ಗುರುವಾರ , ಡಿಸೆಂಬರ್ 5, 2019
19 °C

ಶಾಸ್ತ್ರೀಯ ಸಿನಿ ಗಾನಯಾನ

Published:
Updated:

ಎಂಟು ಪ್ರಹರಗಳು. ಎಂಟು ರಾಗಗಳು. ಪ್ರತಿ ಪ್ರಹರಕ್ಕೂ ಒಂದು ಬಂದಿಷ್‌, ಒಂದೊಂದು ಸಿನಿಮಾ ಹಾಡುಗಳು. ಕನ್ನಡದ್ದೊಂದು, ಹಿಂದಿಯದ್ದೊಂದು. ನವರಸಗಳನ್ನು ಸೂಸುವ ಈ ಗೀತಗಾಯನ ಕಾರ್ಯಕ್ರಮ ಇದೇ ಶನಿವಾರ ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಹೆಸರೇ ರಾಗ ಪ್ರಹರ್‌ ದರ್ಶನ್‌.

ಹಗಲಿನ ನಾಲ್ಕು ಪ್ರಹರಗಳು, ರಾತ್ರಿಯ ಪ್ರಹರಗಳು, ಪ್ರತಿ ಪ್ರಹರಿಗೊಂದು ರಾಗ. ಆ ರಾಗದ ಮೂಡು, ಅದೇ ರಾಗದ ಹಾಡು, ಸಂಜೆಯಿಡೀ ರಾಗಸ್ವರಗಳಲ್ಲಿ ಲೀನವಾಗುವಂಥ ಕಾರ್ಯಕ್ರಮ ಏರ್ಪಡಿಸಿದೆ ಬೆಂಗಳೂರಿನ ಶರಣ್‌ ಮ್ಯಸಿಕ್‌ ಅಕಾಡೆಮಿ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಈ ವಿಶೇಷ ಕಾರ್ಯಕ್ರಮದಲ್ಲಿ ಪಂಡಿತ್‌ ರವೀಂದ್ರ ಸೊರಗಾವಿ, ಪಂಡಿತ್‌ ಶರಣ್‌ ಚೌಧರಿ, ಹಾಗೂ ಶಿವಾನಿ ಮಿರಾಜಕರ್‌ ಬಂದಿಷ್‌ಗಳನ್ನು ಪ್ರಸ್ತುತಪಡಿಸಲಿದ್ದಾರೆ. ಹಿನ್ನೆಲೆ ಗಾಯಕರಾದ ಅಜಯ್‌ ವಾರಿಯರ್‌ ಹಾಗೂ ವೀಣಾ ಸೂರಿ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ. ಈ ವಿನೂತನ ಪ್ರಯೋಗ ಆರಂಭವಾಗಿದ್ದು ಕಳೆದೊಂದು ವರ್ಷದಿಂದ.

ಹಿಂದಿ ಹಾಗೂ ಕನ್ನಡದ ಹಾಡುಗಳನ್ನು ಅನಾಯಾಸವಾಗಿ ಗುನುಗುವ ಜನರು ಶಾಸ್ತ್ರೀಯ ಸಂಗೀತದತ್ತ ಒಲವು ತೋರುವುದು ಅಷ್ಟಕ್ಕಷ್ಟೆ. ಈ ಜನ ಸಾಮಾನ್ಯರನ್ನು ಶಾಸ್ತ್ರೀಯ ರಾಗ ಶರಧಿಯಲ್ಲಿ ಮಿಂದೇಳುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಯುವ ಗಾಯಕ ಗಾಯಕಿಯರಿಗೆ ಶಾಸ್ತ್ರೀಯ ಹಿನ್ನೆಲೆ ಇದ್ದರೆ, ಹಾಡೆಂಬುದು ಬರೀ ಗುನುಗುವುದಲ್ಲ. ಅದೊಂದು ತಪ, ಅದೊಂದು ಧ್ಯಾನ. ಆ ಧ್ಯಾನದೊಳು ಶಾರೀರವನ್ನು ಹರಿಯಬಿಟ್ಟರೆ ನಾದದಲೆಗಳು ತರಂಗಗಳಾಗಿ ಹಬ್ಬಲಾರಂಭಿಸುತ್ತವೆ. ಹಾಡುಗಾರರನ್ನೂ, ಕೇಳುಗರನ್ನೂ ಆವರಿಸಿಕೊಳ್ಳುತ್ತ ಹೋಗುತ್ತವೆ.

ಇಡೀ ಸಭಾಂಗಣದಲ್ಲಿರುವವರಿಗೆಲ್ಲ ಸ್ಮೃತಿ ಪಟಲದಲ್ಲಿ ಒಂದೊಂದೇ ನೆನಪುಗಳು ಹರಿದಾಡತೊಡಗುತ್ತವೆ. ಆ ನೆನಪುಗಳನ್ನು ಬೆನ್ನಟ್ಟಿ ಹೋಗದಂತೆ ಇನ್ನಷ್ಟು ಯೋಚನೆಗಳು ಮುದಗೊಳಿಸುವಂತೆ ಮಾಡುತ್ತವೆ. ಕೊನೆಕೊನೆಗೆ ರಾಗ, ಧ್ವನಿ ಸ್ವರಗಳಲ್ಲಿ ಕೇಳುಗ ಒಂದಾಗಿ ಹೋಗುತ್ತಾನೆ. ಹಾಡುಗಾರ ತಾನೇ ಧ್ವನಿಯಾಗುತ್ತಾನೆ. ಕೇಳುಗನೂ ಅದರೊಳಗೆ ಒಂದಾಗುತ್ತಾನೆ. ಇದೊಂದು ಅನುಭೂತಿ. ಈ ಅನುಭೂತಿಯನ್ನು ಅನುಭವಿಸಲು ಎಲ್ಲ ದಶಕಗಳ ಜನಪ್ರಿಯ ಹಾಡುಗಳನ್ನೂ ಬಳಸಿಕೊಂಡಿದ್ದೇವೆ. ಇದು ಎಲ್ಲರಿಗಾಗಿ ಇರುವ ಕಾರ್ಯಕ್ರಮ ಎನ್ನುತ್ತಾರೆ ಕಾರ್ಯಕ್ರಮದ ಪರಿಕಲ್ಪನೆ ಹಾಗೂ ಪ್ರಸ್ತುತ ಪಡಿಸುತ್ತಿರುವ ಶರಣ್‌ ಮ್ಯೂಸಿಕ್‌ ಅಕಾಡೆಮಿಯ ಪಂಡಿತ್‌ ಶರಣ್‌ ಚೌಧರಿ ಅವರು.

60ರ ದಶಕದ ಉಡನ್‌ ಖಟೋಲಾ ಚಿತ್ರದ ಹಾಡೂ ಇದೆ. 90ರ ದಶಕದ ರಂಗೀಲಾ ಚಿತ್ರದ ಹಾಡೂ ಇದೆ. ಇತ್ತೀಚಿನ ಹಾಡುಗಳನ್ನೂ ಸೇರ್ಪಡೆ ಮಾಡಿದ್ದೇವೆ. ನಾ ಧರೋ.. ಓ...ಬಲಮಾ.. ಹಾಡಿನಲ್ಲಿರುವ ಆಲಾಪನೆ ಕನ್ನಡದ ನೀನೆ ರಾಮಾ, ನೀನೇ ಶಾಮಾ ಜೊತೆಗೆ ಒಂದು ಬಂದಿಷ್‌ ರಾಗ ಪ್ರಹರದ ಮೊದಲನೆ ರಾಗ ನಾಥ್‌ ಭೈರವ್‌ನಲ್ಲಿ ಮೂಡಿ ಬಂದರೆ ಎಂಟನೆಯ ರಾಗ ಪ್ರಹರದಲ್ಲಿ ಜಯ ಗೌರಿ ಜಗದೀಶ್ವರಿ ಹಾಡು, ಮೊಹಬ್ಬತ್‌ ಕಿ ರಾಹೋ ಮೇ.. ಹಾಡು ಈ ಎರಡು ಹಾಡುಗಳ ನಡುವೆ ವಿರಹ, ಸರಸ, ಭಕ್ತಿ, ಆರಾಧನೆ, ಪ್ರೇಮ ಎಲ್ಲವೂ ಹರಿದಾಡಲಿವೆ. ಇದೊಂದು ಅನನ್ಯ ಅನುಭವವಾಗಲಿದೆ ಎನ್ನುವುದು ಅವರ ಭರವಸೆ.

ಸಂಜೆ ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಶರಣ್‌ ಮ್ಯುಸಿಕ್‌ ಅಕಾಡೆಮಿ ಇದು ಎರಡನೆಯ ಸಲ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಮ್ಯುಸಿಕ್‌ ಅಕಾಡೆಮಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಒಂದು ಸದವಕಾಶ ದೊರೆಯಲಿದೆ. ವೇದಿಕೆ ಆತಂಕವನ್ನು ಹೊರದೂಡುವ ಜೊತೆಗೆ, ರಿಯಾಜ್‌ ಮಹತ್ವವನ್ನು ಹೇಳಿಕೊಡುವ ಕೆಲಸ ಆಗುತ್ತದೆ. ಮಕ್ಕಳಿಗೆ ಧೀಡೀರ್‌ ಜನಪ್ರಿಯತೆಯ ಬದಲು ಶಾಸ್ತ್ರೀಯ ಕಲಿಕೆಯ ಮಹತ್ವ ಹಾಗೂ ರಿಯಾಜ್‌ ಎಂಬ ತಪದ ಪರಿಚಯ ಈ ಕಾರ್ಯಕ್ರಮದಲ್ಲಿ ಆಗುತ್ತದೆ. ಮಕ್ಕಳೊಟ್ಟಿಗೆ ದೊಡ್ಡವರನ್ನೂ ಸಂಗೀತ ಶರಧಿಯಲ್ಲಿ ಸೆಳೆದೊಯ್ಯುವ ವಿಶೇಷ ಕಾರ್ಯಕ್ರಮವಿದು ಎನ್ನುತ್ತಾರೆ ಅವರು.

ಶನಿವಾರ ಸಂಜೆ (ನ.24) ವಸಂತ ನಗರದ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕವಿದೆ. ಪ್ರಜಾವಾಣಿ ಮಾಧ್ಯಮ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ.. ಬುಕ್‌ ಮೈ ಶೋ ಮುಖಾಂತರ ಟಿಕೇಟುಗಳನ್ನು ಖರೀದಿಸಬಹುದಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು