ಗುರುವಾರ , ನವೆಂಬರ್ 21, 2019
22 °C
‘ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ’

ಮಕ್ಕಳ ದಸರಾ: ಚೆಕ್‌ ನೀಡದ್ದಕ್ಕೆ ಸಚಿವ ಸೋಮಣ್ಣ ಅಸಮಾಧಾನ

Published:
Updated:
Prajavani

ಮೈಸೂರು: ಮಕ್ಕಳ ದಸರಾಕ್ಕೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ಮೂವರು ಮಕ್ಕಳನ್ನು ಸನ್ಮಾನಿಸುವಾಗ, ಅವರಿಗೆ ನೀಡಬೇಕಾದ ಚೆಕ್‌ ನೀಡದೇ ಇರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಸನ್ಮಾನಕ್ಕೂ ತಕ್ಷಣ ಮುಂದಾಗಲಿಲ್ಲ.

ಸೋಮವಾರ ನಡೆದ ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಬಾಲ ಸಂಗೀತ ಪ್ರತಿಭೆಗಳಾದ ಗದಗ ಜಿಲ್ಲೆಯ ಅಂಧ ಬಾಲಕಿ ಸಂಗೀತಾ, ಹಾವೇರಿ ಜಿಲ್ಲೆಯ ರುಬೀನಾ ಹಾಗೂ ಮೈಸೂರಿನ ನಯನ ನಾಗರಾಜ್‌ ವಿಶೇಷ ಆಹ್ವಾನಿತರಾಗಿದ್ದರು. ಅವರನ್ನು ಸನ್ಮಾನಿಸುವ ವೇಳೆ, ತಟ್ಟೆಯಲ್ಲಿ ಸ್ಮರಣಿಕೆಗಳಷ್ಟೇ ಇದ್ದವು. ಚೆಕ್‌ ಕಾಣಲಿಲ್ಲ. ಈ ಬಗ್ಗೆ ಡಿಡಿಪಿಐ ಡಾ.ಪಾಂಡುರಂಗ ಅವರಲ್ಲಿ ಪ್ರಶ್ನಿಸಿದ ಸಚಿವರು, ಅವರ ಉತ್ತರದಿಂದ ಸಮಾಧಾನಗೊಳ್ಳಲಿಲ್ಲ.

‘ಮೂವರಿಗೂ ತಲಾ ₹ 10 ಸಾವಿರ ಮೊತ್ತದ ಚೆಕ್‌ ನೀಡಬೇಕು ಇಲ್ಲವೇ ಆರ್‌ಟಿಜಿಎಸ್‌ ಮೂಲಕ ಹಣ ಪಾವತಿಸಬೇಕು. ಇದಾದ ಮೇಲೆ, ಮಕ್ಕಳ ಮೂಲಕ ದೂರವಾಣಿ ಕರೆ ಮಾಡಿಸಿ ಜಿಲ್ಲಾಧಿಕಾರಿ ಅಥವಾ ನನಗೆ ಖಚಿತಪಡಿಸಬೇಕು. ಪ್ರತಿಯೊಂದು ವ್ಯವಹಾರವನ್ನೂ ಪಾರದರ್ಶಕವಾಗಿ ಮಾಡಬೇಕು. ವ್ಯವಹಾರದ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳಿಕವಷ್ಟೇ ಮಕ್ಕಳನ್ನು ಸನ್ಮಾನಿಸಿದರು.

ಮಕ್ಕಳು ಮೂವರೂ, ‘ಬೆಳಗಿದವೋ... ರಂಗೋಲಿ ಬೆಳಗಿದವೋ’, ‘ಗಜಮುಖನೆ ಗಣಪತಿಯೆ ನಿನಗೆ ವಂದನೆ’, ‘ಕಲಿಸು ಸದ್ಗುರುವೇ ಕಲಿಸು...’ ಹಾಡುಗಳನ್ನು ಹಾಡಿ ರಂಜಿಸಿದರು.

ಪ್ರತಿಕ್ರಿಯಿಸಿ (+)