ವರುಣನ ಕೃಪೆಗಾಗಿ ಬಾಲಕಿಯರಿಗೆ ಅಣಕು ಮದುವೆ!

7

ವರುಣನ ಕೃಪೆಗಾಗಿ ಬಾಲಕಿಯರಿಗೆ ಅಣಕು ಮದುವೆ!

Published:
Updated:
Deccan Herald

ದೇವನಹಳ್ಳಿ: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡುವುದು, ಕತ್ತೆಗಳ ಮೆರವಣಿಗೆ ಮಾಡುವುದು ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಆದರೆ ಇಲ್ಲಿಗೆ ಸಮೀಪದ ಸಾವಕನಹಳ್ಳಿಯಲ್ಲಿ ಗುರುವಾರ ರಾತ್ರಿ ವರುಣನ ಕೃಪೆಗಾಗಿ ಇಬ್ಬರು ಬಾಲಕಿಯರಿಗೆ ಅಣಕು ಮದುವೆ ಮಾಡಲಾಗಿದೆ.

ಒಂದು ಹೆಣ್ಣು ಮಗುವಿಗೆ ವರನ ಉಡಿಗೆ ತೊಡಿಸಿ ಮತ್ತೊಂದು ಹೆಣ್ಣು ಮಗುವಿಗೆ ವಧುವಿನ ಅಲಂಕಾರ ಮಾಡಿ ಸಾಂಕೇತಿಕವಾಗಿ ಮಾಂಗಲ್ಯ ಕಟ್ಟಿಸಿ ಮದುವೆ ಮಾಡಲಾಯಿತು. ಮಹಿಳೆಯರು ಸೋಬಾನೆ ಪದ ಹಾಡಿದರು. ಹಸೆಮಣೆ ಮೇಲೆ ಕುಳಿತಿರುವ ವಧು-ವರರ ಕೆನ್ನೆಗೆ ಅರಿಶಿಣ ಹಚ್ಚಿ ಶುಭ ಹಾರೈಸಿದರು. ‘ಮದುವೆ ಸಂಭ್ರಮ ನಡೆಸಿ ಮಳೆರಾಯನ ಆಶೀರ್ವಾದ ಬೇಡುತ್ತಿದ್ದೇವೆ’ ಎಂದು ಮದುವೆಗೆ ಬಂದಿದ್ದ ವೃದ್ಧೆ ನಂಜಮ್ಮ ತಿಳಿಸಿದರು.

ಈ ಅಣಕು ಮದುವೆ ನೇತೃತ್ವ ವಹಿಸಿದ್ದು ಕರ್ನಾಟಕ ಮಾನವ ಹಕ್ಕುಗಳ ರಾಜ್ಯ ಸಮಿತಿ ಮಹಿಳಾ ಘಟಕ ಉಪಾಧ್ಯಕ್ಷೆ ಎಸ್.ಟಿ. ನಂದಿನಿಗೌಡ. ‘ಹತ್ತು ದಿನಗಳಿಂದ ಈ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಕ್ಕಳ ಮತ್ತು ಪೋಷಕರ ಮನವೊಲಿಸಿ ವಧುವರರ ಅಳತೆಗೆ ತಕ್ಕಂತೆ ಹೊಸ ಉಡಿಗೆ ತೊಡಿಗೆ ಖರೀದಿಸಿ ಹೊಲಿಸಲಾಗಿತ್ತು. ನಾಲ್ಕು ದಿನಗಳಿಂದ ಪ್ರತಿ ಸಂಜೆ ವೇಳೆ ಗ್ರಾಮಸ್ಥರು ಒಟ್ಟುಗೂಡಿ ಸಂಭ್ರಮಾಚರಣೆ ನಡೆಸಿ ಐದನೇ ದಿನಕ್ಕೆ ಮುಕ್ತಾಯ ಮಾಡುತ್ತಿದ್ದೇವೆ’ ಎಂದರು.

ಮದುವೆಗೆ ಬಂದವರಿಗೆ ಕರಿಗಡಬು, ಜಿಲೇಬಿ, ರವೆಉಂಡೆ, ಲಾಡು, ಕಜ್ಜಾಯ, ವಿವಿಧ ಬಗೆಯ ಸಿಹಿತಿನಿಸು, ಮಂಡಕ್ಕಿ ಖಾರ, ತೆಂಗಿನಕಾಯಿ ತಾಂಬೂಲ ನೀಡಲಾಯಿತು. ಅಕ್ಕಿಕಾಳು ಹಾಕಿ ಹರಿಸಿದ ಮಹಿಳೆಯರಿಗೆ ಅರಿಶಿಣ ಕುಂಕುಮ ನೀಡಿ ಗೌರವಿಸಲಾಯಿತು.

ಅಣಕು ಮದುವೆ ನಂತರ ಕಾಕತಾಳೀಯವೆಂಬಂತೆ ಸುಮಾರು ಒಂದೂವರೆ ತಾಸು ಮಳೆ ಸುರಿಯಿತು. ಇದೇ ರೀತಿ ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ಮಳೆಗಾಗಿ ಪ್ರಾರ್ಥಿಸಿ ಇಬ್ಬರು ಬಾಲಕರಿಗೆ ಮದುವೆ ಮಾಡಲಾಗಿತ್ತು. ಅಲ್ಲಿ ಮಳೆ ಬರಲಿಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 1

  Sad
 • 2

  Frustrated
 • 3

  Angry

Comments:

0 comments

Write the first review for this !