ಭಾನುವಾರ, ಆಗಸ್ಟ್ 25, 2019
20 °C
ಕಂಪ್ಲಿ–ಗಂಗಾವತಿ ಸೇತುವೆ ಮುಳುಗಡೆ

ಪ್ರವಾಹದ ನೀರಲ್ಲಿ ಆಡಿದ ಮಕ್ಕಳು!

Published:
Updated:
Prajavani

ಕಂಪ್ಲಿ: ಪಟ್ಟಣದ ಕೋಟೆ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಳೇ ಸೇತುವೆಯು ಭಾನುವಾರ ಬೆಳಕಾಗುವ ಮುನ್ನವೇ ನದಿ ನೀರಲ್ಲಿ ಮುಳುಗಿ ಸೇತುವೆ ಅಂಚಿನ ಹೊಳೆದಂಡೆಯ ಮೀನುಗಾರರ ಓಣಿಗೂ ನುಗ್ಗಿತ್ತು.

80 ಕುಟುಂಬಗಳ ಪೈಕಿ ಹಲವರು ಅಗತ್ಯ ಸಾಮಗ್ರಿಗಳನ್ನು ಓಣಿ ಪಕ್ಕದ ಶಾಲೆಗೆ ಸಾಗಿಸುತ್ತಿದ್ದರು. ಅದೇ ಕುಟುಂಬಗಳ ಮಕ್ಕಳು ಮಾತ್ರ ಕೈಕೈ ಹಿಡಿದ ಮೊಣಕಾಲುದ್ದದ ನೀರಲ್ಲಿ ಜಿಗಿಜಿಗಿದು ಸಂಭ್ರಮಿಸುತ್ತಿದ್ದರು!

ಅವರಿಗೆ ಪ್ರವಾಹ ಯಾವುದೇ ಭಯ, ಆತಂಕ ಮತ್ತು ಅನಿಶ್ಚಿತತೆಯ ಭಾವನೆಯನ್ನು ಮೂಡಿಸಿರಲಿಲ್ಲ. ಕೋಟೆ ಪ್ರದೇಶದ ಆಂಜನೇಯ ಗುಡಿಯೂ ಬಹುತೇಕ ಮುಳುಗಿದ್ದರೂ, ಬಾಲಕನೊಬ್ಬ ನೀರಿನಲ್ಲೇ ಪೂಜಾ ಸಾಮಗ್ರಿ ಹಿಡಿದುಕೊಂಡು ನಡೆದು ಬರುತ್ತಿದ್ದ.

ಸೇತುವೆಯ ಆರಂಭದ ಬಿಂದುವಿನಲ್ಲಿ ನಿಂತು ಶಾಸಕ ಜೆ.ಎನ್‌.ಗಣೇಶ್‌, ಉಪವಿಭಾಗಾಧಿಕಾರಿ ಪಿ.ಎನ್‌.ಲೋಕೇಶ್‌ ಸನ್ನಿವೇಶವನ್ನು ಅವಲೋಕಿಸುತ್ತಿದ್ದ ವೇಳೆಯಲ್ಲೇ ಹಲವರು, ಮುಳುಗಿದ ಸೇತುವೆಯ ಫೋಟೋಗಳನ್ನು ತಮ್ಮ ಮೊಬೈಲ್‌ಫೋನ್‌ಗಳಲ್ಲಿ ತೆಗೆಯುತ್ತಿದ್ದರು.

ಮೀನುಗಾರರ ಪೈಕಿ ಹಲವರು ಚಿಂತೆಯಲ್ಲಿ ನಿಂತಿದ್ದರು. ಮಾತಿಗಿಳಿದ ‘ಪ್ರಜಾವಾಣಿ’ಗೆ ಸಮಾಧಾನಚಿತ್ತದಿಂದಲೇ ಪ್ರತಿಕ್ರಿಯಿಸಿದ ಮೀನುಗಾರ ಕೃಷ್ಣ, ‘ಪ್ರತಿ ಬಾರಿ ಪ್ರವಾಹ ಬಂದಾಗಲೂ ಹೀಗೇ ಇರುತ್ತದೆ. ನಮಗೇನೂ ಭಯವಿಲ್ಲ. ಇನ್ನೂ ನಾವು ಸ್ಥಳಾಂತರೊಂಡಿಲ್ಲ. ಅಧಿಕಾರಿಗಳು ಹೇಳಿದರೆ ಹೋಗುತ್ತೇವೆ ಎಂದರು.

ಅವರು ಹಾಗೆ ಹೇಳುವ ಸಮಯದಲ್ಲೇ, ಓಣಿ ಪಕ್ಕದ ಶಾಲೆಗೆ ನಸುಕಿನಲ್ಲೇ ಸ್ಥಳಾಂತರಗೊಂಡಿದ್ದ ಕುಟುಂಬಗಳ ಮಹಿಳೆಯರು ಸಾಮಗ್ರಿಗಳನ್ನು ಜೋಡಿಸಿಟ್ಟುಕೊಳ್ಳುತ್ತಿದ್ದರು. ಬಾಣಂತಿ ಪುಷ್ಪ ಅವರ ಏಳು ತಿಂಗಳ ಮಗುವಿಗೆ ಮನೆಯ ಹಿರಿಯಜ್ಜಿ ಸ್ನಾನ ಮಾಡಿಸಿದ್ದಾಗಿತ್ತು.

ಹುಲಿಗೆಮ್ಮ, ತಿಪ್ಪಮ್ಮ, ವೀಣಾ ಮಧ್ಯಾಹ್ನದ ಊಟಕ್ಕೇನು ಮಾಡುವುದು ಎಂಬ ಚಿಂತೆಯಲ್ಲಿದ್ದರು. ಗಂಜಿ ಕೇಂದ್ರವೂ ಆಗಿರುವ ಶಾಲೆಯಲ್ಲಿ ಆಹಾರ ಇಲಾಖೆ ಸಿಬ್ಬಂದಿ ಅಡುಗೆ ಅನಿಲ ಸಿಲಿಂಡರ್‌, ಆಹಾರಧಾನ್ಯಗಳನ್ನು ತಂದಿಟ್ಟಿದ್ದರು.

ಶಾಲೆಯ ಆವರಣದ ಒಂದು ಮೂಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಔಷಧಿಗಳೊಂದಿಗೆ ಕುಳಿತಿದ್ದರು. ಐವರು ಆರೋಗ್ಯ ಸಹಾಯಕಿಯರು, ಒಬ್ಬ ವೈದ್ಯ ಹಾಗೂ ಒಬ್ಬ ಫಾರ್ಮಾಸಿಸ್ಟ್‌ ಅನ್ನು ನಿಯೋಜಿಸಲಾಗಿದೆ. ಹೊಳೆದಂಡೆ ಸಾಲಿನ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ಟ್ರಾನ್ಸ್‌ಫಾರ್ಮರ್ ನಿರ್ವಹಣೆಗೆ ಮೂವರು ಸಿಬ್ಬಂದಿಯನ್ನು ಜೆಸ್ಕಾಂ ನಿಯೋಜಿಸಿತ್ತು.

ಹೊಳೆದಂಡೆಯಿಂದ ಕನಿಷ್ಠ 300 ಮೀಟರ್‌ ದೂರದಲ್ಲೇ ಜನರನ್ನು ನಿಯಂತ್ರಿಸುವ ಸಲುವಾಗಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಹುಲುಗಪ್ಪ ನೇತೃತ್ವದಲ್ಲಿ ಒಬ್ಬ ಪಿಎಸ್‌ಐ, ಎಎಸ್‌ಐ ಹಾಗೂ 15 ಕಾನ್‌ಸ್ಟೆಬಲ್‌ಗಳು ಕರ್ತವ್ಯನಿರತರಾಗಿದ್ದರು. ನೀರು ಪ್ರತಿ ನಿಮಿಷಕ್ಕೂ ಹೊಳೆದಂಡೆ ದಾಟಿಕೊಂಡು ಮೀನುಗಾರರ ಓಣಿಯನ್ನು ಇನ್ನಷ್ಟು ಆವರಿಸುತ್ತಲೇ ಇತ್ತು.

ವಾಹನ ಸಂಚಾರ ಸ್ಥಗಿತ
ಸೇತುವೆ ಮುಳುಗಡೆಯಾಗಿರುವುದರಿಂದ ಹೊಸಪೇಟೆ ಕಡೆಯಿಂದ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಿಗೆ, ಆಂಧ್ರ, ತೆಲಂಗಾಣದ ಪ್ರದೇಶಗಳಿಗೆ ತೆರಳುವ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ದಿನವೂ ಈ ಮಾರ್ಗದಲ್ಲಿ ಸುಮಾರು 200 ಬಸ್‌ಗಳು ಸಂಚರಿಸುತ್ತಿದ್ದವು. ಅವುಗಳಲ್ಲಿ ರಾಜ್ಯ ರಸ್ತೆಸಾರಿಗೆ ಸಂಸ್ಥೆಯವೇ ಹೆಚ್ಚು.

ಸೇತುವೆಯ ಇನ್ನೊಂದು ತುದಿಯು ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರಕ್ಕೆ ಸೇರಿದ್ದು, ಗಂಗಾವತಿಗೂ ಸಂಪರ್ಕ ಕಲ್ಪಿಸುತ್ತದೆ. ನೀರು ಈ ಎರಡೂ ಊರುಗಳ ನಡುವಿನ ಸಂಪರ್ಕ, ಸಂಬಂಧಕ್ಕೂ ತೊಡಕಾಗಿದೆ.

‘ಪರಿಹಾರ ಪದ್ಧತಿ ಬದಲಾಗಲಿ’
‘ಮಳೆಯಿಂದ ಆಗುವ ಹಾನಿ ಹಾಗೂ ಜಲಾಶಯದಿಂದ ನೀರು ಬಿಟ್ಟ ಸಂದರ್ಭದಲ್ಲಿ ಹಾನಿಯಾದಾಗ ಸರ್ಕಾರ ಪರಿಹಾರ ನೀಡುವ ಪದ್ಧತಿ ತುಂಬಾ ಹಳೆಯದು. ಹಾನಿಯ ಪ್ರಮಾಣಕ್ಕೆ ತಕ್ಕಂತೆಪರಿಹಾರ ಕೊಡುವುದಿಲ್ಲ. ಇದು ಬದಲಾವಣೆಯಾಗಬೇಕು’ ಎಂದು ಶಾಸಕ ಜೆ.ಎನ್‌.ಗಣೇಶ್‌ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಂಪ್ಲಿ ಸೇತುವೆ ಬಳಿಯ 500 ಕುಟುಂಬಗಳ ಮನವೊಲಿಸಿ ಸ್ಥಳಾಂತರಿಸಲಾಗುವುದು. ಸುಸಜ್ಜಿತ ಮನೆ ನಿರ್ಮಿಸಿಕೊಡಲಾಗುವುದು’ ಎಂದರು. ಉಪವಿಭಾಗಾಧಿಕಾರಿ ಪಿ.ಎನ್.ಲೋಕೇಶ್‌, ತಹಸೀಲ್ದಾರ್ ರೇಣುಕಾ ಇದ್ದರು.

Post Comments (+)