೆಳೆದಿವೆ. ಅಲ್ಲಲ್ಲಿ ಕಟ್ಟಡದ ತ್ಯಾಜ್ಯ ಯಥಾಸ್ಥಿತಿಯಲ್ಲಿ ಉಳಿದಿದೆ. ಕೆಲ ಕಡೆಯಂತೂ ಕಾಲಿಡಲು ಆಗದಷ್ಟು ದುರ್ನಾತ ಬೀರುತ್ತಿವೆ. ವಿಲೇವಾರಿಯಾಗದ ತ್ಯಾಜ್ಯದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೋಗ ಹರಡುವ ಭೀತಿ ಸಾರ್ವಜನಿಕರಲ್ಲಿ ಆವರಿಸಿದೆ.

ಪ್ರಶಾಂತ್‌ ನಗರ, ಕೆಳಗಿನ ತೋಟ, ವಾಪಸಂದ್ರ, ಭಾರತಿ ನಗರ, ಶೆಟ್ಟಿಹಳ್ಳಿ ಬಡಾವಣೆ, ಬಾಪೂಜಿ ನಗರ, ದರ್ಗಾ ಮೊಹಲ್ಲಾ... ಹೀಗೆ ನಗರದ ಹಲವು ಭಾಗಗಳಲ್ಲಿ ಖಾಲಿ ನಿವೇಶನಗಳು ಕಾಣಸಿಗುತ್ತವೆ. ಇವುಗಳಲ್ಲಿ ಬಹುಪಾಲು ಸ್ಥಳೀಯರಿಗೆ ಕಸ ಸುರಿಯುವ ಸುಲಭದ ತಾಣಗಳಾಗಿವೆ. ಈ ವಿದ್ಯಮಾನ ಪರಿಸರ ಪ್ರಿಯರು, ಪ್ರಜ್ಞಾವಂತರಲ್ಲಿ ಕಳವಳ ಮೂಡಿಸಿದರೆ, ನೆರೆಹೊರೆಯವರಿಗೆ ನೆಮ್ಮದಿ ಕಸಿಯುತ್ತಿವೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಖಾಲಿ ನಿವೇಶನಗಳಲ್ಲಿ ಕಳೆ ಗಿಡಗಳು ಬೆಳೆಯಲಾರಂಭಿಸುತ್ತವೆ. ಆಳೆತ್ತರಕ್ಕೆ ಬೆಳೆಯುವ ಸಸ್ಯಗಳಲ್ಲಿ ಹಾವು, ಚೇಳು ಸೇರಿದಂತೆ ವಿಷಜಂತುಗಳು ಸೇರಿಕೊಳ್ಳುತ್ತವೆ. ಸುತ್ತಲಿನ ಮನೆಗಳಿಗೂ ಇವು ಹರಿದುಬರುತ್ತವೆ. ಇದರಿಂದ ಸುತ್ತಲಿನ ಮನೆಗಳ ನಿವಾಸಿಗಳು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ನಗರ ವ್ಯಾಪ್ತಿಯಲ್ಲಿ ಸುಮಾರು 15 ಸಾವಿರ ಮನೆಗಳಿವೆ. ಅವುಗಳ ನಡುವೆ ಸುಮಾರು 7 ರಿಂದ 8 ಸಾವಿರ ಖಾಲಿ ನಿವೇಶನಗಳಿವೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು. ನಗರ ಹೊರವಲಯದ ವಿಸ್ತರಣಾ ಪ್ರದೇಶದಲ್ಲಿ ನಿರ್ಮಾಣವಾದ ಹೊಸ ಬಡಾವಣೆಗಳಲ್ಲಿಯೇ ಇಂತಹ ಸಮಸ್ಯೆ ಹೆಚ್ಚಾಗಿ ಕಣ್ಣಿಗೆ ರಾಚುತ್ತದೆ.

ಹೊಸ ಬಡಾವಣೆ ನಿರ್ಮಾಣವಾದಾಗ ಖರೀದಿಸಿದ ನಿವೇಶನಗಳಲ್ಲಿ ಅನೇಕರು ಇನ್ನೂ ಕಟ್ಟಡ ನಿರ್ಮಾಣ ಮಾಡಿಲ್ಲ. ವ್ಯಾಜ್ಯದ ಕಾರಣಕ್ಕೆ ಹಲವು ನಿವೇಶನಗಳ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಸುತ್ತ ಬೇಲಿ ನಿರ್ಮಿಸಿ ಸುರಕ್ಷಿತವಾಗಿ ಇಡುವ ಪ್ರಯತ್ನ ನಡೆದಿರುವುದು ಕೂಡ ಅಪರೂಪ. ನಿವೇಶನ ಶುಚಿಯಾಗಿಟ್ಟುಕೊಳ್ಳುವಂತೆ ನಗರಸಭೆ ನೀಡಿದ ಸೂಚನೆ ಪಾಲಿಸಿದವರು, ಶುಚಿಯಾಗಿಟ್ಟುಕೊಳ್ಳುವ ಆಸಕ್ತಿ ತೋರಿದವರು ವಿರಳ.

ಖಾಲಿ ನಿವೇಶನದಲ್ಲಿ ತ್ಯಾಜ್ಯ ಎಸೆಯದಂತೆ ನಗರಸಭೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದೆ. ಎಲ್ಲೆಂದರಲ್ಲಿ ಕಸ ಎಸೆಯುವುದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದೆ. ಆದರೂ, ಕೆಲವರು ಕಸ ಎಸೆಯುವುದನ್ನು ಬಿಟ್ಟಿಲ್ಲ. ಚೆಲ್ಲಾಪಿಲ್ಲಿಯಾಗುವ ತ್ಯಾಜ್ಯವನ್ನು ಪೌರಕಾರ್ಮಿಕರು ಕೂಡ ವಿಲೇವಾರಿ ಮಾಡುವುದಿಲ್ಲ. ಮಾಲೀಕರಂತೂ ತಮ್ಮ ನಿವೇಶನದತ್ತ ಎಲೆ ಹಾಕುವುದಿಲ್ಲ. ಹೀಗಾಗಿ ನಮಗೆ ನಿತ್ಯ ನರಕದ ಅನುಭವ ಎನ್ನುತ್ತಾರೆ ಖಾಲಿ ನಿವೇಶನಗಳ ನೆರೆಹೊರೆಯ ಜನರು.

ಕೊಳೆತ ವಸ್ತುಗಳು, ಮಾಂಸದ ತ್ಯಾಜ್ಯಗಳನ್ನು ಎಸೆಯುವುದರಿಂದ ದುರ್ವಾಸನೆ ಕೂಡ ಬರುತ್ತದೆ. ಬಹುಬೇಗ ಆಕರ್ಷಣೆಗೆ ಒಳಗಾಗುವ ಬೀದಿ ನಾಯಿಗಳು, ಸೇರಿದಂತೆ ವಿವಿಧ ಪ್ರಾಣಿಗಳು ನಿವೇಶನದ ಸುತ್ತ ಸುಳಿದಾಡುತ್ತವೆ. ಇದರಿಂದ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗುತ್ತಿದೆ.

‘ಪ್ರತಿ ವರ್ಷ ತೆರಿಗೆ ವಸೂಲಿ ಮಾಡುವ ನಗರಸಭೆ ಖಾಲಿ ನಿವೇಶನಗಳ ಸ್ವಚ್ಛತೆಗೆ ಗಮನಹರಿಸುವುದು ಅಗತ್ಯ. ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರ ವಿರುದ್ಧ ಕ್ರಮ ಜರುಗಿಸುವ ಹಾಗೂ ದಂಡ ವಿಧಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರವಿದೆ. ದಂಡ ಪ್ರಯೋಗಿಸದ ಹೊರತು ನಿವೇಶನಗಳು ಶುಚಿಯಾಗುವುದು ಸಾಧ್ಯವಿಲ್ಲ. ಇನ್ನು ಸರ್ಕಾರಿ ಮತ್ತು ತನ್ನ ಒಡೆತನದ ಖಾಲಿ ನಿವೇಶನಗಳನ್ನೂ ನಗರಸಭೆ ಶುಚಿಗೊಳಿಸಬೇಕು’ ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ಪ್ಲಾಸ್ಟಿಕ್‌ಗೆ ಬೀಳದ ಕಡಿವಾಣ

ನಗರಸಭೆ ಅಧಿಕಾರಿಗಳ ಪ್ಲಾಸ್ಟಿಕ್‌ ಬಳಕೆ ವಿರುದ್ಧದ ಕಾರ್ಯಾಚರಣೆ ಅಂಗಡಿಗಳ ಮೇಲಿನ ದಾಳಿಗೆ ಸೀಮಿತವಾಗಿದೆ. ದಿನನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್‌ ಅನ್ನು ಜನರು ಮಿತಿ ಮೀರಿ ಬಳಸುತ್ತಿದ್ದಾರೆ. ನಗರದಲ್ಲಿ ಒಂದು ಸುತ್ತು ಹಾಕಿದರೆ ಗಲ್ಲಿಗಲ್ಲಿಗಳ ಚರಂಡಿಗಳು, ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್‌ ಬಳಕೆಯ ವಿರಾಟ್‌ ರೂಪ ದರ್ಶನವಾಗುತ್ತದೆ.

ರಾಜ್ಯ ಸರ್ಕಾರ ಎಲ್ಲ ಬಗೆಯ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ, ಮಾರಾಟ, ಸಾಗಣೆ ಮಾಡುವುದನ್ನು ನಿಷೇಧಿಸಿದೆ. ಆದರೆ, ನಗರಸಭೆ ಆಡಳಿತ ಅಪರೂಪಕ್ಕೊಮ್ಮೆ ಮಳಿಗೆಗಳಿಗೆ ದಿಢೀರ್‌ ದಾಳಿ ನಡೆಸಿ ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸುತ್ತಿದೆ. ಇದರಿಂದ ಸರ್ಕಾರದ ಆದೇಶ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ.

ಪರಿಣಾಮ, ಊಟದ ತಟ್ಟೆ, ಚಹಾ ಕಪ್, ಕುಡಿವ ನೀರಿಗೂ ಪ್ಲಾಸ್ಟಿಕ್ ಕಪ್‌ಗಳನ್ನೇ ಬಳಸಲಾಗುತ್ತಿದೆ. ಸಣ್ಣಪುಟ್ಟ ಅಂಗಡಿ ಮಳಿಗೆಗಳಲ್ಲಿ, ಟೀ ಸ್ಟಾಲ್‌, ಫಾಸ್ಟ್‌ ಫುಡ್‌ಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಕಂಡು ಬರುತ್ತಿದೆ. ಜನರು ಕೂಡ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳನ್ನೇ ಕೇಳುತ್ತಾರೆ. ಇಂದಿಗೂ ಬಹುತೇಕ ವರ್ತಕರು 40 ಮೈಕ್ರಾನ್‌ಗಿಂತಲೂ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್‌ ಕವರ್‌ ಬಳಕೆ ಮಾಡುತ್ತಿದ್ದಾರೆ.

ಕೆಲ ನಿವಾಸಿಗಳು ಉಳಿದಂತಹ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಗಲ್ಲಿ, ಖಾಲಿ ನಿವೇಶನಗಳ ಒಳಗೆ ಬಿಸಾಕುತ್ತಾರೆ. ಇದರ ವಾಸನೆಗೆ ಸಾಕು ಪ್ರಾಣಿಗಳು, ಪಕ್ಷಿಗಳು ಪ್ಲಾಸ್ಟಿಕ್‌ ಕವರ್‌ಗೆ ಬಾಯಿ ಹಾಕಿ ಆಹಾರ ಹುಡುಕುತ್ತವೆ. ಇದರಿಂದ ಅವುಗಳ ಪ್ರಾಣಕ್ಕೆ ಕುತ್ತು ಬರುತ್ತಿದೆ. ಈ ವಿಚಾರದಲ್ಲಿ ನಗರಸಭೆ ಎಚ್ಚೆತ್ತುಕೊಳ್ಳಬೇಕಾಗದೆ ಎನ್ನುವುದು ಪ್ರಜ್ಞಾವಂತರ ಒತ್ತಾಯ.

ಮಾಲೀಕರೇ ಪತ್ತೆ ಆಗುತ್ತಿಲ್ಲ!

ಖಾಲಿ ನಿವೇಶನಗಳ ಮಾಲೀಕರಿಗೆ ಸ್ವಚ್ಛತೆ ಕಾಯ್ದುಕೊಳ್ಳುವಂತೆ ನೋಟಿಸ್‌ ಕೊಡಲು ಮುಂದಾಗಿದ್ದೇವೆ. ಆದರೆ ಅನೇಕ ಕಡೆಗಳಲ್ಲಿ ಖಾಲಿ ನಿವೇಶನಗಳ ಮಾಲೀಕರೇ ಪತ್ತೆ ಆಗುತ್ತಿಲ್ಲ. ಹೀಗಾಗಿ, ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಕೊಟ್ಟು, ಆಟೊ ಪ್ರಚಾರ ನಡೆಸಿ, ಕಾಲಾವಕಾಶ ನೀಡುತ್ತೇವೆ. ಆಗಲೂ ನಿವೇಶನ ಸ್ವಚ್ಛಗೊಳಿಸದೆ ಇದ್ದರೆ ನಾವೇ ಸ್ವಚ್ಛಗೊಳಿಸಿ, ಅದಕ್ಕೆ ತಗುಲಿದ ವೆಚ್ಚವನ್ನು ಕಂದಾಯ ರೂಪದಲ್ಲಿ ವಸೂಲಿ ಮಾಡಲು ಕ್ರಮಕೈಗೊಳ್ಳುತ್ತೇವೆ.
– ಉಮಾಕಾಂತ್‌, ನಗರಸಭೆ ಆಯುಕ್ತ

ಬೆಕ್ಕಿಗೆ ಗಂಟೆ ಕಟ್ಟುವವರಾರು?

ಕಾಮಗಾರಿಗಳ ವಿಚಾರದಲ್ಲಿ ಮಾತ್ರ ತುಂಬಾ ಆಸಕ್ತಿ ತೋರುವ ಜನಪ್ರತಿನಿಧಿಗಳು ಸಾರ್ವಜನಿಕರ ದೂರುಗಳಿಗೆ ಜಾಣ ಕುರುಡು ಪ್ರದರ್ಶಿಸುತ್ತಾರೆ. ಹೀಗಾಗಿಯೇ ನಗರದ ಚಿತ್ರಣ ಇಂದಿಗೂ ಬದಲಾಗುತ್ತಿಲ್ಲ. ಕೆಲವರ ಬೇಜವಾಬ್ದಾರಿತನ ನೂರಾರು ಅಮಾಯಕ ನಾಗರಿಕರಿಗೆ ತೊಂದರೆ ಉಂಟು ಮಾಡುತ್ತವೆ. ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ಎನ್ನುವಂತಾಗಿದೆ ನಮ್ಮ ವ್ಯವಸ್ಥೆ.
– ಸೀತಾರಾಮ್ ಗುಪ್ತಾ, ಶೆಟ್ಟಿಹಳ್ಳಿ ಬಡಾವಣೆ ನಿವಾಸಿ

ಕಸ ಸುರಿಯುವ ಪ್ರವೃತ್ತಿ ಹೆಚ್ಚುತ್ತಿದೆ

ನಗರದಲ್ಲಿ ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಸುರಿಯುವ ಪ್ರವೃತ್ತಿ ಹೆಚ್ಚುತ್ತಿದೆ. ರಾಶಿ ಬಿದ್ದ ತ್ಯಾಜ್ಯವನ್ನು ಬೀದಿ ನಾಯಿಗಳು, ಹಸುಗಳು ಆಹಾರಕ್ಕಾಗಿ ಮತ್ತಷ್ಟು ಚೆಲ್ಲಾಪಿಲ್ಲಿ ಮಾಡಿ ಗಲೀಜು ವಾತಾವರಣ ಉಂಟು ಮಾಡುತ್ತವೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ನಗರದ ಅನೇಕ ಕಡೆಗಳಲ್ಲಿದೆ. ಈ ವಿಚಾರವನ್ನು ನಗರಸಭೆ ಗಂಭೀರವಾಗಿ ಪರಿಗಣಿಸಬೇಕಿದೆ.
– ಅಶ್ವಿನಿ, ಮುನ್ಸಿಪಲ್ ಬಡಾವಣೆ ನಿವಾಸಿ

**

ಕಸವನ್ನು ಖಾಲಿ ನಿವೇಶನಗಳಲ್ಲಿ ಸುರಿಯದಂತೆ ತಡೆಯಬೇಕಾದರೆ ನಗರಸಭೆಯವರು ಈ ಬಗ್ಗೆ ಅರಿವು ಮೂಡಿಸಬೇಕು. ಕಸ ಹಾಕುವವರಿಗೆ ದಂಡ ವಿಧಿಸಬೇಕು. 

- ಬಾಲಕೃಷ್ಣ, ಗಂಗನಮಿದ್ದೆ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !