ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಮತ್ತು ನಾಗರಿಕ ಪ್ರಜ್ಞೆ

ದಿಟ ನುಡಿವವನ ಬೆನ್ನಹಿಂದೆ ನಿಲ್ಲಬಹುದಾದ ಒಂದು ಪ್ರಜ್ಞಾವಂತಿಕೆಯ ಅಗತ್ಯವಿದೆ
Last Updated 20 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಎಲ್ಲರು ಅಹುದೆಂಬುದು ಪ್ರಮಾಣವಲ್ಲ ಕಾಣಿಭೋ!
ಎಲ್ಲರು ಅಲ್ಲ ಎಂಬುದು ಪ್ರಮಾಣವಲ್ಲ ಕಾಣಿಭೋ!
ಅದೇನು ಕಾರಣವೆಂದರೆ:
ಶಿವಶರಣರ ಹೃದಯದಂತಸ್ಥವನರಿಯರಾಗಿ,
ಎನ್ನ ಅಹುದೆಂಬುದನು, ಅಲ್ಲ ಎಂಬುದನು ಮನ್ಮನೋಮೂರ್ತಿ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ನೀನೆ ಬಲ್ಲೆ

ಈ ವಚನವು ಮಾರ್ಮಿಕವಾಗಿದೆ. ಹೌದು, ಇಲ್ಲಗಳನ್ನು ಮನುಷ್ಯ ತನ್ನ ಅನುಕೂಲಸಿಂಧುತ್ವವಾಗಿ ಬಳ
ಸುವ ಸ್ವಾರ್ಥವನ್ನು ಧ್ವನಿಸುತ್ತದೆ. ಆ ಭಾವಶೀಲತೆಯನ್ನು ಒತ್ತಿ ಹೇಳುತ್ತದೆ. ಇಷ್ಟದಂತೆ ಬದಲಾದ ನಿಲುವುಗಳು ಅವು. ಆದರೆ ಹೃದಯವಂತರು ಮಾತ್ರ ಹೌದು- ಅಲ್ಲಗಳಾಚೆ ಚಿಂತಿಸುತ್ತಾರೆ. ಅವರಿಗೆ ಮನುಷ್ಯಕುಲದ ಕಾಳಜಿ ತೀವ್ರವಾಗಿ ಕಾಡುತ್ತಿರುತ್ತದೆ. ನಮಗೆ ಇದರಲ್ಲಿಯ ಈ ಎರಡನೆಯ ವಿಚಾರ ಬೇಕಿದೆ. ಈ ವಚನವು ನಮಗೆ ಸಮಕಾಲೀನ ಸಂದರ್ಭದಲ್ಲಿ ಹೆಚ್ಚು ಔಚಿತ್ಯಪೂರ್ಣವಾಗಿ ಕಾಣಿಸುತ್ತದೆ. ಇತ್ತೀಚೆಗಿನ ಬಹುಚರ್ಚಿತ ನ್ಯಾಯ ತೀರ್ಮಾನಗಳು– ‘ಅನರ್ಹರು ಹೌದು, ಆದರೆ ಚುನಾವಣೆಗೆ ಸ್ಪರ್ಧಿಸಬಹುದು’; ‘ಬಾಬರಿ ಮಸೀದಿ ಒಡೆದದ್ದು ತಪ್ಪು, ಆದರೆ ಮಂದಿರ ಕಟ್ಟಬಹುದು’– ಇಂಥ ಸಂಕೀರ್ಣ ಅವಸ್ಥೆಯ ನಡುವೆ ಸಾಮಾನ್ಯನ ಬದುಕಿನ ಬಂಡಿ ಸಾಗಿದೆ. ಆದರೆ ಅವನ ಮನಃಸ್ಥಿತಿ ಹೇಗಿರಬಹುದು?

ಈ ಸಾಮಾನ್ಯನ ಪ್ರಜ್ಞಾವಂತಿಕೆಯ ಕುರಿತು ಕೆಲವು ಪ್ರಶ್ನೆಗಳು ಏಳುತ್ತವೆ. ಈತನೇ ತನ್ನ ಪ್ರಜಾ
ಪ್ರತಿನಿಧಿಗಳನ್ನು ಆರಿಸುವವ. ತಮ್ಮನ್ನು ಆರಿಸಿ ಕಳಿಸಿದ ಮತದಾರರನ್ನು ಕೇಳಿ ತಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅನರ್ಹರಾದವರು ಯಾರೊಬ್ಬರೂ ಎಲ್ಲೂ ಹೇಳಿಲ್ಲ ಮತ್ತು ಆ ಕಾರಣಕ್ಕೆ ಒಂದು ಪಕ್ಷ ತೊರೆದು ಮತ್ತೊಂದು ಪಕ್ಷ ಸೇರಿಲ್ಲ. ತಮ್ಮದೇ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆ ಮತ್ತು ಸರ್ಕಾರವನ್ನು ಉರುಳಿಸಿದ್ದಾರೆ. ತಮ್ಮ ಹೇಳಿಕೆಗಳ ಮೂಲಕವೇ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಿದ್ದಾಗ, ಮತ ಹಾಕುವ ಆ ಪ್ರಾಜ್ಞನ ಹೊಣೆ ದೊಡ್ಡದಿದೆ ಎಂತಲೂ ಅವ ಪ್ರಧಾನ
ನಾಗಬೇಕಾದ ಅಗತ್ಯವಿದೆ ಎಂದೂ ಅನಿಸುತ್ತದೆ.

ಸರ್ಕಾರ ರಚಿಸುವ ಅವಕಾಶ ಸಿಗಬಹುದು ಇಲ್ಲವೇ ಕೈತಪ್ಪಬಹುದು, ಪ್ರಾಜ್ಞ ಪ್ರಜೆ ಮಾತ್ರ ಯಾವತ್ತೂ ಇರುವವ. ಅವನೇ ಕೇಂದ್ರವಾಗಬೇಕು. ಆಗ ಪ್ರಜಾಪ್ರಭುತ್ವಕ್ಕೂ ಒಂದು ಘನತೆ ದಕ್ಕುತ್ತದೆ. ಈಗ ಈ ಉಪಚುನಾವಣೆ ಪ್ರಕ್ರಿಯೆ ಶುರುವಾಗಿದೆ. ಆಡಳಿತಯಂತ್ರ ಸಹಜವಾಗಿ ಅದರ ಸಿದ್ಧತೆಯಲ್ಲಿದೆ. ಆದರೆ ಸರ್ಕಾರದ ಆದ್ಯತೆಗಳು ಹೊರಳು ದಾರಿಗೆ ತಿರುಗಿವೆ. ಪದವಿ (ಅನುದಾನಿತ) ಕಾಲೇಜುಗಳ ನೌಕರರ ಸಂಬಳ ಸೆಪ್ಟೆಂಬರ್‌ನಿಂದ ಇಲ್ಲ. ಇನ್ನಿತರ ಅನುದಾನಿತ ಸಂಸ್ಥೆಗಳ ನೌಕರರ ಕತೆಗಳೂ ಇದೇ ಸ್ವರೂಪದವು. ಪ್ರವಾಹದ ಶತದಿನೋತ್ಸವದ ಗೋಳು ಆಚರಣೆಯ ಕಾಲ ಬಂದಿದೆ. ನೂರಾರು ಕುಟುಂಬಗಳ ನಿರ್ನಾಮಗೊಂಡಿರುವ ಬದುಕನ್ನು ಸುಧಾರಿಸುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಮಹಾಮಳೆಯಿಂದ ತತ್ತರಿಸಿದವರ ಗೋಳು ತೀರಿಲ್ಲ.

ಅವರು ತಂಗಿದ್ದ ಶಾಲೆಗಳಿಂದ ಜಾಗ ಖಾಲಿ ಮಾಡಿಸುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಅಥಣಿ ಮತ್ತು ಕಾಗವಾಡದ ಕೃಷ್ಣಾ ನದಿ ತೀರದ ಪ್ರವಾಹಪೀಡಿತರು, ಗೋಕಾಕ ಪರಿಸರದ ಘಟಪ್ರಭಾ, ಮಾರ್ಕಂಡೇಯ ತಟದ ನೂರಾರು ಸಂತ್ರಸ್ತ ಕುಟುಂಬಗಳ ಬದುಕು ಮೂಲ ಹಳಿಗೆ ಬಂದಿಲ್ಲ. ನೂರಾರು ಸಮಸ್ಯೆಗಳ ಬವಣೆಯ ‘ಯಾತನಾ ಶಿಬಿರ’ದಲ್ಲಿಯೇ ಕಾಲ ನೂಕುವ ನತದೃಷ್ಟರಾಗಿದ್ದಾರೆ ಅವರು. ಕನಿಷ್ಠ ಸೌಲಭ್ಯಗಳಿಂದ ಹೀಗೆ ವಂಚಿತರಾದವರ ಬಗ್ಗೆ ಯೋಚಿಸಬೇಕಾದವರು ಈಗ ಚುನಾವಣೆ ಭರಾಟೆಯ ಓಟದಲ್ಲಿ ಓಡುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಗೆಲ್ಲುವ ತಂತ್ರಗಳನ್ನು ಪೋಣಿಸುವುದರಲ್ಲಿ ಮಗ್ನರು.

ಆದರೆ, ಒಂದೊಂದು ‘ಕಾಳಜಿ’ ಕೇಂದ್ರದ್ದು ಒಂದೊಂದು ಕತೆಯಾಗಿದೆ. ಮನೆ ಕಟ್ಟಲು ಮಂಜೂರಾದ ₹ 5 ಲಕ್ಷ ಇನ್ನೂ ಸಂದಾಯ ಆಗಿಲ್ಲವೆಂಬ ಮಾತು ಕೆಲವೆಡೆ ಇದೆ. ಮನೆ–ಮಠ ಕಳೆದುಕೊಂಡವರಿಗೆ ದಕ್ಕಿದ್ದು ಪ್ರಾರಂಭದ ಸಮಯದಲ್ಲಿ ಕೊಟ್ಟ ₹ 10 ಸಾವಿರ ಅಷ್ಟೇ. ಟೆಂಟ್‍ಗಳಲ್ಲಿಯ ಅವರ ಬದುಕು ದುಸ್ತರವಾಗಿದೆ. ಕಾಳಜಿ ಕೇಂದ್ರಗಳಲ್ಲಿ ಸೌಕರ್ಯಗಳ ಕೊರತೆ. ಕೈಯಲ್ಲಿ ಹಣ ಇಲ್ಲ. ಮಾಡುವೆನೆಂದರೆ ಕೈಗೆ ಕೆಲಸವಿಲ್ಲ. ಕೊಡಗಿನ ಸ್ಥಿತಿಯೇನೂ ಭಿನ್ನವಿಲ್ಲ ಎಂಬುದನ್ನು ವರದಿಗಳು ಹೇಳುತ್ತಿವೆ.

ಎಲ್ಲ ವ್ಯವಸ್ಥೆ ಒಂದೇ ಮಾಲೆಯ ಹೂವಂತೆ. ಊಟ, ತಿಂಡಿ, ಹಾಸು, ಹೊದಿಕೆಯಂತಹ ಮೂಲ ಅಗತ್ಯಗಳು ದೊರೆಯಲೇಬೇಕಾದವು ಅಲ್ಲವೇ? ಇವುಗಳಿಂದಲೇ ವಂಚಿತವಾದರೆ ಬದುಕು ಹೇಗೆ? ಒಬ್ಬ ಹಿರಿಯ ತಾಯಿ ಹೇಳುವ ಕತೆ ಹೀಗಿದೆ- ತಗಡಿನ ಟೆಂಟ್‌ನಲ್ಲಿ ಚಳಿಬಿಸಿಲಿಗೆ ಮೈಯೊಡ್ಡಿದ ಬದುಕು. ಬಾಣಂತಿಯಾಗಿರುವ ತನ್ನ ಸೊಸೆ ಮತ್ತು ಆಕೆಯ ಹಸುಗೂಸನ್ನು ಕಟ್ಟಿಕೊಂಡು ಬದುಕುತ್ತಿದ್ದಾಳೆ. ಅಧಿಕಾರಿಗಳು ಪಾಠಕ್ಕೆ ಶಾಲಾ ಕೊಠಡಿಯನ್ನು ಲಭ್ಯವಾಗಿಸಲು ಸಂತ್ರಸ್ತರನ್ನು ಖಾಲಿ ಮಾಡಿಸುವ ಭರದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಕುರಿತು ಚಿಕ್ಕ ಮಾನವೀಯತೆಯನ್ನೂ ತೋರಲಿಲ್ಲವಂತೆ. ಇದು ನೋವಿನ ಸಂಗತಿ. ಸೊಗದಿಂದ ಬದುಕುವ ನಾಗರಿಕ ಪ್ರಪಂಚವು ಇದನ್ನು ಯಾವ ಕಣ್ಣಿಂದ ಕಾಣಬೇಕು? ಹೇಗೆ ಪ್ರತಿಕ್ರಿಯಿಸಬೇಕು? ಇದು ಸಹ ಮುಖ್ಯ.

ಸಾಲ ಮಾಡಿದ ರೈತಕೂಲಿಯ ಗೋಳು ಅಯ್ಯೋ ಎನಿಸುವಂಥದ್ದು. ಈ ನಿರಾಶ್ರಿತರಿಗೆ ಮಹಾಮಳೆಗೆ ಮುಂಚೆ ಬಡ್ಡಿಗಾಗಿ ಸಾಲ ಕೊಟ್ಟ ಧಣಿಗಳು ತಮ್ಮ ಧನಸಂಗ್ರಹವೇ ಪ್ರಪಂಚದ ಆದ್ಯ ಕರ್ತವ್ಯವೆಂದು ನಂಬಿದವರು. ಎಲುಬಿಗೆ ಅಂಟಿದ ಮಾಂಸವನ್ನೂ ಗೆಬರಿ ತಿನ್ನುವಂತೆ ಬೆನ್ನಟ್ಟಿರುವರು. ರೈತ ಇವರನ್ನೆಲ್ಲ ಶಪಿಸಿ ತಳಮಳಿಸುತ್ತಿದ್ದಾನೆ. ಪ್ರಕೃತಿಯ ಕೋಪಕ್ಕೆ ಸಿಲುಕಿದ ಶಿಶುಗಳ ಗೋಳಿಗೆ ಸರ್ಕಾರಗಳು ಸ್ಪಂದಿಸುವುದೆಂತು?

ಶತಾಯಗತಾಯ ಅಧಿಕಾರವನ್ನು ಕಳಕೊಳ್ಳಲೇಬಾರದು ಎಂಬುದು ಅಧಿಕಾರ ಪಡೆದವರ ಛಲ. ಇದು ಒಂದೆಡೆಯಾದರೆ, ಇವರನ್ನು ಅಧಿಕಾರದಿಂದ ಕೆಳಗಿಳಿಸಿಯೇ ತೀರುವೆವು ಎನ್ನುವುದು ವಿರೋಧಿಗಳ ಹಟ. ಇವರಿಬ್ಬರ ನಡುವೆ ಜನಸಾಮಾನ್ಯರ ಬವಣೆ ಆಲಿಸುವವರಾರು? ಮತಯಾಚನೆಗೆ ತೊಡಗುವ ಮುನ್ನ ಕೆಲವು ಅಭ್ಯರ್ಥಿಗಳು ಈಗಾಗಲೇ ಭಾರಿ ಸಂಖ್ಯೆಯ ಜನ ಸಮುದಾಯವನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಹತ್ತಾರು ಕೋಟಿ ರೂಪಾಯಿ ಸಹಜವಾಗಿ ವೆಚ್ಚದ ಬಾಬ್ತುಗಳು. ಆಯಾ ಪಕ್ಷಗಳ ತಾರ್ಕಿಕ, ಸೈದ್ಧಾಂತಿಕ ನಿಲುವುಗಳು ವ್ಯಕ್ತಗೊಳ್ಳುತ್ತವೆ. ಆದರೆ ಬವಣೆಯ ಕುಂಡೆ ಹೊಸೆವ ಬದುಕನ್ನು ಜೀವಿಸೋ ಸಾಮಾನ್ಯನನ್ನು ಮೇಲಕ್ಕೆ ಎತ್ತುವವರು ಯಾರು? ದಿಟ ನುಡಿವವನ ಬೆನ್ನಹಿಂದೆ ನಿಲ್ಲಬಹುದಾದ ಒಂದು ಪ್ರಜ್ಞಾವಂತಿಕೆ ಅಗತ್ಯವಿದೆ.

ಗಾಂಧೀಜಿ ತಮ್ಮ ಮಗ ಹರಿಲಾಲನಿಗೆ ಹೇಳುವ ಮಾತು ನೆನಪಾಗುತ್ತದೆ. ಎಲ್ಲ ಲೋಭಗಳ ಬೆನ್ನಟ್ಟಿದ ಆ ಮಗನ ವಾಂಛೆಗೆ ತಡೆಯೊಡ್ಡಲು ಉತ್ತರವಾಗಿ, ‘ಸಾರ್ವಜನಿಕ ಬದುಕಲ್ಲಿ ಇರುವವರು ಅದರ ಪ್ರತಿಫಲ ಬಯಸಬಾರದು ಹರಿ. ನೀನು ನನ್ನಂತೆ ಗಾಂಧಿಯಾಗಿದ್ದೀಯ, ಬರೀ ಜೈವಿಕವಲ್ಲ, ವಿಚಾರದಿಂದಲೂ ಗಾಂಧಿಯಾಗಿರುವೆ, ಅದಕ್ಕೆ ನನ್ನ ಹೆಜ್ಜೆಗಳ ಮೇಲೆ ಹೆಜ್ಜೆಯಿಟ್ಟು ನಡಿ’ ಎಂದು ಹೇಳುವರು. ಈಗ ಉಪ
ಚುನಾವಣೆ ಕಣದ ಮಹನೀಯರು ಗಾಂಧೀಜಿ ತತ್ವಗಳ ಸಾರ್ವಜನಿಕ ಜೀವನದ ಘನತೆಯನ್ನು ಎತ್ತಿ ಹಿಡಿಯಲು, ಅವರ ಹೆಜ್ಜೆಗಳ ಮೇಲೆ ಹೆಜ್ಜೆಯಿಟ್ಟರೆ ಅನರ್ಹತೆಯ ಅವರ ಶಾಪ ಕಳೆದುಹೋಗಬಹುದೇನೋ!

ಡಾ.ಡಿ.ಎಸ್.ಚೌಗಲೆ
ಡಾ.ಡಿ.ಎಸ್.ಚೌಗಲೆ

ಪ್ರಜಾಪ್ರಭುತ್ವ ಮೌಲ್ಯದ ತಿಳಿವಳಿಕೆ ಸಾಮಾನ್ಯನಲ್ಲಿ ಎಷ್ಟಿದೆ, ಹೇಗಿದೆ ಎನ್ನುವುದೇ ಬಹುಮುಖ್ಯ ಪ್ರಶ್ನೆ. ಹಳ್ಳಿಗಳಲ್ಲಿ ಊಳಿಗಮಾನ್ಯ ವ್ಯವಸ್ಥೆ ಇನ್ನೂ ಢಾಳಾಗಿದೆ. ಅಸ್ಪೃಶ್ಯತೆ ಇನ್ನೂ ಜೀವಂತ ಇದೆ. ಹಿರಿ-ಕಿರಿ ಪುಢಾರಿಗಳಿಗೆ ಇದೊಂದು ಲಾಭದಾಟ. ಇದರಲ್ಲಿ ಕೆಲವು ಶಕ್ತಿಗಳಿಗೆ ಕೈಗೊಂಬೆಯಾದವರ ಬಹುದೊಡ್ಡ ದಂಡೇ ಇದೆ. ಅನುಕೂಲಸಿಂಧು ರಾಜಕೀಯ, ಸಾಮಾಜಿಕ ಸಂರಚನೆಯಲ್ಲಿ ಇವರೆಲ್ಲರನ್ನೂ ದಾಳವಾಗಿ ಬಳಸಲಾಗುತ್ತಿದೆ. ಜಾತಿ, ಕೋಮು, ಉಪಪಂಗಡಗಳು ಕಣ್ಣು ಕೆಂಪಾಗಿಸಿಕೊಂಡೇ ಕುಳಿತಿವೆ. ಇವು ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪಾಲನೆಗೆ, ಪೋಷಣೆಗೆ ಮಾರಕವಾಗುವುದನ್ನು ತಡೆದು ನಿಲ್ಲಿಸಬೇಕಾದ ಅಗತ್ಯವಿದೆ ಅನಿಸುತ್ತದೆ.

ಲೇಖಕ: ಪ್ರಾಧ್ಯಾಪಕ,ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT