ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿ ನೀರು ಹಂಚಿಕೆ:ಆಕ್ಷೇಪಣೆಗೆ ದೊರೆಯದ ಕಾಲಾವಕಾಶ

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗಾಗಿ ಕೇಂದ್ರ ಸರ್ಕಾರ ಯೋಜನೆ (ಸ್ಕೀಂ) ರೂಪಿಸಿ ಸಲ್ಲಿಸಿರುವ ಕರಡಿನಲ್ಲಿರುವ ಅಂಶಗಳ ಕುರಿತು ಆಕ್ಷೇಪ ವ್ಯಕ್ತಪಡಿಸಲು ಸಮಯಾವಕಾಶ ಬೇಕು ಎಂಬ ಕರ್ನಾಟಕದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.

ಕೇಂದ್ರ ಸರ್ಕಾರವು ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಹೋಲುವ ಪ್ರಾಧಿಕಾರ ಸ್ಥಾಪಿಸುವಂತೆ ಕರಡಿನಲ್ಲಿ ತಿಳಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಬೇಕೆಂದರೆ, ರಾಜ್ಯದಲ್ಲಿ ಸರ್ಕಾರ, ಸಚಿವ ಸಂಪುಟ ಅಸ್ತಿತ್ವದಲ್ಲಿಲ್ಲ. ಹಾಗಾಗಿ, ವಿಚಾ
ರಣೆ ಮುಂದೂಡಬೇಕು ಎಂದು ಮುಖ್ಯ ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದೆದುರು ರಾಜ್ಯ ಪರ ವಕೀಲ ಶ್ಯಾಂ ದಿವಾನ್‌ ಮನವಿ ಮಾಡಿದರು.

‘ಸಚಿವರು ಇಲ್ಲದ್ದರಿಂದ ವಕೀಲರು ಮತ್ತು ಅಧಿಕಾರಿಗಳೇ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ನಮ್ಮ ನಿರ್ಧಾರವು ಸರ್ಕಾರದ ನಿರ್ಧಾರ ಆಗಲಾರದು. ಹಾಗಾಗಿ ಜುಲೈ ಮೊದಲ ವಾರ ವಿಚಾರಣೆ ನಡೆಯಲಿ’ ಎಂದು ಅವರು ಪೀಠವನ್ನು ಕೋರಿದರು.

ಕೇಂದ್ರ ಸರ್ಕಾರದ ಮನವಿಯ ಮೇರೆಗೆ ಹಲವು ಬಾರಿ ಕಾವೇರಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ. ಈಗ ರೂಪಿಸುವ ಯೋಜನೆ ಮುಂದಿನ 15 ವರ್ಷಗಳವರೆಗೆ ಅಸ್ತಿತ್ವದಲ್ಲಿರಲಿದ್ದು, ಸರ್ಕಾರ ರಚನೆ ನಂತರ ಅಭಿಪ್ರಾಯ ಮಂಡನೆಗೆ ಅವಕಾಶ ಬೇಕು ಎಂದೂ ಅವರು ಆಗ್ರಹಿಸಿದರು.

ಈ ಮನವಿಯನ್ನು ವಿರೋಧಿಸಿದ ತಮಿಳುನಾಡು ವಕೀಲ ಶೇಖರ್ ನಾಫಡೆ, ಈ ಮೂಲಕ ಕರ್ನಾಟಕವು ಜೂನ್‌ನಲ್ಲಿ ನೀರು ಹರಿಸದಿರಲು ನಿರ್ಧರಿಸಿದಂತಿದೆ ಎಂದರು. ಈಗ ಅಸ್ತಿತ್ವದಲ್ಲಿರುವ ಮೇಲುಸ್ತುವಾರಿ ಸಮಿತಿ ನೀರು ಹರಿಸುವ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ದಿವಾನ್‌ ಹೇಳಿದರು.

ಯೋಜನೆ ರೂಪಿಸುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಪಾತ್ರ ವಹಿಸಲಿದೆ. ಹಾಗಾಗಿ ಹೆಚ್ಚಿನ ಸಮಯಾವಕಾಶ ನೀಡಲಾಗದು ಎಂದು ರಾಜ್ಯದ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಪೀಠ, ಗುರುವಾರ ನಡೆಯಲಿರುವ ವಿಚಾರಣೆಯ ವೇಳೆ ಕರ್ನಾಟಕ ತನ್ನ ಅಭಿಪ್ರಾಯ ಮಂಡಿಸಬೇಕು ಎಂದು ಹೇಳಿತು.

ದೆಹಲಿಯಲ್ಲಿ ಕೇಂದ್ರ ಕಚೇರಿ: ಯೋಜನೆಯ ಕರಡಿನಲ್ಲಿ ಇರುವ ಕೆಲವು ಅಂಶಗಳನ್ನು ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠವು, ಪ್ರಸ್ತಾವಿತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ಬೆಂಗಳೂರಿನ ಬದಲಿಗೆ, ನವದೆಹಲಿಯಲ್ಲಿ ಸ್ಥಾಪಿಸುವಂತೆ ತಿಳಿಸಿತು.

ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲು ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ. ಪ್ರಾಧಿಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸಲಿರುವ ಕಾವೇರಿ ನೀರು ನಿಯಂತ್ರಣ ಸಮಿತಿ- ಕಚೇರಿ ಬೇಕಾದರೆ ಬೆಂಗಳೂರಿನಲ್ಲಿ ಇರಲಿ ಎಂದು ನ್ಯಾ. ಮಿಶ್ರಾ ಸಲಹೆ ನೀಡಿದರು.

ನೀರು ಹಂಚಿಕೆ ಕುರಿತು ಯಾವುದೇ ರಾಜ್ಯ ಅಸಮ್ಮತಿ ಸೂಚಿಸಿದಲ್ಲಿ ಪ್ರಾಧಿಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿ. ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸುವ ಪದ್ಧತಿ ಬೇಡ. ಎಲ್ಲ ಅಧಿಕಾರವೂ ಪ್ರಾಧಿಕಾರಕ್ಕೇ ಇರಲಿ ಎಂದು ಪೀಠ ಸೂಚಿಸಿತು.

ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಅಧಿಕಾರಿಗಳನ್ನು ನೇಮಿಸದೆ, ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕು ಎಂಬ ತಮಿಳುನಾಡಿನ ಬೇಡಿಕೆಯನ್ನು ತಳ್ಳಿ ಹಾಕಿದ ನ್ಯಾಯಪೀಠ, ನೀರು ಹಂಚಿಕೆ ಮತ್ತು ಪ್ರಾಧಿಕಾರದ ಕೆಲಸ– ಕಾರ್ಯಗಳಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಇರಕೂಡದು ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT