ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರಿಗೆ ಹೆಚ್ಚುವರಿ 4 ಟಿಎಂಸಿ ನೀರು ಸಿಗಲು ನನ್ನ ಪಾತ್ರವೂ ಇದೆ’

ಕೆಲಸ ಮಾಡುತ್ತೇನೆ, ಆದರೆ ಪ್ರಚಾರ ಬಯಸುವುದಿಲ್ಲ: ಡಿ.ವಿ.ಸದಾನಂದಗೌಡ
Last Updated 12 ಏಪ್ರಿಲ್ 2019, 15:08 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ 10 ಟಿಎಂಸಿ ಅಡಿ ಹೆಚ್ಚುವರಿ ನೀರು ಸಿಗಲು ಮಹತ್ವದ ಪಾತ್ರ ವಹಿಸಿದ್ದೇನೆ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹೇಳಿದರು.

ದಿವಂಗತ ಅನಂತಕುಮಾರ್‌ ಅವರ ಜತೆ ಸೇರಿ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಿ ಪ್ರಮಾಣಪತ್ರ ಸಲ್ಲಿಸುವಾಗ ರಾಜ್ಯಕ್ಕೆ ಅನ್ಯಾಯ ಆಗದಂತೆ ಮತ್ತು ಹೆಚ್ಚು ನೀರು ಸಿಗುವಂತೆ ಕಾಳಜಿ ವಹಿಸಿದ್ದೆವು. ಈ ವಿಚಾರ ಅಂದಿನ ನೀರಾವರಿ ಸಚಿವ ಎಂ.ಬಿ.ಪಾಟೀಲ ಅವರಿಗೂ ತಿಳಿದಿದೆ ಎಂದು ಸದಾನಂದಗೌಡ ಅವರು ಪ್ರೆಸ್‌ಕ್ಲಬ್‌ ಆಯೋಜಿಸಿದ್ದ ‘ಮಾತು– ಮಂಥನ’ ಕಾರ್ಯಕ್ರಮದಲ್ಲಿ ತಿಳಿಸಿದರು.

‘ನಾನು ಮಾಡಿದ ಕೆಲಸಗಳಿಗೆ ಪ್ರಚಾರ ಗಿಟ್ಟಿಸುವುದು ನನ್ನ ಜಾಯಮಾನವಲ್ಲ. ಸಂಸದನಾಗಿ, ಸಚಿವರಾಗಿ ರಾಜ್ಯಕ್ಕೆ ಯಾವ ಕೆಲಸಗಳನ್ನು ಮಾಡಬೇಕೊ ಅವುಗಳನ್ನು ಮಾಡಿದ್ದೇನೆ. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಏನೂ ಮಾಡಿಲ್ಲ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಬೆಂಗಳೂರು ಮಹಾನಗರ ಭಾರಿ ಪ್ರಮಾಣದಲ್ಲಿ ಬೆಳೆಯುತ್ತಿರುವುದರಿಂದ ಹೆಚ್ಚಿನ ನೀರಿನ ಅವಶ್ಯಕತೆಯನ್ನು ಇರುವುದನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟೆವು. ಇದರಿಂದ ಬೆಂಗಳೂರು ನಗರಕ್ಕೆ 4 ಟಿಎಂಸಿ ಅಡಿ ಹೆಚ್ಚುವರಿ ನೀರು ಸಿಗಲು ಕಾರಣವಾಯಿತು’ ಎಂದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ಹೊಸ ಮಾರ್ಗ ಮತ್ತು ವಿದ್ಯುದ್ದೀಕರಣಕ್ಕೆ ₹557.10 ಕೋಟಿಯೂ ಸೇರಿ ವಿವಿಧ ಕಾಮಗಾರಿಗಳಿಗೆ ಒಟ್ಟು ₹2,390 ಕೋಟಿ ನೀಡಲಾಗಿದೆ. 70 ವರ್ಷಗಳಿಂದ ನನೆಗುದಿಯಲ್ಲಿದ್ದ ರಕ್ಷಣಾ ಭೂಮಿಯ ವಿವಾದವನ್ನು ಕೇಂದ್ರ ಕಾನೂನು ಸಚಿವನಾಗಿದ್ದಾಗ ಇತ್ಯರ್ಥಪಡಿಸಿದ್ದೇನೆ. ಆಗ ಮನೋಹರ ಪರ್ರಿಕರ್ ರಕ್ಷಣಾ ಸಚಿವರಾಗಿದ್ದರು. ಅವರನ್ನು ಬೆಂಗಳೂರಿಗೆ ಕರೆಸಿ ಅಧಿಕಾರಿಗಳನ್ನು ಕೂರಿಸಿ ಸಮಸ್ಯೆ ಬಗೆಹರಿಸಲಾಯಿತು. ಇದರಿಂದ ಜೆ.ಸಿ.ನಗರದ ಸಮೀಪ ಮಠದಹಳ್ಳಿ ಸರ್ಕಾರಿ ಶಾಲೆ ಹಾಗೂ ರಕ್ಷಣಾ ಇಲಾಖೆ ಮಧ್ಯೆ ಇದ್ದ ವಿವಾದ ಬಗೆಹರಿಯಿತು. ಶಾಲೆ ಆವರಣದಲ್ಲಿ ಸೇನೆ ಹಾಕಿದ್ದ ಟೆಂಟ್‌ಗಳನ್ನು ತೆರವುಗೊಳಿಸಲಾಯಿತು. ಶಾಲೆ ಅಲ್ಲದೆ, 16 ವಿವಿಧ ಕಾಮಗಾರಿಗಳಿಗೆ ಅಡ್ಡಿಯಾಗಿದ್ದ 38 ಎಕರೆ ಜಮೀನನ್ನು ಬಿಟ್ಟುಕೊಡಲು ರಕ್ಷಣಾ ಇಲಾಖೆ ಒಪ್ಪಿಕೊಂಡಿತು ಎಂದರು.

ಬೆಂಗಳೂರಿನ ಸುತ್ತಮುತ್ತಲಿನ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಸಬ್‌ ಅರ್ಬನ್‌ ರೈಲು ಸಂಪರ್ಕಕ್ಕೆ ಇದ್ದ ಅಡ್ಡಿಗಳನ್ನು ತೆರವುಗೊಳಿಸಿ ಚಾಲನೆ ನೀಡಲಾಯಿತು. ಬಜೆಟ್‌ನಲ್ಲಿ ಇದಕ್ಕಾಗಿ ₹15 ಸಾವಿರ ಕೋಟಿ ಮೀಸಲಿಡಲಾಯಿತು ಎಂದು ಸದಾನಂದಗೌಡ ವಿವರಿಸಿದರು.

ಅಪಪ್ರಚಾರ ಅವರ ಮಂತ್ರ: ‘ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ನಡೆಸಲು ಎದುರಾಳಿ ಕಾಂಗ್ರೆಸ್‌ ಕುತಂತ್ರ ನಡೆಸಿದೆ. ಸದಾನಂದಗೌಡ ಸ್ಥಳೀಯರಲ್ಲ, ಜನರಿಗೆ ಸಿಗುವುದಿಲ್ಲ, ಕೆಲಸ ಮಾಡಿಲ್ಲ ಎಂಬುದಾಗಿ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಕುತಂತ್ರಗಳು ನಡೆಯುವುದಿಲ್ಲ’ ಎಂದು ಸದಾನಂದಗೌಡ ಹೇಳಿದರು.

‘ಈ ರಾಜ್ಯದ ಮುಖ್ಯಮಂತ್ರಿ ಆಗಿ, ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ರಾಜ್ಯದ ಯಾವುದೇ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಲು ಅರ್ಹನಿದ್ದೇನೆ. ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಡಿಸಬೇಕು ಎಂದು ಇದೇ ಕೃಷ್ಣಬೈರೇಗೌಡರು ದೆಹಲಿಯಲ್ಲಿ ನನ್ನ ಮನೆಗೆ ಬಂದಿದ್ದರು. ಎಲ್ಲ ಸಂಸದರನ್ನು ಒಳಗೊಂಡ ನಿಯೋಗವನ್ನು ಪ್ರಧಾನಿ ಬಳಗೆ ಕರೆದೊಯ್ದಿದ್ದೆ’ ಎಂದು ತಿಳಿಸಿದರು.

*
ಕೃಷ್ಣಬೈರೇಗೌಡರ ಎಲ್ಲ ಪ್ರಶ್ನೆಗಳಿಗೂ ದಾಖಲೆ ಸಮೇತ ಉತ್ತರ ಕೊಡಲು ತಯಾರು. ಅವರು ಸುಳ್ಳು ಹೇಳುವುದನ್ನು ನಿಲ್ಲಿಸಲಿ.
-ಡಿ.ವಿ.ಸದಾನಂದಗೌಡ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT