ಶುಕ್ರವಾರ, ನವೆಂಬರ್ 15, 2019
27 °C

ಎಂಎ ವಿದ್ಯಾರ್ಥಿನಿ, ಕುರಿಗಾಹಿ ವಿವಾಹ: ಓಡೋಡಿ ಬಂದು ಕೊರಳೊಡ್ಡಿದ ಪ್ರಿಯತಮೆ

Published:
Updated:
Love Marriage

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಸಿಗೆಹಟ್ಟಿ ಗ್ರಾಮದ ಪ್ರೇಮಿಗಳು ಸಿನಿಮೀಯ ರೀತಿಯಲ್ಲಿ ವಿವಾಹವಾಗಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರೀತಿಸಿದ ಕುರಿಗಾಹಿಗಾಗಿ ಓಡೋಡಿ ಬಂದ ಎಂಎ ಪದವೀಧರೆಗೆ ಪ್ರಿಯತಮ ಕುರಿ ಮೇಯಿಸುವ ಸ್ಥಳದಲ್ಲೇ ತಾಳಿ ಕಟ್ಟಿದ್ದಾನೆ.

ಕುರಿ ಕಾಯುವ ಅರುಣ್ ಹಾಗೂ ಎಂಎ ವ್ಯಾಸಂಗ ಮಾಡುತ್ತಿರುವ ಅಮೃತಾ ಇಬ್ಬರು ಒಂದೇ ಸಮುದಾಯದರು. ಇವರಿಬ್ಬರ ವಿವಾಹಕ್ಕೆ ಎರಡು ಮನೆಯವರ ವಿರೋಧವಿತ್ತು.

ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಪೋಷಕರಿಗೆ ಗೊತ್ತಾಗಿತ್ತು. ಇದಕ್ಕೆ ಹುಡುಗಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಗ್ರಾಮದ ಮುಖಂಡರು ಸೇರಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದರೆ ಅಮೃತಾಗೆ ಬೇರೆ ಮದುವೆ ಮಾಡಲು ಆಕೆ ಮನೆಯಲ್ಲಿ ಸಿದ್ಧತೆ ನಡೆದಿತ್ತು.

ತುಮಕೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಮೃತಾ, ಹಬ್ಬಕ್ಕೆಂದು ಊರಿಗೆ ಬಂದಿದ್ದರು. ಬಹಿರ್ದೆಸೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರಗೆ ಹೋದ ಅಮೃತಾ, ನೇರವಾಗಿ ಕುರಿ ಹಟ್ಟಿಗೆ ಹೋಗಿದ್ದಾಳೆ.

ಈ ವೇಳೆ ಓಡೋಡಿ ಬಂದ ಪ್ರೇಯಸಿಗೆ ಪ್ರಿಯತಮ ಅರಿಶಿಣದ ಕೊಂಬು ಕಟ್ಟಿದ್ದಾನೆ. ಈ ದೃಶ್ಯವನ್ನು ಟಿಕ್‌ಟಾಕ್ ಮಾಡಲಾಗಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ವಿವಾಹದ ವಿಡಿಯೊ ಹರಿದಾಡುತ್ತಿದೆ.

ಪ್ರತಿಕ್ರಿಯಿಸಿ (+)