ಕಣ್ಣಲ್ಲಿ ಮುಗ್ಧ ನಗು, ಮಡಿಲಲ್ಲಿ ಮಗು

7
ಲೈಂಗಿಕ ದೌರ್ಜನ್ಯ, ಪ್ರೇಮ ಪ್ರಕರಣಗಳ ಭಯ

ಕಣ್ಣಲ್ಲಿ ಮುಗ್ಧ ನಗು, ಮಡಿಲಲ್ಲಿ ಮಗು

Published:
Updated:

ದಾವಣಗೆರೆ: ಓರಗೆಯ ಮಕ್ಕಳೊಂದಿಗೆ ಆಡುತ್ತಾ, ಬಾಲ್ಯದ ಸುಮಧುರ ಕ್ಷಣಗಳನ್ನು ಅನುಭವಿಸಬೇಕಾಗಿದ್ದ ಹೆಣ್ಣುಮಕ್ಕಳು ಹಸೆಮಣೆ ಏರುತ್ತಿದ್ದಾರೆ. ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕಾಗಿದ್ದ ಅವರ ಹೆಗಲ ಮೇಲೆ ಕುಟುಂಬದ ಜವಾಬ್ದಾರಿ. ಮಡಿಲಲ್ಲಿ ಕರುಳಕುಡಿ. ರಾಜ್ಯದಲ್ಲಿ ಇನ್ನೂ ಜೀವಂತವಾಗಿರುವ ಬಾಲ್ಯವಿವಾಹ ಪಿಡುಗಿಗೆ ಹೆಣ್ಣುಮಕ್ಕಳ ಹೊಂಗನಸು ಕಮರಿ ಹೋಗುತ್ತಿವೆ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬಡತನ, ಸಾಮಾಜಿಕ ಕಾರಣಗಳಿಂದಾಗಿ ಓದು ನಿಲ್ಲಿಸಿದ 18 ವರ್ಷದೊಳಗಿನ ಹೆಣ್ಣುಮಕ್ಕಳ ಮದುವೆ ಮಾಡಿ ಪೋಷಕರು ಕೈತೊಳೆದುಕೊಳ್ಳುತ್ತಿದ್ದಾರೆ.

‘ಹರಪನಹಳ್ಳಿ ತಾಲ್ಲೂಕಿನ ಕರಡಿಗುಡ್ಡದಲ್ಲಿ ತಂದೆ ಕೃಷಿ ಕೂಲಿ ಕಾರ್ಮಿಕ. ಐದನೇ ತರಗತಿವರೆಗೆ ಓದಿ ಶಾಲೆ ಬಿಟ್ಟಿದ್ದೆ. 16 ವರ್ಷದವಳಿದ್ದಾಗಲೇ ತಾಯಿಯ ಸೋದರ ಸಂಬಂಧಿಗೆ ನನ್ನನ್ನು ಮದುವೆ ಮಾಡಿಕೊಟ್ಟರು. ನನ್ನ ಮೊದಲನೇ ಮಗನಿಗೀಗ ಮೂರು ವರ್ಷ. ಎರಡನೇ ಮಗನಿಗೆ ಒಂದು ವರ್ಷ ಮೂರು ತಿಂಗಳಾಗಿದ್ದು, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಬಂದು ಎಂಟು ದಿನಗಳಿಂದ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಮಕ್ಕಳನ್ನು ಸಂಭಾಳಿಸುವುದೇ ಕಷ್ಟವಾಗಿದೆ’ ಎಂದು ಕೊಟ್ಟೂರಿನ ಆಲದಹಳ್ಳಿಯ 21 ವರ್ಷದ ಮಹಿಳೆ ಬಾಲ್ಯವಿವಾಹದ ಕಹಿ ಅನುಭವ ತೆರೆದಿಟ್ಟರು.

ಶೇ 21ರಷ್ಟು ಬಾಲ್ಯವಿವಾಹ:

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌.ಎಫ್‌.ಎಚ್‌.ಎಸ್‌–4) ವರದಿ ಪ್ರಕಾರ 2015–16ರಲ್ಲಿ ರಾಜ್ಯದಲ್ಲಿ 20ರಿಂದ24 ವಯಸ್ಸಿನ ಮಹಿಳೆಯರಲ್ಲಿ ಶೇ 21.4ರಷ್ಟು ಜನ 18 ವರ್ಷದೊಳಗೆ ಮದುವೆಯಾಗಿದ್ದಾರೆ. ನಗರ ಪ್ರದೇಶದಲ್ಲಿ ಇದರ ಪ್ರಮಾಣ ಶೇ 16.8 ಇದ್ದರೆ, ಗ್ರಾಮೀಣ ಭಾಗದಲ್ಲಿ ಶೇ 24.8ರಷ್ಟಿತ್ತು. ಎನ್‌.ಎಫ್‌.ಎಚ್‌.ಎಸ್‌–3 ವರದಿ ಪ್ರಕಾರ 2005–06ರಲ್ಲಿ ಈ ಪ್ರಮಾಣ ಶೇ 41ರಷ್ಟು ಇತ್ತು.

15–19 ವರ್ಷದೊಳಗೆ ತಾಯಿ ಅಥವಾ ಗರ್ಭಿಣಿಯಾದವರ ಪ್ರಮಾಣ ನಗರದಲ್ಲಿ ಶೇ 5.3, ಗ್ರಾಮೀಣ ಪ್ರದೇಶದಲ್ಲಿ ಶೇ 9.6 ಹಾಗೂ ಒಟ್ಟು ಶೇ 7.8 ಇತ್ತು. 2005–06ರಲ್ಲಿ ಈ ಪ್ರಮಾಣ ಒಟ್ಟು ಶೇ 17 ಇತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ದಾವಣಗೆರೆ, ಚಾಮರಾಜನಗರ ಜಿಲ್ಲೆಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ. ಈ ಪೈಕಿ ತಡೆಯಲಾಗುತ್ತಿರುವುದು ಬೆರಳೆಣಿಕೆಯಷ್ಟು ಬಾಲ್ಯವಿವಾಹಗಳನ್ನು ಮಾತ್ರ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್‌ ಇಲಾಖೆ ಸೇರಿ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೇ ಇರುವುದರಿಂದ ಬಾಲ್ಯವಿವಾಹಗಳು ಅವ್ಯಾಹತವಾಗಿ ನಡೆಯುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ.

‘ದಾವಣಗೆರೆ ಜಿಲ್ಲೆಯಲ್ಲಿ ವಿಶೇಷವಾಗಿ ಲಂಬಾಣಿ ತಾಂಡಾಗಳಲ್ಲಿ ಎಸ್‌ಎಸ್‌ಎಲ್‌ಸಿ ಅನುತ್ತೀರ್ಣಗೊಂಡ ಹೆಣ್ಣುಮಕ್ಕಳನ್ನು ಪೋಷಕರು ಮದುವೆ ಮಾಡುತ್ತಿರುವುದು ಕಂಡುಬರುತ್ತಿದೆ. ಯುನಿಸೆಫ್‌ ವರದಿ ಪ್ರಕಾರ ಜಿಲ್ಲೆಯಲ್ಲಿ ಶೇ 25ರಷ್ಟು ಬಾಲ್ಯವಿವಾಹ ನಡೆಯುತ್ತಿದೆ. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಎಂಬ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತಿರುವುದರಿಂದ ಮಕ್ಕಳ ಸಹಾಯವಾಣಿಗೆ ಹೆಚ್ಚಿನ ಕರೆಗಳು ಬರತೊಡಗಿವೆ. ಕಳೆದ ವರ್ಷ ದಾವಣಗೆರೆಯಲ್ಲಿ 76 ಬಾಲ್ಯವಿವಾಹ ತಡೆದಿದ್ದೆವು. ಈ ವರ್ಷ ಇದುವರೆಗೆ 30 ಬಾಲ್ಯವಿವಾಹ ತಡೆದಿದ್ದೇವೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌.

‘ಆರ್ಥಿಕ ಸ್ವಾವಲಂಬನೆಯೇ ಪರಿಹಾರ’
ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿಯಲ್ಲಿ ಅನುತ್ತೀರ್ಣಗೊಂಡು ಮನೆಯಲ್ಲಿರುವ ಹೆಣ್ಣುಮಕ್ಕಳನ್ನೇ ಪೋಷಕರು ಹೆಚ್ಚಾಗಿ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿ ಓದು ನಿಲ್ಲಿಸಿದ ಹೆಣ್ಣುಮಕ್ಕಳನ್ನು ಸರ್ಕಾರ ಗುರುತಿಸಿ ಅವರಿಗೆ ವಿಶೇಷ ವೃತ್ತಿಪರ ತರಬೇತಿ ಕೊಟ್ಟು, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಹೆಣ್ಣುಮಕ್ಕಳು ಒಂದಿಷ್ಟು ಹಣ ಗಳಿಸತೊಡಗಿದಾಗ ಪೋಷಕರು ಸಹ ಆಕೆಯ ಮದುವೆಯನ್ನು ಸಹಜವಾಗಿಯೇ ಒಂದೆರಡು ವರ್ಷ ಮುಂದಕ್ಕೆ ಹಾಕುತ್ತಾರೆ’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ರೂಪನಾಯ್ಕ ಅಭಿಪ್ರಾಯಪಟ್ಟರು.

ಹರಪನಹಳ್ಳಿ, ಜಗಳೂರಿನಲ್ಲಿ ಬಡವರಿಗೆ ಸಕಾಲದಲ್ಲಿ ಕೆಲಸ ಸಿಗದೇ ವಲಸೆ ಹೋಗುತ್ತಿದ್ದಾರೆ. ವಯಸ್ಸಿಗೆ ಬಂದ ಮಗಳನ್ನು ಮಾತ್ರ ಮನೆಯಲ್ಲಿ ಬಿಟ್ಟು ಹೋಗಲು ಭಯಪಡುತ್ತಿದ್ದಾರೆ. ಹೀಗಾಗಿ ಸಣ್ಣ ವಯಸ್ಸಿನಲ್ಲೇ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡುತ್ತಿದ್ದಾರೆ. ಇದನ್ನು ತಡೆಯಲು ‘ನರೇಗಾ’ ಯೋಜನೆಯಡಿ ಜನರಿಗೆ ಸಕಾಲದಲ್ಲಿ ಕೂಲಿ ಕೆಲಸ ಸಿಗುವಂತೆ ನೋಡಿಕೊಳ್ಳಬೇಕು. ವಲಸೆ ಹೋಗುವನ್ನು ಸಂಪೂರ್ಣವಾಗಿ ತಡೆದರೆ ಬಾಲ್ಯವಿವಾಹವೂ ತಕ್ಕ ಮಟ್ಟಿಗೆ ಕಡಿಮೆಯಾಗಲಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

ಬಾಲ್ಯ ವಿವಾಹಕ್ಕಿರುವ ಪ್ರಮುಖ ಕಾರಣಗಳು

* ಬಡತನ– ಒಳ್ಳೆಯ ವರ ಕೈತಪ್ಪಿದರೆ ಮತ್ತೆ ಸಿಗಲಿಕ್ಕಿಲ್ಲ ಎಂಬ ಆತಂಕ

* ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಎಂಬ ಭಯ

* ಯಾರದೋ ಜೊತೆ ಓಡಿಹೋಗಿ ಪ್ರೇಮ ವಿವಾಹ ಮಾಡಿಕೊಂಡರೆ ಎಂಬ ಆತಂಕ

* ವಲಸೆ ಹೋಗುವಾಗ ಮನೆಯಲ್ಲಿ ಮಗಳೊಬ್ಬಳನ್ನೇ ಬಿಟ್ಟು ಹೋಗಲು ಆಗದಿರುವುದು

* ತವರುಮನೆ ಸಂಬಂಧ ಉಳಿಸಿಕೊಳ್ಳಬೇಕು ಎಂಬ ತಾಯಿಯ ಬಯಕೆ

* ಮೊಮ್ಮಗಳ ವಿವಾಹ ನೋಡಬೇಕೆಂಬ ಹಿರಿಯರ ಕೊನೆಯ ಆಸೆ

* ಕೊನೆಯ ಮಗಳ ಮದುವೆಯನ್ನು ಇನ್ನೊಬ್ಬ ಮಕ್ಕಳ ಜೊತೆಗೆ ಮಾಡಬೇಕು ಎಂಬ ಮೂಢನಂಬಿಕೆ

ಬಾಲ್ಯವಿವಾಹದ ದುಷ್ಪರಿಣಾಮಗಳು

* ಹದಿಹರೆಯದಲ್ಲೇ ಗರ್ಭಿಣಿಯಾಗುವುದರಿಂದ ತಾಯಿ ಹಾಗೂ ಮಗು ಅಸುನೀಗುವ ಸಾಧ್ಯತೆ

* ಅಂಕವಿಕಲ ಮಕ್ಕಳು ಹುಟ್ಟುವ ಸಾಧ್ಯತೆ

* ಮಕ್ಕಳು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗಬಹುದು

* ಶಾಲೆ ಬಿಡುವ ಸಂಖ್ಯೆ ಹೆಚ್ಚಳ– ಅನಕ್ಷರತೆ ಪ್ರಮಾಣ ವೃದ್ಧಿ

* ಎಳೆಯ ವಯಸ್ಸಿನಲ್ಲೇ ವಿಧವೆಯಾಗಬಹುದು

ಎನ್‌.ಎಫ್‌.ಎಚ್‌.ಎಸ್‌ ವರದಿ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2015–16ನೇ ಸಾಲಿನಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಮಾದರಿ ಸಮೀಕ್ಷೆ (ಎನ್‌.ಎಫ್‌.ಎಚ್‌.ಎಸ್‌–4) ವರದಿ ಪ್ರಕಾರ ಜಿಲ್ಲೆಯಲ್ಲಿ ಶೇ 23.6ರಷ್ಟು ಬಾಲ್ಯವಿವಾಹಗಳು ನಡೆದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಇದರ ಪ್ರಮಾಣ ಶೇ 29.2 ಇದೆ. ರಾಜ್ಯದ ಒಟ್ಟು ಸರಾಸರಿ ಶೇ 21.4ರಷ್ಟಿದ್ದು, ಗ್ರಾಮೀಣ ಭಾಗದಲ್ಲಿ ಶೇ 24.8ರಷ್ಟಿತ್ತು. ಎಸ್‌ಎಸ್‌ಎಲ್‌ಸಿ ಹಾಗೂ ಹೆಚ್ಚಿನ ಶಿಕ್ಷಣ ಪಡೆದ ಮಹಿಳೆಯರ ಸಂಖ್ಯೆ: ನಗರ– ಶೇ 58.3 ; ಗ್ರಾಮೀಣ– ಶೇ 36.8 ; ಒಟ್ಟು– ಶೇ 45.

‘ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಬಾಲ್ಯವಿವಾಹಗಳಿಂದಾಗುವ ಸಮಸ್ಯೆಗಳ ಬಗ್ಗೆ ಹೆಚ್ಚು ಧ್ವನಿ ಎತ್ತಬೇಕು. ಹೆಣ್ಣುಮಕ್ಕಳು ಶಾಲೆ– ಕಾಲೇಜು ಶಿಕ್ಷಣವನ್ನು ಮಧ್ಯದಲ್ಲೇ ಬಿಡದಂತೆ ನೋಡಿಕೊಳ್ಳಬೇಕು. ಓದು ನಿಲ್ಲಿಸಿದ ಹೆಣ್ಣುಮಕ್ಕಳನ್ನೇ ಹೆಚ್ಚಾಗಿ 18 ವರ್ಷದೊಳಗೆ ಮದುವೆ ಮಾಡಲಾಗುತ್ತಿದೆ. ಬಾಲ್ಯವಿವಾಹದಲ್ಲಿ ವಧು–ವರರ ತಂದೆ–ತಾಯಿ, ವರ ಸೇರಿ ಆಮಂತ್ರಣ ಪತ್ರಿಕೆ ಮುದ್ರಿಸಿದವರನ್ನು ಸೇರಿ ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಶಿಕ್ಷೆ ಕೊಡಿಸಿದ ಪ್ರಕರಣ ದೊಡ್ಡ ಪ್ರಮಾಣದಲ್ಲಿ ವರದಿಯಾದರೆ ಈ ಪಿಡುಗಿಗೆ ಕಡಿವಾಣ ಹಾಕಲು ಸಾಧ್ಯ’ ಎಂಬುದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ರೂಪಾನಾಯ್ಕ ಅಭಿಪ್ರಾಯ.

***

ಬಾಲ್ಯವಿವಾಹದಿಂದ ಹದಿಹರೆಯದಲ್ಲೇ ಗರ್ಭಿಣಿಯಾದರೆ ತಾಯಿ ಹಾಗೂ ಮಗು ಜೀವಕ್ಕೆ ಆಪಾಯ. ಹುಟ್ಟುವ ಮಗುವಿನಲ್ಲೂ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ.
– ಡಾ. ಎಚ್‌.ಡಿ. ನೀಲಾಂಬಿಕೆ, ವೈದ್ಯಕೀಯ ಅಧೀಕ್ಷಕಿ, ದಾವಣಗೆರೆ ಜಿಲ್ಲಾ ಆಸ್ಪತ್ರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !