ಶನಿವಾರ, ನವೆಂಬರ್ 16, 2019
24 °C
ಮುಂದಿನ ವರ್ಷಕ್ಕೂ ಈಗಲೇ ಟೆಂಡರ್‌; ಜನವರಿಗೆ ವರದಿ

ಮಳೆ, ಪ್ರವಾಹದಲ್ಲೂ ‘ಮೋಡ ಬಿತ್ತನೆ’ಗೆ ಉತ್ಸಾಹ!

Published:
Updated:
Prajavani

ಹುಬ್ಬಳ್ಳಿ: ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷೆ ಮೀರಿ ಸುರಿದ ಪರಿಣಾಮ ರಾಜ್ಯದಲ್ಲಿ ಪ್ರವಾಹ ಉಂಟಾಗಿ ರೈತ ಸಮುದಾಯ ಸಂಕಷ್ಟದಲ್ಲಿ ಇದ್ದರೂ ಸರ್ಕಾರಕ್ಕೆ ಮಾತ್ರ ‘ಮೋಡ ಬಿತ್ತನೆ’ಯ ಉತ್ಸಾಹ ಸ್ವಲ್ಪವೂ ಕುಂದಿಲ್ಲ!

‘ವರ್ಷಧಾರೆ’ ಯೋಜನೆಯಡಿ ಜುಲೈ 27ರಿಂದ ಅಕ್ಟೋಬರ್‌ 26ರವರೆಗೆ ಮೋಡ ಬಿತ್ತನೆ ಮಾಡಿದ್ದು, ಅದನ್ನು ನವೆಂಬರ್‌ 10ರವರೆಗೆ ಮುಂದುವರಿಸಲಾಗಿದೆ. ಇಷ್ಟೇ ಅಲ್ಲದೇ, ಮುಂದಿನ ವರ್ಷವೂ ಮೋಡ ಬಿತ್ತನೆಗೆ ₹45 ಕೋಟಿ ಮೊತ್ತದ ಟೆಂಡರ್ ಅಂತಿಮವಾಗಿದೆ.

ಮೂರು ತಿಂಗಳ ಅವಧಿಯಲ್ಲಿ 400 ಗಂಟೆ ಮೋಡ ಬಿತ್ತನೆಗೆ ಬೆಂಗಳೂರಿನ ‘ಕ್ಯಾತಿ ಕ್ಲೈಮೇಟ್‌ ಮಾಡಿಫಿಕೇಷನ್‌ ಕನ್ಸಲ್ಟೆಂಟ್‌’ ಸಂಸ್ಥೆ ಜೊತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈ ಅವಧಿಯಲ್ಲಿ ಮಳೆ ಹೆಚ್ಚಾಗಿ ಸುರಿದ ಕಾರಣ 38 ದಿನಗಳಲ್ಲಿ 290 ಗಂಟೆ ಮಾತ್ರ ಮೋಡ ಬಿತ್ತನೆ (1,307 ಪ್ಲೆಯರ್ಸ್‌ ಉರಿಸಲಾಗಿದೆ) ಮಾಡಲಾಗಿದೆ. ಟೆಂಡರ್‌ ನಿಯಮಾವಳಿ ಪ್ರಕಾರ ಇನ್ನೂ 110 ಗಂಟೆ ಮೋಡ ಬಿತ್ತನೆ ಬಾಕಿ ಉಳಿದಿದೆ.

ಕಣ್ಣೊರೆಸುವ ತಂತ್ರ: ‘ಮೋಡ ಬಿತ್ತನೆ ನೆಪದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಖಾಸಗಿ ಕಂಪನಿಗೆ ಲಾಭ ಮಾಡಿಕೊಟ್ಟಿದ್ದಾರೆ. ಇದೊಂದು ಕಣ್ಣೊರೆಸುವ ತಂತ್ರ. ರಾಜ್ಯದ ಜನರು ಪ್ರವಾಹಕ್ಕೆ ಸಿಲುಕಿ ನಲುಗಿದ್ದರೂ ಸಹ ಅಧಿಕಾರಿಗಳು ಮಾತ್ರ ಖಾಸಗಿ ಕಂಪನಿಯೊಂದಿಗಿನ ಒಪ್ಪಂದಕ್ಕೆ ಕಟ್ಟುಬಿದ್ದು, ಮೋಡ ಬಿತ್ತನೆಗೆ ಮುಂದಾಗಿರುವುದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ’ ಎಂದು ರೈತ ಮುಖಂಡ ವಿಕಾಸ ಸೊಪ್ಪಿನ ದೂರಿದರು.

ಅವಶ್ಯವಿತ್ತು: ‘ಜೂನ್‌ ಕೊನೆಯವರೆಗೂ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದೇ 162 ತಾಲ್ಲೂಕುಗಳನ್ನು ಬರಪೀಡಿತ ಎಂದು ಪರಿಗಣಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮೋಡ ಬಿತ್ತನೆಗೆ ತೀರ್ಮಾನಿಸಲಾಯಿತು. ಆದರೆ, ಉತ್ತಮ ಮಳೆಯಾದ ಕಾರಣ ಕೆಲವೆಡೆ ಮೋಡ ಬಿತ್ತನೆ ಅಗತ್ಯವೇ ಬೀಳಲಿಲ್ಲ. ಆದರೂ ಮಳೆಯಾಗದ ಪ್ರದೇಶದಲ್ಲಿ ಮೋಡ ಬಿತ್ತನೆ ಮಾಡಿದ ಪರಿಣಾಮ ಉತ್ತಮ ಮಳೆಯಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಎಂಜಿನಿಯರ್‌ ಎಚ್‌.ಎಸ್‌.ಪ್ರಕಾಶ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಸಿಲು ಹೆಚ್ಚಾದರೆ ಮಳೆಯ ಅಗತ್ಯ ಬೀಳಬಹುದು ಎನ್ನುವ ಕಾರಣಕ್ಕೆ ಮೋಡಬಿತ್ತನೆ ಅವಧಿ ವಿಸ್ತರಿಸಲಾಗಿದೆ. ಈ ಸಂದರ್ಭದಲ್ಲಿ ಬರಪೀಡಿತ 49 ತಾಲ್ಲೂಕುಗಳಲ್ಲಿಯೂ ಮೋಡ ಬಿತ್ತನೆ ನಡೆಯಲಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ಹಣ ಪಾವತಿಸುತ್ತಿಲ್ಲ’ ಎಂದರು.

‘ಮೋಡ ಬಿತ್ತನೆಯಿಂದ 2ರಿಂದ 3 ಪಟ್ಟು ಹೆಚ್ಚು ಮಳೆಯಾಗಿರುವುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಈ ಬಗ್ಗೆ ತಜ್ಞರು ವಿಶ್ಲೇಷಣೆ ನಡೆಸುತ್ತಿದ್ದು, ಜನವರಿಗೆ ಖಚಿತವಾದ ಮಾಹಿತಿ ಸಿಗಲಿದೆ’ ಎಂದು ತಿಳಿಸಿದರು.

**

ಜನಪ್ರತಿನಿಧಿಗಳು, ಅಧಿಕಾರಿಗಳು ಜೊತೆಯಾಗಿ ಮೋಡ ಬಿತ್ತನೆ ನೆಪದಲ್ಲಿ ಸಾರ್ವಜನಿಕ ಹಣವನ್ನು ಕೊಳ್ಳೆಹೊಡೆಯುತ್ತಿದ್ದಾರೆ. ಮೋಡ ಬಿತ್ತನೆ ತಕ್ಷಣ ನಿಲ್ಲಬೇಕು. ಇದರ ಬಗ್ಗೆ ತನಿಖೆಯಾಗಬೇಕು.
– ವಿಕಾಸ ಸೊಪ್ಪಿನ, ರೈತ ಮುಖಂಡ, ಹುಬ್ಬಳ್ಳಿ

**

ಮೋಡ ಬಿತ್ತನೆ ವೈಜ್ಞಾನಿಕವಾಗಿ ನಡೆಯುತ್ತಿದೆ. ವಿಷಯ ಹೊಸದಿರುವುದರಿಂದ ಜನರಿಗೆ ಇದರ ಬಗ್ಗೆ ಅರಿವಿಲ್ಲ. ಈ ವಿಷಯದಲ್ಲಿ ಅನುಮಾನಕ್ಕೆ ಆಸ್ಪದ ಇಲ್ಲ.
– ಎಚ್‌.ಎಸ್‌.ಪ್ರಕಾಶ ಕುಮಾರ್‌
ಮುಖ್ಯ ಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 

ಪ್ರತಿಕ್ರಿಯಿಸಿ (+)