ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಟಿಟಿಐ ಮುಚ್ಚಲು ಶಿಫಾರಸು

132 ವರ್ಷಗಳ ಧಾರವಾಡ ಶಿಕ್ಷಕಿಯರ ತರಬೇತಿ ಸಂಸ್ಥೆ ಇನ್ನು ನೆನಪು?
ಅಕ್ಷರ ಗಾತ್ರ

ಧಾರವಾಡ: ರಾಜ್ಯದಲ್ಲಿರುವ ಏಳು ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳ (ಟಿಟಿಐ) ಪೈಕಿ ಆರು ತರಬೇತಿ ಸಂಸ್ಥೆಗಳನ್ನು ಮುಚ್ಚಲು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ. ಮೂರು ಡಯಟ್‌ಗಳಲ್ಲಿರುವ ಸೇವಾ ಪೂರ್ವ ತರಬೇತಿ ವಿಭಾಗವನ್ನೂ ಮುಚ್ಚುವಂತೆ ಕೋರಿದೆ.

ಧಾರವಾಡದ ಸರ್ಕಾರಿ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆ, ಕಲಬುರ್ಗಿಯ ಪುರುಷ ಶಿಕ್ಷಕರ ತರಬೇತಿ ಸಂಸ್ಥೆ, ಮೈಸೂರಿನ ಮಹಾರಾಣಿ ಶಿಕ್ಷಕರ ತರಬೇತಿ ಸಂಸ್ಥೆ, ರಾಯಚೂರು ಜಿಲ್ಲೆಯ ಸಿಂಧನೂರು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹಾಗೂ ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯಲ್ಲಿರುವ ಸಂಸ್ಥೆಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ. ಸೇವಾ ಪೂರ್ವ ತರಬೇತಿ ನೀಡುತ್ತಿದ್ದ ಬೆಂಗಳೂರು ದಕ್ಷಿಣ ವಿಭಾಗದ ಡಯಟ್‌, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಡಯಟ್‌ಗಳನ್ನೂ ತಾತ್ಕಾಲಿಕವಾಗಿ ಮುಚ್ಚುವಂತೆ ಶಿಫಾರಸು ಮಾಡಲಾಗಿದೆ.

ಇದಕ್ಕೆ ಕೊಡುತ್ತಿರುವ ಕಾರಣ ಪ್ರಶಿಕ್ಷಣಾರ್ಥಿಗಳ ಸಂಖ್ಯೆ ಕಡಿಮೆ ಎಂಬುದು. ಒಂದು ವೇಳೆ ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದರೆ 132 ವರ್ಷಗಳ ಇತಿಹಾಸವಿರುವ ಧಾರವಾಡದ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆ ಇನ್ನು ನೆನಪಾಗಿ ಉಳಿಯಲಿದೆ. ಕನ್ನಡ ಮತ್ತು ಉರ್ದು ವಿಷಯಗಳಲ್ಲಿ ತರಬೇತಿ ನೀಡುತ್ತಿರುವ ಈ ಸಂಸ್ಥೆಯಲ್ಲಿ ಸದ್ಯ 36 ಪ್ರಶಿಕ್ಷಣಾರ್ಥಿಗಳು ಇದ್ದಾರೆ. ಕನ್ನಡದಲ್ಲಿ 24; ಉರ್ದುವಿನಲ್ಲಿ 12 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.

ಇಲ್ಲಿ ಒಬ್ಬರು ಪ್ರಾಚಾರ್ಯ ಮತ್ತು 9 ಉಪನ್ಯಾಸಕರು ಸೇರಿ ಬೋಧಕ ವರ್ಗದವರು 14 ಹಾಗೂ ಬೋಧಕೇತರ ವಿಭಾಗದ 11 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಉರ್ದು ಮಾಧ್ಯಮದ ಡಿಇಡಿ ಕಾಲೇಜುಗಳು ಇಲ್ಲದಿರುವುದರಿಂದಈ ವಿಭಾಗದ 4 ಉಪನ್ಯಾಸಕರ ಹುದ್ದೆಗಳನ್ನು ಇಲ್ಲಿನ ಡಯಟ್‌ನಲ್ಲಿ ವಿಲೀನಗೊಳಿಸುವಂತೆ ಶಿಫಾರಸು ಮಾಡಲಾಗಿದೆ. ಇಲ್ಲಿನ ಸಿಬ್ಬಂದಿಯ ವೇತನಕ್ಕೆ ಸಂಬಂಧಿಸಿದ ಅಧಿಕಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಲೂ ಶಿಫಾರಸು ಮಾಡಲಾಗಿದೆ.

ರಾಜ್ಯದಲ್ಲಿ ಸದ್ಯ 7 ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳು, 23 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ ಸೇವಾ ಪೂರ್ವ ಶಿಕ್ಷಕ ಶಿಕ್ಷಣವನ್ನು ನೀಡಲಾಗುತ್ತಿದೆ. ಜತೆಗೆ 36 ಅನುದಾನಿತ ಶಿಕ್ಷಕ ತರಬೇತಿ ಕೇಂದ್ರಗಳೂ ಕಾರ್ಯ ನಿರ್ವಹಿಸುತ್ತಿವೆ. ಪ್ರಶಿಕ್ಷಣಾರ್ಥಿಗಳ ಸಂಖ್ಯೆಯಲ್ಲಿನ ಗಣನೀಯ ಇಳಿಕೆ ಮತ್ತು ಕೆಲವೆಡೆ ಶೂನ್ಯ ದಾಖಲಾತಿ ಇರುವ ಸಂಸ್ಥೆಗಳನ್ನು ಮುಚ್ಚುವುದೇ ಸೂಕ್ತ ಎಂದು ಇಲಾಖೆಯ ಶಿಫಾರಸಿನಲ್ಲಿ ಹೇಳಲಾಗಿದೆ. ಪ್ರತಿ ವಿದ್ಯಾರ್ಥಿಗೆ ₹5.5 ಲಕ್ಷ ಖರ್ಚು ಮಾಡಲಾಗುತ್ತಿದೆ. ಇದಕ್ಕೆ 2015 ಮತ್ತು 2016ರ ಮಹಾಲೇಖಪಾಲರ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಒಕ್ಕೂಟದ ಉಪಾಧ್ಯಕ್ಷ ಬಸವರಾಜ ಗುರಿಕಾರ, ‘ಖಾಸಗಿ ಕಾಲೇಜುಗಳನ್ನು ಮುಚ್ಚಿ, ಸರ್ಕಾರಿ ಕಾಲೇಜುಗಳೊಂದಿಗೆ ವಿಲೀನಗೊಳಿಸಲು ಸರ್ಕಾರ ಮುಂದಾಗಬೇಕು. ಈಗಲೂ ಕಾಲಾವಕಾಶವಿದ್ದು, ಸರ್ಕಾರ ಯೋಚಿಸಿ ನಿರ್ಧರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

*
ಕೆಲ ವರ್ಷಗಳಿಂದ ಪ್ರಶಿಕ್ಷಣಾರ್ಥಿಗಳ ದಾಖಲಾತಿ ಗಣನೀಯವಾಗಿ ಕುಸಿದಿದೆ. ಹೀಗಿದ್ದರೂ ನಮ್ಮ ಕೇಂದ್ರದಲ್ಲಿ 36 ವಿದ್ಯಾರ್ಥಿಗಳು ಇದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶ ಎದುರು ನೋಡುತ್ತಿದ್ದೇವೆ.
– ಎಂ.ಎ. ಮುಲ್ಲಾ, ಪ್ರಭಾರ ಪ್ರಾಚಾರ್ಯ, ಸರ್ಕಾರಿ ಶಿಕ್ಷಕಿಯರ ತರಬೇತಿ ಕೇಂದ್ರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT