ಭಾನುವಾರ, ಡಿಸೆಂಬರ್ 8, 2019
20 °C
ತನಿಖೆ ಸಿಐಡಿಗೆ ಹಸ್ತಾಂತರ

ಫೇಸ್‌ಬುಕ್‌ ವಂಚನೆ: ಕೈಗಡವಾಗಿ ಪಡೆದ ದುಡ್ಡು ವಂಚಕರ ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ/ಮುಂಡಗೋಡ: ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ಮಹಿಳೆಯ ಮಾತನ್ನು ನಂಬಿ ಮುಂಡಗೋಡದ ಬೌದ್ಧ ಬಿಕ್ಕು ಕರ್ಮಾ ಕೆಡುಪ್‌ ₹1.97 ಕೋಟಿ ಹಣ ಕಳೆದುಕೊಂಡ ಪ್ರಕರಣದ ತನಿಖೆಯು ಸಿಐಡಿಗೆ ಹಸ್ತಾಂತರವಾಗಲಿದೆ.

ಈ ಬಗ್ಗೆ ಕಾರವಾರದ ಸೈಬರ್ ಅಪರಾಧ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಇದು ಕೋಟಿಗಟ್ಟಲೆ ಹಣ ಕಳೆದುಕೊಂಡ ಪ್ರಕರಣವಾಗಿದೆ. ಆದ್ದರಿಂದ ಸಿಐಡಿ ತನಿಖೆಗೆ ನಿರ್ಧರಿಸಲಾಗಿದೆ. ಕರ್ಮಾ ಅವರು ಫೆ.7ರಿಂದ ಇಲ್ಲಿಯವರೆಗೆ 22 ಬ್ಯಾಂಕ್‌ ಖಾತೆಗಳಿಗೆ ಹಣ ಪಾವತಿ ಮಾಡಿದ್ದಾರೆ. ಆ ಖಾತೆಗಳು ದೇಶದ ಬೇರೆ ಬೇರೆ ರಾಜ್ಯಗಳಲ್ಲಿವೆ. ಬೇರೆಯವರಿಂದ ಹಣ ಪಡೆದು ಪಾವತಿ ಮಾಡಿದ್ದಾಗಿ ಅವರು ಹೇಳಿದ್ದಾರೆ. ಆದರೂ ಹಣದ ಮೂಲದ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು.

ಸ್ವಂತ ಹಣ ₹ 15 ಲಕ್ಷ:

‘ರೊಲ್ಯಾಂಡ್‌ ಮಿಷೆಲ್‌ ಎಂಬಾಕೆ ಕರ್ಮಾ ಅವರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಳು. ತನ್ನನ್ನು ಅಮೆರಿಕ ಸೇನೆಯ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ ಆಕೆ, ಭಾರತದಲ್ಲಿರುವ ಅನಾಥ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಳು. ಅವಳ ಮಾತನ್ನು ನಂಬಿದ ನಾನು ಹಣ ಪಾವತಿ ಮಾಡಿದೆ’ ಎಂದು ಮುಂಡಗೋಡ ತಾಲ್ಲೂಕಿನ ಡ್ರೆಪುಂಗ್ ಮೊನ್ಯಾಸ್ಟ್ರಿಯ ಕರ್ಮಾ ಕೆಡುಪ್ ಪ್ರತಿಕ್ರಿಯಿಸಿದರು.

‘ನಾನು ಈಗಾಗಲೇ 2.5 ಮಿಲಿಯನ್ ಅಮೆರಿಕನ್ ಡಾಲರ್ (₹ 17.45 ಕೋಟಿ) ಭಾರತಕ್ಕೆ ಕಳಿಸಿದ್ದೇನೆ. ಭಾರತದಲ್ಲಿರುವ ನನ್ನ ಸಹಚರ ವಿಲಿಯಮ್‌ಗೆ ಅದನ್ನು ಬಿಡಿಸಿಕೊಳ್ಳಲು ಹಣದ ಅವಶ್ಯಕತೆಯಿದೆ ಎಂದಿದ್ದಳು. ಅಲ್ಲದೇ ಅಮೆರಿಕ ಸೇನೆಯಲ್ಲಿರುವ ಬಗ್ಗೆ ಗುರುತಿನ ಚೀಟಿಯ ಚಿತ್ರವನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿಕೊಟ್ಟಿದ್ದಳು. ಹೀಗಾಗಿ ಅವಳ ಮೇಲೆ ನಂಬಿಕೆ ಹೆಚ್ಚಿತು’ ಎಂದು ವಿವರಿಸಿದರು.

‘ಕಳೆದುಕೊಂಡಿರುವ ಒಟ್ಟು ₹1.97 ಕೋಟಿಯಲ್ಲಿ ನನ್ನ ಸ್ವಂತದ್ದು ₹13 ಲಕ್ಷದಿಂದ ₹15 ಲಕ್ಷ. ಉಳಿದ ಹಣ ಬೇರೆ ಬಿಕ್ಕುಗಳ ಬಳಿ ಕೈಗಡವಾಗಿ ಪಡೆದುಕೊಂಡಿದ್ದೆ. ಆಕೆ ಕೇಳುತ್ತಿದ್ದ ಆರ್ಥಿಕ ಸಹಾಯದ ಮನವಿಯನ್ನು ಒಂದು ತಿಂಗಳವರೆಗೆ ತಿರಸ್ಕರಿಸುತ್ತ ಬಂದಿದ್ದೆ. ಕೊನೆಗೆ ಅವಳಿಗೆ ಸಹಾಯ ಮಾಡಲು ಮುಂದಾಗಿ ಹಣ ಕಳೆದುಕೊಂಡಿರುವೆ. ನಾನು ಮೋಸ ಹೋದಂತೆ ಬೇರೆಯವರು ಮೋಸ ಹೋಗಬಾರದೆಂಬ ಉದ್ದೇಶದಿಂದ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಹೇಳಿದರು.

‘ಅವಳು ಸೂಚಿಸುತ್ತಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ₹15 ಲಕ್ಷ, ₹25 ಲಕ್ಷ ಹಣವನ್ನು ಹಾಕುತ್ತ ಹೋದೆ. ಮುಂದೆ ಅನುಮಾನಗೊಂಡು, ಹಣದ ಬಗ್ಗೆ ವಿಚಾರಿಸುತ್ತಿದ್ದಂತೆ ಪ್ರತಿಕ್ರಿಯೆ ಬರಲಿಲ್ಲ. ಈವರೆಗೂ ಆ ಮಹಿಳೆ ಹಾಗೂ ಆಕೆಯ ಏಜೆಂಟ್‌ ಜೊತೆ ನಾನು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕ ಹೊಂದಿದ್ದೇನೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು