ಬುಧವಾರ, ಅಕ್ಟೋಬರ್ 21, 2020
25 °C

ತಾಯಿಯನ್ನೇ ಬೀದಿಗೆ ತಳ್ಳಿದ ಮಕ್ಕಳು; ಮಳೆಯಲ್ಲಿ ನರಳಿದ ವೃದ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಯಿಲೆ ಬಂತೆಂಬ ಕಾರಣಕ್ಕೆ ತಾಯಿಯನ್ನೇ ಮಕ್ಕಳು ಬೀದಿಗೆ ತಳ್ಳಿದ್ದು, ಆ ತಾಯಿ ಶನಿವಾರ ಸಂಜೆ ಸುರಿವ ಮಳೆಯಲ್ಲೇ ಪಾದಚಾರಿ ಮಾರ್ಗದಲ್ಲಿ ನರಳುತ್ತ ಬಿದ್ದಿದ್ದರು. ಸ್ಥಳೀಯರು ಸಹ ವೃದ್ಧೆಯ ಸಹಾಯಕ್ಕೆ ಹೋಗದೆ ಮಾನವೀಯತೆ ಮರೆತರು.

ನಗರದಲ್ಲಿ ಶನಿವಾರ ಜೋರು ಮಳೆ ಆಗಿತ್ತು. ಕಮಲಾನಗರದಲ್ಲೂ ಮಳೆ ಆರ್ಭಟ ಇತ್ತು. ಇದೇ ವೇಳೆ ವೃದ್ಧೆಯೊಬ್ಬರು ಪಾದಚಾರಿ ಮಾರ್ಗದಲ್ಲಿ ಕುಸಿದು ಬಿದ್ದಿದ್ದರು. ಯಾರೊಬ್ಬರೂ ಅವರ ರಕ್ಷಣೆಗೆ ಹೋಗಿರಲಿಲ್ಲ. ಅವರನ್ನು ಮೇಲಕೆತ್ತಿ ಸುರಕ್ಷಿತ ಸ್ಥಳಕ್ಕೂ ಕರೆದೊಯ್ದಿರಲಿಲ್ಲ.

ಸಂಜೆಯಿಂದ ರಾತ್ರಿಯವರೆಗೂ ವೃದ್ಧೆ ಪಾದಚಾರಿ ಮಾರ್ಗದಲ್ಲೇ ನರಳುತ್ತಿದ್ದರು. ಸ್ನೇಹಿತರೊಬ್ಬರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಹೋಗಿದ್ದ ಜನಸೇವಾ ಕೇಂದ್ರದ ಮಹೇಶ್ ಎಂಬುವರು ವೃದ್ಧೆಗೆ ನೆರವಾದರು. ಮಳೆಯಲ್ಲಿ ನೆನೆದಿದ್ದರಿಂದ ವೃದ್ಧೆ ನಡುಗುತ್ತಿದ್ದರು. ಮಹೇಶ್ ಹಾಗೂ ಅವರ ಸ್ನೇಹಿತರೇ ವೃದ್ಧೆಯನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

‘ವೃದ್ಧೆ ಬಳಿಯೇ ಸಾಕಷ್ಟು ಜನ ಓಡಾಡಿದರೂ ಯಾರೊಬ್ಬರೂ ಸಹಾಯಕ್ಕೆ ಹೋಗಿಲ್ಲ. ಮಾನವೀಯತೆಯೇ ಸತ್ತು ಹೋಗಿದೆಯಾ? ಎಂದು ಅನಿಸಿತು. ಈಗ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಮಹೇಶ್ ಹೇಳಿದರು.

‘ಅವರ ಹೆಸರು ವೈಶಾಲಿ (60) ಎಂದು ಗೊತ್ತಾಗಿದೆ. ಮಕ್ಕಳೇ ಅವರನ್ನು ಬೀದಿಗೆ ತಂದು ಬಿಟ್ಟು ಹೋಗಿದ್ದಾರೆ. ಮಕ್ಕಳೇ ಈ ರೀತಿ ಮಾಡಿದರೆ, ಜನರು ಏನು ಮಾಡಲು ಸಾಧ್ಯ’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು