ಬುಧವಾರ, ಆಗಸ್ಟ್ 4, 2021
29 °C

ಮಕ್ಕಳ ಕಾಳಜಿ ಹೀಗೂ ಇರಲಿ

ದೇವಿದಾಸ ಸುವರ್ಣ Updated:

ಅಕ್ಷರ ಗಾತ್ರ : | |

l ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡು ಹೋಗುವಾಗ ಕೇವಲ ಶಾಲೆಯ ಪಾಠದ ವಿಷಯವನ್ನೇ ಕೇಳುತ್ತ, ‘ಸ್ಪೆಲ್ಲಿಂಗ್ ಹೇಳು, ರೈಮ್ಸ್ ಹೇಳು, ಎಬಿಸಿಡಿ ಹೇಳು’ ಇತ್ಯಾದಿಯಾಗಿ ಪ್ರಶ್ನಿಸುತ್ತ ಸಾಗಬೇಡಿ. ಮಕ್ಕಳೂ ಅವರದ್ದೇ ಯೋಚನೆಯ, ಪಾಠದ್ದಲ್ಲದ ಹಲವಾರು ಪ್ರಶ್ನೆ ಕೇಳಿ ತಿಳಿದುಕೊಳ್ಳ ಬಯಸುತ್ತವೆ. ಅವಕ್ಕೂ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಡಿ. ಅವರ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ಕೊಡದೇ ಸೂಕ್ತವಾದ ಉತ್ತರ ಕೊಡುತ್ತ ಸಾಗಿ.

l ಚಿಕ್ಕಂದಿನಲ್ಲೇ ಮಕ್ಕಳಿಗೆ ಮೊಬೈಲ್‌ನ ರುಚಿ ತೋರಿಸಬೇಡಿ. ಆದಷ್ಟು ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಲು ಪ್ರಯತ್ನಿಸಿ. ಅದಕ್ಕೂ ಮೊದಲು ಪಾಲಕರಾದ ನೀವು ಮಕ್ಕಳೆದುರು ಮೊಬೈಲ್ ಬಳಸುವುದನ್ನು ನಿಲ್ಲಿಸಿ. ಮಕ್ಕಳು ಆಸಕ್ತಿಯನ್ನು ಬೇರೆಡೆ ತಿರುಗಿಸಿ. ಆಡಿ ನಲಿಯಲು ಮನೆಯಲ್ಲಿರುವ ಬ್ಯಾಟು, ಚೆಂಡು ಇತ್ಯಾದಿಗಳಿಗೆ ಮೊರೆ ಹೋಗಿ. ಅವುಗಳೊಂದಿಗೆ ಆಡಿ ನಲಿದು, ದಣಿದು, ಖುಷಿ ಪಡುವರು, ಆರೋಗ್ಯವೂ ಸುಧಾರಿಸುತ್ತದೆ.

l ಮನೆಯಲ್ಲಿ ಮಕ್ಕಳು ಚಿತ್ರ ಬಿಡಿಸಲು, ಹಾಡಲು, ಶಾಲೆಯಲ್ಲಿಯ ಘಟನೆಗಳನ್ನು ಖುಷಿಯಿಂದ ಹೇಳಲು ಹಾತೊರೆಯುತ್ತವೆ. ಅವಕ್ಕೆಲ್ಲ ಅವಕಾಶ ಕೊಡದೇ ‘ಚಿತ್ರ ಗಿತ್ರ ಏನೂ ಬೇಡ, ನಿನ್ನ ಹಾಡು ಸಾಕು, ನಿನ್ನ ಮಾತು ಬೇಡ’ ಎಂದು ಗದರಿಸಿ ‘ಬಾ ಹೋಂವರ್ಕ್ ಮಾಡು, ಅಭ್ಯಾಸ ಮಾಡು ಬಾ’ ಎಂದು ಹೇಳುತ್ತ ಅವರ ಆಸೆಗೆ ತಣ್ಣೀರು ಎರಚಬೇಡಿ.

l ನೂರಕ್ಕೆ ನೂರೇ ತೆಗೆಯಬೇಕು ಎಂದು ಮಕ್ಕಳಿಗೆ ಗದರಿಸುತ್ತ, ಮುಂಜಾನೆ ಎದ್ದು ಹಲ್ಲುಜ್ಜುವಾಗ, ಶೌಚಾಲಯದಲ್ಲಿ ಇರುವಾಗ ಪಾಠದ ಪ್ರಶ್ನೆ ಕೇಳುತ್ತ, ಕುಂತಲ್ಲಿ ನಿಂತಲ್ಲಿ ‘ಓದು, ಬರೆಯಲು ಕೂರು’ ಎಂದು ಹೇಳುತ್ತ ಮಕ್ಕಳು ಹೇಗೆ ಬೇಕೊ ಹಾಗೆ ನಲಿಯಲು ಕೊಡದೇ ಅವರಿಗೆ ಹಿಂಸಿಸಬೇಡಿ. ದೇಶದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿ ದೇಶಕ್ಕೆ ಹೆಸರು ತಂದ ಅನೇಕ ಗಣ್ಯರು ಕಲಿಯುವಾಗ ಅನುತ್ತೀರ್ಣರಾದವರೂ, ಕಡಿಮೆ ಅಂಕ ಗಳಿಸಿ ಪಾಸಾದವರೂ ಇದ್ದಾರೆ ಎಂಬುದು ಮರೆಯಬೇಡಿ.

l ಮಕ್ಕಳನ್ನು ಪ್ರವಾಸದ ನೆಪದಲ್ಲಿ ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಪರಿಸರ ಹಾಗೂ ಜೀವವೈವಿಧ್ಯಗಳ ಪರಿಚಯ ಮಾಡಿಸಬೇಕು. ಇದರಿಂದ ಅವರಿಗೆ ನೇರವಾಗಿ ಪ್ರಾಣಿ– ಪಕ್ಷಿ, ಕ್ರಿಮಿ–ಕೀಟಗಳ ಪರಿಚಯ ಮಾಡಿಸಿದಂತಾಗುತ್ತದೆ. ಜೊತೆಗೆ ಪಾಠದಲ್ಲಿ ಬರುವ ಜೀವ ಸಂಕುಲಗಳ ಬಗೆಗಿನ ಕುತೂಹಲವನ್ನು ತಣಿಸಿದಂತಾಗುತ್ತದೆ. ಅವುಗಳನ್ನು ಸೂಕ್ಷವಾಗಿ ಗಮನಿಸಲು ಹೇಳಿ ಅವರಿಗಿರುವ ಅನುಮಾನಗಳನ್ನು ಪರಿಹರಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು