ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಕ್ರಿಸ್‌ಮಸ್ ಸಡಗರ

ಚರ್ಚ್‌ನಲ್ಲಿ ವಿಭಿನ್ನ ವಿನ್ಯಾಸದ ಗೋದಲಿಗಳು: ವಿಶೇಷ ಪ್ರಾರ್ಥನೆ, ಹಬ್ಬದ ಅಡುಗೆ
Last Updated 25 ಡಿಸೆಂಬರ್ 2019, 16:50 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಾದ್ಯಂತ ಬುಧವಾರ ಕ್ರಿಶ್ಚಿಯನ್‌ ಸಮುದಾಯದವರು ಕ್ರಿಸ್‌ಮಸ್ ಹಬ್ಬ ಸಡಗರದಿಂದ ಆಚರಿಸಿದರು.

ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಗೋಣಿಕೊಪ್ಪಲು ಸೇರಿದಂತೆ ವಿವಿಧೆಡೆ ನೆಲೆಸಿರುವ ಕ್ರಿಶ್ಚಿಯನ್‌ ಸಮುದಾಯದವರು ಮಂಗಳವಾರ ರಾತ್ರಿಯಿಂದಲೇ ಚರ್ಚ್‌ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ವಿಶೇಷವಾಗಿ ನಗರದಲ್ಲಿ ಸೇಂಟ್‌ ಮೈಕಲರ ಚರ್ಚ್, ಸಿಎಸ್‌ಐ ಶಾಂತಿ ಚರ್ಚ್‌ನಲ್ಲಿ ಆಕರ್ಷಕ ಗೋದಲಿಗಳು, ಸಾಂಟಾಕ್ಲಾಸ್‌ನ ಪ್ರತಿಬಿಂಬ, ಶುಭ ಸಂಕೇತದ ಗಂಟೆಗಳು ಚರ್ಚ್‌ಗಳಲ್ಲಿ ಅಲಂಕರಿಸಿದ್ದವು. ನಗರದ ವ್ಯಾಪಾರ ಮಳಿಗೆಗಳಲ್ಲಿ ಉಡುಗೊರೆಗಳ ಖರೀದಿಯೂ ಜೋರಾಗಿತ್ತು.

ಹಬ್ಬದ ಅಂಗವಾಗಿಯೇ ನಗರದ ಕೆಲವು ಬೇಕರಿಗಳಲ್ಲಿ ಹಲವು ಬಗೆಯ ಬೃಹತ್ ಕೇಕ್‌ಗಳನ್ನು ತಯಾರಿಸಲಾಗಿತ್ತು. ಚರ್ಚ್‌ನಲ್ಲಿ ಕ್ರೈಸ್ತರು ನಮಿಸಿದರು. ಸಾಮೂಹಿಕ ಗಾಯನವೂ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಜನರು ಏಸುಕ್ರಿಸ್ತನಿಗೆ ನಮಿಸಿದರು.

ಚರ್ಚ್‌ನ ಒಳ ಹಾಗೂ ಹೊರಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಕ್ರಿಸ್‌ಮಸ್ ಟ್ರೀ, ಏಸುವಿನ ಪ್ರತಿಮೆಯನ್ನು ವೈವಿಧ್ಯಮಯವಾಗಿ ಅಲಂಕರಿಸಲಾಗಿತ್ತು. ಬಾಲ ಏಸುವಿನ ಜನ್ಮ ವೃತ್ತಾಂತ ಸಾರುವ ಗೋದಲಿ ಎಲ್ಲರ ಗಮನ ಸೆಳೆಯಿತು.

ಸಾಂಟಾಕ್ಲಾಸ್ ವೇಷ ಧರಿಸಿದ ಪುಟಾಣಿಗಳು ಮನೆ ಮನೆಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು. ಕೇಕ್ ಹಂಚಿ ಹಬ್ಬದ ಶುಭಾಶಯ ಕೋರಲಾಯಿತು.

ನಗರದ ಸೇಂಟ್‌ ಮೈಕಲರ ಚರ್ಚ್‌ನಲ್ಲಿ ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮನೆಗಳಲ್ಲಿ ಕೇಕ್, ವೈನ್, ಆಹಾರ ತಯಾರಿಸಿ ಬಂಧುಗಳೊಂದಿಗೆ ಸಹಭೋಜನ ಮಾಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT