ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಚಂದ್ರ ಜಾಧವಗೆ ಬಿಜೆಪಿ ಮಣೆ?

ಚಿಂಚೋಳಿ, ಕುಂದಗೋಳ ಉಪಚುನಾವಣೆ: ಬಿಎಸ್‌ವೈ ಸಂಬಂಧಿಗೂ ಟಿಕೆಟ್‌
Last Updated 25 ಏಪ್ರಿಲ್ 2019, 20:45 IST
ಅಕ್ಷರ ಗಾತ್ರ

ಬೆಂಗಳೂರು: ಚಿಂಚೋಳಿಯಲ್ಲಿ ಡಾ. ಉಮೇಶ ಜಾಧವ ಸಹೋದರ ರಾಮಚಂದ್ರ ಜಾಧವ ಹಾಗೂ ಕುಂದಗೋಳದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹತ್ತಿರದ ಸಂಬಂಧಿ ಎಸ್‌.ಐ.ಚಿಕ್ಕನಗೌಡರ ಅವರಿಗೆ ಟಿಕೆಟ್‌ ನೀಡುವಂತೆ ಪಕ್ಷದ ರಾಜ್ಯ ಪ್ರಮುಖರು ಶಿಫಾರಸು ಮಾಡಿದ್ದಾರೆ.

ಎರಡೂ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ರಾಜ್ಯ ಕಚೇರಿಯಲ್ಲಿ ಗುರುವಾರ ಸರಣಿ ಸಭೆಗಳು ನಡೆದವು. ಆರಂಭದಲ್ಲಿ ಜಿಲ್ಲಾ ಮುಖಂಡರ ಸಲಹೆ ಪಡೆಯಲಾಯಿತು. ಬಳಿಕ ರಾಜ್ಯ ಪ್ರಮುಖರು ಸಭೆ ಸೇರಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದರು.

‘ಸಾಮಾನ್ಯವಾಗಿ ಇಬ್ಬರು ಆಕಾಂಕ್ಷಿಗಳ ಹೆಸರನ್ನು ಕೇಂದ್ರ ಸಮಿತಿಗೆ ಶಿಫಾರಸು ಮಾಡಲಾಗುತ್ತದೆ. ಅದೇ ರೀತಿ, ಚಿಂಚೋಳಿಗೆ ರಾಮಚಂದ್ರ ಜಾಧವ ಹಾಗೂ ಸುನೀಲ್‌ ವಲ್ಯಾಪುರೆ, ಕುಂದಗೋಳಕ್ಕೆ ಚಿಕ್ಕನಗೌಡರ ಹಾಗೂ ಎಂ.ಆರ್‌.ಪಾಟೀಲ ಹೆಸರುಗಳನ್ನು ಕಳುಹಿಸಲಾಗಿದೆ’ ಎಂದು ರಾಜ್ಯ ನಾಯಕರೊಬ್ಬರು ಹೇಳಿದರು.

ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಉಮೇಶ ಜಾಧವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಗುಲ್ಬರ್ಗಾ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ. ಉಪಚುನಾವಣೆಯಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಬೇಕು ಎಂದು ಅವರು ಪಕ್ಷ ಸೇರ್ಪಡೆಯ ವೇಳೆಯೇ ಷರತ್ತು ವಿಧಿಸಿದ್ದರು. ಅವರ ಬೇಡಿಕೆಗೆ ಪಕ್ಷ ಮನ್ನಣೆ ನೀಡಿದೆ.

ಕುಂದಗೋಳದಲ್ಲಿ 2008ರಲ್ಲಿ ಗೆಲುವು ಸಾಧಿಸಿದ್ದ ಚಿಕ್ಕನಗೌಡರ ಅವರು 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಶಿವಳ್ಳಿ 52,690 ಮತಗಳನ್ನು ಪಡೆದಿದ್ದರೆ, ಚಿಕ್ಕನಗೌಡರ 31,618 ಮತಗಳನ್ನು ಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಎಂ.ಆರ್‌.ಪಾಟೀಲ 21,072 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 2018ರ ಚುನಾವಣೆಯಲ್ಲಿ ಚಿಕ್ಕನಗೌಡರ ಅವರು 640 ಮತಗಳಿಂದ ಪರಾಭವ ಹೊಂದಿದ್ದರು. ‘ಕ್ಷೇತ್ರದಲ್ಲಿ ಲಿಂಗಾಯತರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಜತೆಗೆ, ಎರಡು ಸಲ ಸೋತಿರುವುದರಿಂದ ಚಿಕ್ಕನಗೌಡರ ಪರ ಅನುಕಂಪದ ಅಲೆ ಇದೆ. ಯಡಿಯೂರಪ್ಪ ಅವರ ಬಲ ಇದೆ. ಹೀಗಾಗಿ, ಅವರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ’ ಎಂದು ನಾಯಕರೊಬ್ಬರು ಹೇಳಿದರು.

ಉಸ್ತುವಾರಿಗಳ ನೇಮಕ: ಕುಂದಗೋಳಕ್ಕೆ ಶಾಸಕರಾದ ಜಗದೀಶ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ, ಗೋವಿಂದ ಕಾರಜೋಳ, ಸಂಸದ ಪ್ರಹ್ಲಾದ ಜೋಷಿ ಹಾಗೂ ಚಿಂಚೋಳಿಗೆ ಶಾಸಕ ವಿ.ಸೋಮಣ್ಣ, ಎನ್‌.ರವಿಕುಮಾರ್‌, ಮುಖಂಡರಾದ ಲಕ್ಷ್ಮಣ ಸವದಿ, ಮಾಲೀಕಯ್ಯ ಗುತ್ತೇದಾರ್‌, ಬಾಬುರಾವ್ ಚಿಂಚನಸೂರು ಅವರನ್ನು ಚುನಾವಣಾ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.

*
ಪ್ರತಿ ಕ್ಷೇತ್ರಕ್ಕೆ ತಲಾ ಒಬ್ಬರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸು ಮಾಡಲಾಗಿದೆ. ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಸಮಿತಿ ಶುಕ್ರವಾರ ಪ್ರಕಟಿಸಲಿದೆ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT