ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೆ ಕಂಗಾಲು: ದ್ರಾಕ್ಷಿ ತೋಟ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆಹೋದ ರೈತ

Last Updated 13 ಮಾರ್ಚ್ 2019, 20:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಂದೆಡೆ ಪ್ರಖರ ಬಿಸಿಲು, ಇನ್ನೊಂದೆಡೆ ಬತ್ತಿ ಒಣಗುತ್ತಿರುವ ಕೊಳವೆ ಬಾವಿಗಳಿಂದಾಗಿ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳೆ ರಕ್ಷಣೆಗೆ ರೈತರು ಟ್ಯಾಂಕರ್‌ ನೀರು ಮೊರೆ ಹೋಗುತ್ತಿದ್ದಾರೆ.

ಜಿಲ್ಲೆಯ ಬಹುತೇಕ ರೈತರು ತಮ್ಮ ದ್ರಾಕ್ಷಿ ತೋಟ ಉಳಿಸಿಕೊಳ್ಳಲು ಹಣ ತೆತ್ತು ಟ್ಯಾಂಕರ್ ನೀರು ಖರೀದಿಸಿ ಗಿಡಗಳಿಗೆ ಹರಿಸಿ, ದ್ರಾಕ್ಷಿ ಇಳುವರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ದ್ರಾಕ್ಷಿ ಬೆಳೆಗೆ ಹೆಸರುವಾಸಿಯಾದ ಜಿಲ್ಲೆಯಲ್ಲಿ ರೈತರು ಕೃಷ್ಣಾ, ಶರತ್, ಸೊನೆಕಾ, ರೆಡ್‌ಗ್ಲೋಬ್‌, ಸೂಪರ್ ಸೊನೆಕಾ, ದಿಲ್‌ಖುಷ್, ಅನಾಭಿಶ್, ಕಾಬೂಲ್, ಕಪ್ಪು ದ್ರಾಕ್ಷಿ ಸೇರಿದಂತೆ ವಿವಿಧ ತಳಿಯ ದ್ರಾಕ್ಷಿ ಬೆಳೆಯುತ್ತಾರೆ. ಪ್ರಸ್ತುತ ತೋಟದಲ್ಲಿ ದ್ರಾಕ್ಷಿ ಕಾಯಿಗಳು ಶೇ 60ರಷ್ಟು ಬೆಳವಣಿಗೆ ಹೊಂದಿವೆ. ‘ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ’ ಎಂಬಂತಹ ಸ್ಥಿತಿ ತಲೆದೋರದಂತೆ ನೋಡಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ.

ತಾಲೂಕಿನಲ್ಲಿ 1,500 ಅಡಿಯಿಂದ 1,900 ಅಡಿವರೆಗೆ ಅಂತರ್ಜಲ ಕುಸಿತ ಕಂಡಿದೆ. ತೆರೆದ ಬಾವಿ, ಕೊಳವೆ ಬಾವಿಗಳು ನೀರಿಲ್ಲದೆ ಒಣಗಿವೆ. ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ದ್ರಾಕ್ಷಿಗಾಗಿ ಹೊಸ ಕೊಳವೆಬಾವಿ ಕೊರೆಯಿಸುವ ಧೈರ್ಯ ಸಹ ರೈತರಲ್ಲಿ ಉಳಿದಿಲ್ಲ.

ಹೊಸ ಕೊಳವೆಬಾವಿಯಲ್ಲಿ ನೀರು ಸಿಗಲಿದೆ ಎಂಬ ನಂಬಿಕೆ ಬೆಳೆಗಾರರಲ್ಲಿ ಇಲ್ಲ. ಹೀಗಾಗಿ ಟ್ಯಾಂಕರ್‌ ನೀರೇ ಗತಿ ಎನ್ನುವಂತಾಗಿದೆ. ಬಹುತೇಕ ದ್ರಾಕ್ಷಿ ಬೆಳೆಗಾರರು ನೀರಿನ ಅಭಾವದಿಂದಾಗಿ ದ್ರಾಕ್ಷಿಗೆ ಔಷಧೋಪಚಾರ ಮಾಡುವುದನ್ನು ನಿಲ್ಲಿಸಿದ್ದಾರೆ.

ನಗರದ ವಾಪಸಂದ್ರ ರೈತ ಕೇಶವಕುಮಾರ್ ಅವರು 5 ಎಕರೆಯಲ್ಲಿ ದಿಲ್‌ಖುಷ್‌ ತಳಿ ದ್ರಾಕ್ಷಿ ಬೆಳೆದಿದ್ದು, ತೋಟದಲ್ಲಿದ್ದ ಮೂರು ಕೊಳವೆಬಾವಿಗಳು ಬತ್ತಿದ ಕಾರಣಕ್ಕೆ ಸದ್ಯ ಅವರು ಪ್ರತಿ ದಿನ 20 ಟ್ಯಾಂಕರ್ ನೀರು ಖರೀದಿಸಿ ದ್ರಾಕ್ಷಿ ಬೆಳೆಗೆ ಹಾಯಿಸುತ್ತಿದ್ದಾರೆ.

‘ತೋಟದಲ್ಲಿ ಮೂರು ಕೊಳವೆಬಾವಿಗಳು ಬತ್ತಿವೆ. ಉಳಿದ ಒಂದರಲ್ಲೆ ಕೊಂಚವೇ ನೀರು ಬರುತ್ತಿದೆ. ಅದು ಬೆಳೆಗೆ ಸಾಕಾಗದು. ಹೀಗಾಗಿ ನಿತ್ಯ ಒಂದು ಟ್ಯಾಂಕರ್‌ಗೆ ₹ 200ರಂತೆ 20 ಟ್ಯಾಂಕರ್ ನೀರು ಖರೀದಿಸಿ ತೋಟಕ್ಕೆ ಹಾಯಿಸುತ್ತಿರುವೆ. ನೀರಿಗಾಗಿಯೇ ನಿತ್ಯ ₹ 4,000 ಖರ್ಚಾಗುತ್ತಿದೆ’ ಎಂದರು.

‘ಚಳಿಗಾಲದಲ್ಲಿ ದ್ರಾಕ್ಷಿ ಬೆಳೆದರೆ ರೋಗ ಹರಡುವ ಸಾಧ್ಯತೆ ಹೆಚ್ಚು. ಮಳೆಗಾಲ ದ್ರಾಕ್ಷಿ ಬೆಳೆಯಲು ಯೋಗ್ಯವಲ್ಲ. ಇನ್ನೂ ಬೇಸಿಗೆ ಕಾಲದಲ್ಲಿ ಉತ್ತಮ ಇಳುವರಿ ಬರುತ್ತದೆ ಎಂದು ಬೆಳೆದರೆ ಇದೀಗ ನೀರಿನ ಸಮಸ್ಯೆ. ಹೀಗಾದರೆ ರೈತರ ಸ್ಥಿತಿ ಏನಾಗಬೇಡ’ ಎಂದು ಪ್ರಶ್ನಿಸಿದರು.

**

40 ದಿನಗಳಿಂದ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದೇವೆ. ಫಸಲು ಬರಲು ಇನ್ನು 2 ತಿಂಗಳು ಬೇಕು. ಅಲ್ಲಿಯವರೆಗೆ ಟ್ಯಾಂಕರ್ ನೀರು ಖರೀದಿಸಿ ಹಾಯಿಸಬೇಕು.
-ಕೇಶವಕುಮಾರ್, ವಾಪಸಂದ್ರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT