ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘₹ 8ಸಾವಿರ ಸಾಲಕ್ಕೆ ಕತ್ತಲೆ ಕೋಣೆಗೆ ನೂಕಿದರು’

ಕಷ್ಟದ ದಿನಗಳನ್ನು ನೆನೆದು ಕಣ್ಣೀರು ಹಾಕಿದ ಚಿಂದೋಡಿ ಶ್ರೀಕಂಠೇಶ್
Last Updated 17 ನವೆಂಬರ್ 2019, 10:32 IST
ಅಕ್ಷರ ಗಾತ್ರ

ಬೆಂಗಳೂರು: ‘50ಕ್ಕೂ ಅಧಿಕ ಕಲಾವಿದರು ನಮ್ಮ ಕಂಪನಿಯನ್ನೇ ನಂಬಿಕೊಂಡಿದ್ದರು. ಆದರೆ, ಆ ವರ್ಷ ಮಳೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ನಮ್ಮ ನಾಟಕಗಳಿಗೆ ಅಷ್ಟಾಗಿ ಜನ ಬರಲಿಲ್ಲ. ಇದರಿಂದಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನಿಗದಿತ ಅವಧಿಯಲ್ಲಿಪೂರ್ಣ ಸಾಲವನ್ನು ತೀರಿಸಲಿಲ್ಲ ಎಂಬ ಕಾರಣಕ್ಕೆ ಸಾಲ ನೀಡಿದ ವ್ಯಕ್ತಿ ರಟ್ಟೆಗಳಿಗೆ ಹಗ್ಗ ಕಟ್ಟಿ, ಕತ್ತಲೆ ಕೋಣೆಯಲ್ಲಿ ನನ್ನನ್ನು ಇರಿಸಿದರು’.

–ಹೀಗೆ ತಮ್ಮ ಜೀವನದ ಹಾದಿಯಲ್ಲಿ ಎದುರಾದ ಕಷ್ಟದ ದಿನಗಳನ್ನು ನೆನೆದು, ಕಣ್ಣೀರನ್ನು ಹಾಕಿದವರು ವೃತ್ತಿ ರಂಗಭೂಮಿ ಕಲಾವಿದ ಮತ್ತು ಕೆ.ಬಿ.ಆರ್. ಡ್ರಾಮಾ ಕಂಪನಿಯ ಮಾಲೀಕ ಚಿಂದೋಡಿ ಶ್ರೀಕಂಠೇಶ್. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ ಹಿರಿಯ ಕಲಾವಿದ ತಮ್ಮ ಮನದಾಳವನ್ನು ಹಂಚಿಕೊಂಡರು.

‘1995ರ ಅವಧಿಯಲ್ಲಿ ನಮ್ಮ ಕಂಪನಿ ಸಂಕಷ್ಟಕ್ಕೆ ಸಿಲುಕಿತು. ರಂಗಮಂದಿರಗಳ ಬಾಡಿಗೆ ಹಣವನ್ನು ಕಟ್ಟುವುದು ಕೂಡಾ ಸವಾಲಾಗಿತ್ತು. ನೇಸರ್ಗಿ ಕ್ಯಾಂಪ್‌ನಲ್ಲಿ ನಾಟಕ ಪ್ರದರ್ಶನಕ್ಕೆ ವ್ಯಕ್ತಿಯೊಬ್ಬರು ಗುತ್ತಿಗೆ ನೀಡಿದ್ದರು. ಇದಕ್ಕಾಗಿ ₹ 50 ಸಾವಿರ ಸಾಲ ಪಡೆದಿದ್ದೆ. ಆದರೆ, ಮಳೆ ನಾಟಕ ಪ್ರದರ್ಶನಕ್ಕೆ ಅಡ್ಡಿಯಾಯಿತು. ಇದರಿಂದಾಗಿ ಹಣವನ್ನು ವಾಪಸ್‌ ನೀಡಲು ಸಾಧ್ಯವಾಗಲಿಲ್ಲ. ಆ ದಿನಗಳಲ್ಲಿ ಒಂದು ದಿನ ಮಾಡಿದ ಸಾರನ್ನು 8 ದಿನ ಕುದಿಸಿ, ಊಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಷ್ಟಾಗಿಯೂ ₹ 42 ಸಾವಿರ ಸಾಲವನ್ನು ತೀರಿಸಿದ್ದೆ. ಉಳಿದ ₹ 8 ಸಾವಿರ ಸಾಲ ವಸೂಲಾತಿಗೆ ನಮ್ಮ ಕ್ಯಾಂಪಿಗೆ ಬಂದಬಡ್ಡಿ ದ್ಯಾವಣ್ಣ, ತಲೆ ತಗ್ಗಿಸಿ ನಿಂತಿದ್ದ ನನೆಗೆ ಜೋರಾಗಿ ಕಿಬ್ಬೊಟ್ಟೆಗೆ ಗುದ್ದಿದರು. ಆ ನೋವು ಇನ್ನೂ ಮಾಸಿಲ್ಲ’ ಎಂದು ಭಾವುಕರಾದರು.

‘ಉಳಿದ ಹಣವನ್ನು ನೀಡುವುದಾಗಿ ಹೇಳಿದರೂ ನನ್ನ ಎರಡೂ ಕೈಗಳನ್ನು ಕಟ್ಟಿ, ಕಾರಿನಲ್ಲಿ ಕರೆದೊಯ್ಯಲಾಯಿತು. ಜನವಸತಿ ಇಲ್ಲದ ಕತ್ತಲೆ ಕೋಣೆಗೆ ನೂಕಿ, ಜೋರಾಗಿ ಏಟು ನೀಡಿದರು. ಬಹಿರ್ದೆಸೆಗೆ ಹೋಗಬೇಕೆಂದರೂ ಕೈಗಳಿಗೆ ಕಟ್ಟಿದ ಹಗ್ಗವನ್ನು ಬಿಚ್ಚುತ್ತಿರಲಿಲ್ಲ. ಎಷ್ಟೇ ಚಿತ್ರಹಿಂಸೆ ನೀಡಿದರೂ ಧೃತಿಗೆಡಲಿಲ್ಲ. ಹೀಗೆ ನನ್ನನ್ನು ಬಂಧನದಲ್ಲಿರಿಸಿದರೆ ನಿಮಗೆ ಬಾಕಿ ಹಣ ಸಂದಾಯವಾಗುವುದಿಲ್ಲ. ಕಂಪನಿಯ ಕಲಾವಿದರು ಕೂಡಾ ಉಪವಾಸ ಇರಬೇಕಾಗುತ್ತದೆ ಎಂದು ಅವರಿಗೆ ಮನವರಿಕೆ ಮಾಡಿಸಿದೆ. ಇದರಿಂದಾಗಿ ಒಂದು ತಿಂಗಳೊಳಗೆ ಬಾಕಿ ಸಾಲ ತೀರಿಸು ಎಂದು ಎಚ್ಚರಿಕೆ ನೀಡಿ, ಬಿಟ್ಟರು. ಅದಾದ ಕೆಲವೇ ದಿನಗಳಲ್ಲಿ ಸಾಲ ತೀರಿಸಿದೆ. ನಮ್ಮ ನಾಟಕಗಳು ಉತ್ತಮ ಪ್ರದರ್ಶನ ಕಂಡವು’ ಎಂದು ತಿಳಿಸಿದರು.

ರಂಗಾಯಣದ ಪ್ರಾಧಾನ್ಯತೆ ನೀಡಿ: ಇಲಾಖೆಯಿಂದ ಕಲಾವಿದರಿಗೆ ಸಿಗುತ್ತಿರುವ ಪ್ರಯೋಜನಗಳ ಬಗ್ಗೆ ನಿರ್ದೇಶಕ ಎಸ್. ರಂಗಪ್ಪ ಅವರು ಕೇಳಿದ ಪ್ರಶ್ನೆಗೆ, ‘ವೃತ್ತಿ ರಂಗಭೂಮಿ ಕಲಾವಿದರು ಹಲವಾರು ಸವಾಲುಗಳನ್ನು ಎದುರಿಸುವ ಜತೆಗೆ ಅವರ ಜೀವನ ಸಂಕಷ್ಟಕ್ಕೆ ನೂಕಲ್ಪಟ್ಟಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಲಾವಿದರಿಗಾಗಿ ‘ಕಾಯಕಲ್ಪ’ ಯೋಜನೆಯನ್ನು ಜಾರಿ ಮಾಡಲಾಯಿತು. ಆ ದಿನಗಳಲ್ಲಿ ₹2 ಸಾವಿರದಿಂದ ₹ 5 ಸಾವಿರದ ವರೆಗೆ ಸಂಸ್ಥೆಗಳಿಗೆ ಧನಸಹಾಯ ನೀಡಲಾಗುತ್ತಿತ್ತು. ಇದೀಗ ₹ 2 ಕೋಟಿ ಹಣ ಇರಿಸಲಾಗುತ್ತಿದ್ದು, 50 ಮಂದಿ ಇರುವ ಸಂಸ್ಥೆಯೊಂದಕ್ಕೆ ₹ 10 ಲಕ್ಷ ನೀಡಲಾಗುತ್ತಿದೆ. ಕರ್ನಾಟಕದ ವೃತ್ತಿ ರಂಗ ಭೂಮಿಯ ಪ್ರತಿಭಾನಿತ್ವ ಕಲಾವಿದರ ಬೆಲೆ ₹ 275ಗೆ ನಿಗದಿಪಡಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿ, ‘ರಂಗಾಯಣಕ್ಕೆ ನೀಡಿದಷ್ಟೇ ಪ್ರಾಧಾನ್ಯತೆಯನ್ನು ವೃತ್ತಿ ರಂಗಭೂಮಿಗೆ ನೀಡಿದಲ್ಲಿ ನಾವು ಕಲಾವಿದರಾಗಿರುವುದಕ್ಕೂ ಸಾರ್ಥಕ ಎಂಬ ಮನೋಭಾವ ಮೂಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT