ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಟಾಡಿಯಲ್ಲಿದೆ ಪೇಜಾವರ ಸ್ವಾಮೀಜಿ ಹುಟ್ಟಿದ ಮನೆ

Last Updated 29 ಡಿಸೆಂಬರ್ 2019, 12:15 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಕಡಬ ತಾಲ್ಲೂಕು ರಾಮಕುಂಜ ಸಮೀಪದ ಎರಟಾಡಿಯಲ್ಲಿರುವ ಮನೆಯಲ್ಲಿ 1931ರ ಏಪ್ರಿಲ್ 27ರಂದು ಶಿವಳ್ಳಿ ಬ್ರಾಹ್ಮಣ ಪಡ್ಡಿಲ್ಲಾಯ ಕುಟುಂಬದ ಮೀಯಾಳ ನಾರಾಯಣ ಆಚಾರ್ಯ ಹಾಗೂ ಕಮಲಮ್ಮ ದಂಪತಿ ಪುತ್ರನಾಗಿ ಜನಿಸಿದ ವೆಂಕಟ್ರಾಮ (ವೆಂಕಟರಮಣ)ಅವರೇ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ.

ಪೇಜಾವರ ಶ್ರೀಗಳ ಬಾಲ್ಯದ ಹೆಸರು ವೆಂಕಟ್ರಾಮ(ವೆಂಕಟರಮಣ). ಬಾಲ್ಯದ ಕಾಲವನ್ನು ಎರಟಾಡಿ, ರಾಮಕುಂಜ, ಸೋದರ ಮಾವನ ಮನೆಯಾದ ಕಾಣಿಯೂರಿನ ತುಂಬ್ಯ ಹಾಗೂ ಚಿಕ್ಕಪ್ಪ ನರಸಿಂಹಾಚಾರ್ಯರು ದಿವಾನರಾಗಿ ಕಾರ್ಯನಿರ್ವಹಿಸುತ್ತಿದ್ದ ಪೇಜಾವರ ಮಠದ ಪರಿಸರದಲ್ಲಿ ಕಳೆದಿದ್ದರು.

ಇವರು ತಮ್ಮ ಪೂರ್ವಾಶ್ರಮದಲ್ಲಿ ಒಟ್ಟು ನಾಲ್ಕು ಶಾಲೆಗಳಿಗೆ ಹೋಗಿದ್ದರು. ಮನೆ ಸಮೀಪದ ನೇರೆಂಕಿ, ಕಾಣಿಯೂರು ಸಮೀಪದ ಬೆಳಂದೂರು, ಉಡುಪಿಯ ಮೈನ್‌ ಸ್ಕೂಲ್‌ ಹಾಗೂ ರಾಮಕುಂಜದ ಸಂಸ್ಕೃತ ಶಾಲೆಗಳು. ನೇರೆಂಕಿ ಶಾಲೆಗೆ ಶ್ರೀಗಳು ಅಧಿಕೃತವಾಗಿ ದಾಖಲಾಗಿರಲಿಲ್ಲ. ಅಕ್ಕ ಲಕ್ಷ್ಮೀ ಹಾಗೂ ಸಹೋದರ ಮಧುಸೂದನ ಜೊತೆಗೆ ಹೋಗಿದ್ದರು.

1936ರಲ್ಲಿ ಉಡುಪಿ ಪೇಜಾವರ ಮಠದ ಯತಿಗಳಾಗಿದ್ದ ವಿಶ್ವಮಾನ್ಯತೀರ್ಥರ ಪರ್ಯಾಯ ಕಾಲದ ಸಂದರ್ಭದಲ್ಲಿ ಪರ್ಯಾಯ ಕೆಲಸಗಳನ್ನು ನಿರ್ವಹಿಸಲು ಬಾಲಕ ವೆಂಕಟ್ರಾಮ (ಸ್ವಾಮೀಜಿ)ರ ತಂದೆ ನಾರಾಯಣ ಆಚಾರ್ಯ ಅವರು ಉಡುಪಿಗೆ ತೆರಳಿದ್ದರು. ಈ ವೇಳೆ ತಾಯಿ ಕಮಲಮ್ಮ ಜೊತೆ ಸೋದರ ಮಾವನ ಮನೆಯಾದ ಕಾಣಿಯೂರಿನ ತುಂಬ್ಯ ಮನೆಯಲ್ಲಿ ಉಳಿದುಕೊಂಡು ಬೆಳಂದೂರು ಶಾಲೆಗೂ ಹೋಗಿದ್ದರು. ಅಲ್ಲಿಯೂ ಅವರು ಅಧಿಕೃತವಾಗಿ ದಾಖಲಾಗಿರಲಿಲ್ಲ. ಬಳಿಕ ತಾಯಿಯ ಜೊತೆ ಉಡುಪಿಗೆ ತೆರಳಿ ಅಲ್ಲಿಯೇ ತಂಗಿದ್ದರು.

ಈ ಅವಧಿಯಲ್ಲಿ ಕೆಲ ತಿಂಗಳು ಉಡುಪಿಯ ಮೈನ್‌ ಶಾಲೆಯಲ್ಲಿ 1ನೇ ತರಗತಿಯ ವಿದ್ಯಾರ್ಥಿಯಾಗಿದ್ದರು. 1938 ಜನವರಿಯಲ್ಲಿ ವಿಶ್ವಮಾನ್ಯ ತೀರ್ಥರ ಪರ್ಯಾಯ ಅವಧಿ ಮುಗಿದ ತಕ್ಷಣ, ನಾರಾಯಣ ಆಚಾರ್ಯರು ರಾಮಕುಂಜಕ್ಕೆ ಮರಳಿದರು. ಇವರೊಂದಿಗೆ ಬಾಲಕ ವೆಂಕಟ್ರಾಮ(ವಿಶ್ವೇಶತೀರ್ಥ) ಸಹ ರಾಮಕುಂಜಕ್ಕೆ ಆಗಮಿಸಿದ್ದರು. ಬಳಿಕ ರಾಮಕುಂಜೇಶ್ವರ ದೇವಸ್ಥಾನದ ಗೋಪುರದಲ್ಲಿ ನಡೆಯುತ್ತಿದ್ದ ವೇದ ಪಾಠ ಶಾಲೆಗೆ 1938ರ ಮಾರ್ಚ್‌ 4ರಂದು ಸೇರ್ಪಡೆಗೊಂಡಿದ್ದರು. ರಾಮಕುಂಜ ಶಾಲೆಗೆ ಎರಟಾಡಿಯ ತಮ್ಮ ಮನೆಯಿಂದ ಬಯಲುದಾರಿಯಲ್ಲಿ ನಡೆದುಕೊಂಡೇ ಹೋಗುತ್ತಿದ್ದರು.

ವೆಂಕಟ್ರಾಮ (ಸ್ವಾಮೀಜಿ) ಸೇರಿದಂತೆ ನಾರಾಯಣ ಆಚಾರ್ಯ-ಕಮಲಮ್ಮ ದಂಪತಿಗೆ ಆರು ಮಕ್ಕಳು. ಲಕ್ಷ್ಮೀ, ವೆಂಕಟ್ರಾಮ, ಮಧುಸೂದನ, ವಸಂತಿ, ಕುಸುಮಾ ಮತ್ತು ರಘುರಾಮ.1938ರ ಡಿಸೆಂಬರ್‌ 2ರಂದು ಸನ್ಯಾಸ ಸ್ವೀಕರಿಸಿದವೆಂಕಟ್ರಾಮ ಅವರೇ ಪೇಜಾವರ ಶ್ರೀಗಳಾದರು.

ಇವರು ಜನಿಸಿದ ಮನೆ ರಾಮಕುಂಜ ಸಮೀಪದ ಹಳೆನೇರೆಂಕಿಯ ಎರಟಾಡಿಯಲ್ಲಿದೆ. ನವೀಕರಣಗೊಂಡ ಈ ಮನೆಯಲ್ಲಿ ವಿಶ್ವೇಶತೀರ್ಥರ ಸಹೋದರ ದಿ. ಮಧುಸೂದನ ಆಚಾರ್ಯರ ಮಗ, ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿರುವ ಎಂ. ಹರಿನಾರಾಯಣ ಆಚಾರ್ಯ ಮತ್ತು ಅವರ ಕುಟುಂಬ ವಾಸ್ತವ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT