ಶುಕ್ರವಾರ, ಜನವರಿ 27, 2023
19 °C
ಮಕ್ಕಳ ಸಹಾಯವಾಣಿಗೆ 151 ದೂರು

ಲಾಕ್‍ಡೌನ್ ವೇಳೆ ಬಾಲ್ಯವಿವಾಹ ಹೆಚ್ಚಳ?

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‍ಡೌನ್ ಸಮಯದಲ್ಲೇ ರಾಜ್ಯದಲ್ಲಿ ಬಾಲ್ಯವಿವಾಹಗಳು ನಡೆದಿರುವ ಬಗ್ಗೆ ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಆಯೋಗ ಹಾಗೂ 'ಮಕ್ಕಳ ಸಹಾಯವಾಣಿ-1098'ಕ್ಕೆ ದೂರಿನ ಕರೆಗಳು ಬಂದಿವೆ.

ಮಾರ್ಚ್ 24ರಿಂದ ಏಪ್ರಿಲ್ ಅಂತ್ಯದವರೆಗೆ ವಿವಿಧ ಜಿಲ್ಲೆಗಳಲ್ಲಿ ಬಾಲ್ಯವಿವಾಹ ನಡೆದಿರುವ ಕುರಿತು 'ಮಕ್ಕಳ ಸಹಾಯವಾಣಿ'ಗೆ ಒಟ್ಟು 151 ದೂರಿನ ಕರೆಗಳು ಬಂದಿವೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಗಳಿಂದ ಹೆಚ್ಚಿನ ದೂರುಗಳು ಬಂದಿವೆ.

'ಲಾಕ್‍ಡೌನ್ ವೇಳೆ ಪೊಲೀಸರು ಹಾಗೂ ಸಂಬಂಧಿತ ಇಲಾಖೆಗಳು ಕೊರೊನಾ ನಿಯಂತ್ರಣ ಸೇವೆಯಲ್ಲಿರುವುದನ್ನೇ ಬಳಸಿಕೊಂಡು ಮನೆಗಳಲ್ಲೇ ಗುಟ್ಟಾಗಿ ಬಾಲ್ಯವಿವಾಹಗಳನ್ನು ನಡೆಸಲು ಮುಂದಾಗಿದ್ದಾರೆ. ದೂರಿನ ಕರೆಗಳನ್ನು ಆಧರಿಸಿ, ಸ್ಥಳೀಯ ಅಧಿಕಾರಿಗೆ ಮಾಹಿತಿ ರವಾನಿಸಲಾಯಿತು. ಅನೇಕ ಬಾಲ್ಯವಿವಾಹಗಳು ನಡೆಯುತ್ತಿರುವ ಮಾಹಿತಿ ಲಭ್ಯವಾಯಿತು. ಅಧಿಕಾರಿಗಳು ಭೇಟಿ ನೀಡಿ ಬಾಲ್ಯವಿವಾಹಗಳನ್ನು ತಡೆದಿದ್ದಾರೆ' ಎಂದು ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ಅಂಥೋನಿ ಸೆಬಾಸ್ಟಿಯನ್ 'ಪ್ರಜಾವಾಣಿ'ಗೆ ತಿಳಿಸಿದರು.

'ಅನಕ್ಷರತೆ, ಮೂಢನಂಬಿಕೆ, ಬಡತನ ಹಾಗೂ ಸಂಪ್ರದಾಯಗಳ ಹೆಸರಿನಲ್ಲಿ ಬಾಲ್ಯವಿವಾಹ ಪದ್ಧತಿ ಇನ್ನೂ ಜೀವಂತವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗದ ವತಿಯಿಂದಲೂ ಸಹಾಯವಾಣಿ ಆರಂಭಿಸಲು ಸಿದ್ಧತೆ ನಡೆಸಲಾಗಿದ್ದು, ಮುಂದಿನ ವಾರದಿಂದ ಸೇವೆ ಆರಂಭವಾಗಲಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಶೀಘ್ರವಾಗಿ ಮಾಹಿತಿ ರವಾನಿಸಲು ಈ ಸಹಾಯವಾಣಿ ನೆರವಾಗಲಿದೆ' ಎಂದರು.

ಲಾಕ್‍ಡೌನ್ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳ ಮೇಲಿನ ದೈಹಿಕ ದೌರ್ಜನ್ಯ ಕುರಿತಾದ ಕರೆಗಳು, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಭೀತಿ, ಖಿನ್ನತೆ ಹಾಗೂ ಬೇಸರಗಳಿಗೆ ಪರಿಹಾರ ಕೋರಿಯೂ ಅನೇಕ ವಿದ್ಯಾರ್ಥಿಗಳು ಹಾಗೂ ಮಕ್ಕಳು ಸಹಾಯವಾಣಿಗೆ ಕರೆ ಮಾಡಿದ್ದಾರೆ.

ಲಾಕ್‍ಡೌನ್ ಬಳಿಕವೂ ಆತಂಕ!

'ಲಾಕ್‍ಡೌನ್‍ನಿಂದ ಶಾಲಾ– ಕಾಲೇಜುಗಳು, ಹಾಸ್ಟೆಲ್‍ಗಳು ಮುಚ್ಚಿವೆ. ವಿದ್ಯಾರ್ಥಿಗಳು ಹಾಗೂ ಹದಿಹರೆಯದ ಮಕ್ಕಳೆಲ್ಲ ತಮ್ಮ ಪೋಷಕರೊಂದಿಗೆ ಮನೆಯಲ್ಲೇ ಇದ್ದಾರೆ. ಈ ವೇಳೆ ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ಲಾಕ್‍ಡೌನ್ ತೆರವಾದ ಬಳಿಕ ಈ ಪ್ರಕರಣಗಳು ಹೆಚ್ಚಾಗುವ ಆತಂಕ ಎದುರಾಗಿದೆ' ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮ ಕಳವಳ ವ್ಯಕ್ತಪಡಿಸಿದರು.

'ಲಾಕ್‍ಡೌನ್‍ನಿಂದ ಎಷ್ಟೋ ಮಂದಿ ಹದಿಹರೆಯದವರು ಪರಸ್ಪರ ಭೇಟಿಯಾಗಲು ಅವಕಾಶ ಇರಲಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಪಡ್ಡೆ ಹುಡುಗರು,  ಬಾಲಕಿಯರನ್ನು ಮರಳು ಮಾಡಿ, ಮನೆ ಬಿಟ್ಟುಬರುವಂತೆ ಉತ್ತೇಜನ ನೀಡುವುದು, ಹೆಣ್ಣುಮಕ್ಕಳ ಅಪಹರಣದಂತಹ ಕಾನೂನುಬಾಹಿರ ಚಟುವಟಿಕೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಪೋಷಕರು ಹಾಗೂ ಇಲಾಖೆ ಎಚ್ಚರವಹಿಸಬೇಕಿದೆ‘ ಎಂದರು.

ಬಾಲ್ಯ ವಿವಾಹದ ಬಗ್ಗೆ ಗಮನ ಇಡುವಂತೆ ಮಾರ್ಚ್‍ನಿಂದಲೇ ಇಲಾಖೆ ಅಧಿಕಾರಿಗಳನ್ನು ಚುರುಕುಗೊಳಿಸಿದ್ದೇವೆ. ಬಾಲ್ಯವಿವಾಹಗಳ ಸುಳಿವನ್ನು ಸ್ಥಳೀಯರೇ ನೀಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ್ ಮಾಹಿತಿ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು