ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡ ಬಿತ್ತನೆ ಒಪ್ಪಂದ ಮುರಿದರೆ ನಷ್ಟವಿಲ್ಲ !

ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ
Last Updated 7 ನವೆಂಬರ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌– ಜೆಡಿಎಸ್‌ ‘ದೋಸ್ತಿ’ ಸರ್ಕಾರ ಮೋಡ ಬಿತ್ತನೆಗಾಗಿ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ವರ್ಷ (2020) ಮೋಡ ಬಿತ್ತನೆ ನಡೆಸಬೇಕೆ ಬೇಡವೇ ಎಂಬುದನ್ನು ಸರ್ಕಾರವೇ ನಿರ್ಧರಿಸಬೇಕಿದೆ.

ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರೂ ಅದನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲು ಅವಕಾಶ ಇದೆ. ಒಂದು ವೇಳೆ ಮುಂದಿನ ವರ್ಷ ಮಳೆ ಬಾರದೇ ಬರ ಆವರಿಸಿದರೆ ಏನು ಮಾಡಬೇಕು ಎಂಬುದನ್ನು ರೈತರ ಹಿತದೃಷ್ಟಿ ಇಟ್ಟುಕೊಂಡು ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಪ್ಪಂದ ರದ್ದು ಮಾಡಿದರೆ ಸರ್ಕಾರಕ್ಕೆ ನಷ್ಟವಿಲ್ಲ. ಕಂಪನಿಗೆ ಹಣ ಕೊಡಬೇಕಾಗಿಯೂ ಇಲ್ಲ ಎಂಬ ಅಂಶವನ್ನು ಒಪ್ಪಂದ ಒಳಗೊಂಡಿದೆ. ಸರ್ಕಾರ 90 ದಿನಗಳ ಅವಧಿಯಲ್ಲಿ ಮೋಡ ಬಿತ್ತನೆಗೆ ಸಮಯ ನಿಗದಿ ಮಾಡಿತ್ತು ಎಂದು ಅವರು ವಿವರಿಸಿದರು.

ಈ ಹಿಂದಿನ ಅನುಭವಗಳ ಆಧಾರದಲ್ಲಿ 90 ದಿನಗಳಲ್ಲಿ 400 ಗಂಟೆಗಳಷ್ಟು ಮೋಡ ಬಿತ್ತನೆ ಮಾಡಬ
ಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಬರದ ಸ್ಥಿತಿ ಅಕ್ಟೋಬರ್‌ ಬಳಿಕವೂ ಮುಂದುವರಿದಿದ್ದರೆ, 600 ಗಂಟೆ ಮೋಡ ಬಿತ್ತನೆ ಮಾಡಬೇಕಾಗುತ್ತಿತ್ತು. ಈ ಕಾರಣಕ್ಕಾಗಿ ಒಪ್ಪಂದದಲ್ಲಿ ನಿಶ್ಚಿತ ವೆಚ್ಚ(ಫಿಕ್ಸೆಡ್‌ ಕಾಸ್ಟ್‌) ಮತ್ತು ಬದಲಾಯಿಸಬಹುದಾದ ವೆಚ್ಚ (ವೇರಿಯೆಬಲ್ ಕಾಸ್ಟ್‌) ಸೇರಿಸಲಾಗಿತ್ತು. 400 ಗಂಟೆಗಳ ಅವಧಿಗೆ ನಿಶ್ಚಿತ ವೆಚ್ಚವಿದ್ದು, 90 ದಿನ ಅಥವಾ 400 ಗಂಟೆಗಳು ಮೀರಿದರೆ ಬದಲಾಯಿಸಬಹುದಾದ ವೆಚ್ಚ ಪಾವತಿ ಮಾಡಲು ಒಪ್ಪಿಗೆ ನೀಡಲಾಗಿತ್ತು ಎಂದು ಹೇಳಿದರು.

2017 ರಲ್ಲಿ ಮೋಡ ಬಿತ್ತನೆ 60 ದಿನಗಳಿಗೆ ನಿಗದಿ ಮಾಡಲಾಗಿತ್ತು. ಆದರೆ, 16 ದಿನಗಳು ಹೆಚ್ಚಿಗೆ ಮೋಡ ಬಿತ್ತನೆ ನಡೆಯಿತು. ಆದರೆ ಆ 16 ದಿನಗಳ ವೆಚ್ಚವನ್ನು ಮನ್ನಾ ಮಾಡಲು ಕೋರಿದ್ದೆವು. ಕಂಪನಿ ಒಪ್ಪಿಕೊಂಡಿತ್ತು. ಆ ಸಂದರ್ಭದಲ್ಲಿ ಮೋಡ ಬಿತ್ತನೆಯಿಂದ ಉತ್ತಮ ಮಳೆ ಆಯಿತು ಎಂದು ವಿಜ್ಞಾನಿಗಳು ವರದಿ ನೀಡಿದ ಹಿನ್ನೆಲೆಯಲ್ಲಿ, ಈ ವರ್ಷದ ಆರಂಭದಲ್ಲಿ ಮೋಡ ಬಿತ್ತನೆಗೆ ಚಿಂತನೆ ನಡೆಸಲಾಯಿತು ಎಂದರು.

ಈ ವರ್ಷ ಅಕ್ಟೋಬರ್‌ 25 ರವರೆಗೆ ಮೋಡ ಬಿತ್ತನೆಗೆ ಅವಧಿ ನಿಗದಿ ಮಾಡಲಾಗಿತ್ತು. ಒಂದು ವೇಳೆ ಬರ ಪರಿಸ್ಥಿತಿ ಮುಂದುವರಿದಿದ್ದರೆ, ನ.10 ರವರೆಗೆ ಮುಂದುವರಿಸುವ ಆಲೋಚನೆ ಇತ್ತು ಎಂದು ಅವರು ವಿವರಿಸಿದರು.

ಎರಡು ವರ್ಷಗಳ ಒಪ್ಪಂದಕ್ಕೆ ಮುಖ್ಯ ಕಾರಣ, ಮುಂದಿನ ವರ್ಷ ಮೋಡ ಬಿತ್ತನೆಗೆ ಸಾಕಷ್ಟು ಮೊದಲೇ ಸಿದ್ಧತೆ ನಡೆಸಿಕೊಳ್ಳಲು ಅನುಕೂಲವಾಗುತ್ತದೆ ಎನ್ನುವುದು. ರಾಜ್ಯವು ಕಳೆದ ಕೆಲವು ವರ್ಷಗಳಿಂದ ನಿರಂತರ ಬರಕ್ಕೆ ತುತ್ತಾಗಿತ್ತು. ಮುಂಗಾರು ಕೈಕೊಟ್ಟು ಕಡೇ ಹಂತದಲ್ಲಿ ಟೆಂಡರ್‌ ಕರೆದರೆ, ಮೋಡ ಬಿತ್ತನೆಗೆ ಸೂಕ್ತ ವಾತಾವರಣ ಇರುವುದಿಲ್ಲ. ಆಗ ಮೋಡ ಬಿತ್ತನೆ ಮಾಡಿದರೂ ಪ್ರಯೋಜನ ಆಗುವುದಿಲ್ಲ. ಜೂನ್‌ನಿಂದ ಆಗಸ್ಟ್‌ ಕೊನೆಯವರೆಗೆ ಮೋಡ ಇರುತ್ತದೆ. ಮಳೆ ಬಾರದೇ ಇದ್ದರೂ ಕೃತಕ ಮಳೆ ತರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜಕಾರಣಿ ಮಕ್ಕಳೆಂಬುದೇ ವಿವಾದ: ಟೆಂಡರ್‌ ಪಡೆದ ಕಂಪನಿಯು ರಾಜಕಾರಣಿಗಳ ಮಕ್ಕಳಿಗೆ ಸೇರಿದ್ದು ಎಂಬುದೇಈಗ ವಿವಾದಕ್ಕೆ ಕಾರಣವಾಗಿದೆ. ಮೋಡ ಬಿತ್ತನೆಗೆ ಇ–ಟೆಂಡರ್‌ ಕರೆಯಲಾಗುತ್ತದೆ. 2017 ರಲ್ಲೂ ಇದೇ ಕಂಪನಿ ಟೆಂಡರ್‌ ಪಡೆದಿತ್ತು. ಮಹಾರಾಷ್ಟ್ರ ಸರ್ಕಾರ ಅಲ್ಲಿನ ಬರ ಪ್ರದೇಶದಲ್ಲಿ ಮೋಡ ಬಿತ್ತನೆ ನಡೆಸಲು ಮತ್ತು ಪುಣೆಯಲ್ಲಿರುವ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಮೀಟಿರಿಯಾಲಜಿಗೆ ಕೂಡ ಇದೇ ಕಂಪನಿಯಿಂದ ಮೋಡ ಬಿತ್ತನೆ ಮಾಡಿಸುತ್ತಿವೆ ಎಂಬುದು ಇಲಾಖೆ ನೀಡುವ ಮಾಹಿತಿ.

ಸಮ್ಮಿಶ್ರ ಸರ್ಕಾರದವರೇ ಉತ್ತರಿಸಬೇಕು
‘ಎರಡು ವರ್ಷ ಮೋಡ ಬಿತ್ತನೆಗೆ ಒಪ್ಪಂದ ಮಾಡಿಕೊಂಡಿದ್ದು ಏಕೆ ಎಂಬುದನ್ನು, ಹಿಂದೆ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದವರೇ ಉತ್ತರಿಸಬೇಕು. ನಾವಂತು ಮೋಡ ಬಿತ್ತನೆಯನ್ನು ನಿಲ್ಲಿಸಿದ್ದೇವೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

‘ಯಾವ ಕಂಪನಿಗೆ ಮೋಡ ಬಿತ್ತನೆ ಗುತ್ತಿಗೆ ನೀಡಲಾಗಿತ್ತು. ಎರಡು ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದ್ದು ಏಕೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇನೆ. ಟೆಂಡರ್‌ ಒಪ್ಪಂದದಲ್ಲಿ ಏನಿದೆ’ ಎಂಬುದು ಗೊತ್ತಿಲ್ಲ ಎಂದೂ ಅವರು ಹೇಳಿದರು.

ರಾಜಕಾರಣಿಗಳ ಮಕ್ಕಳ ಕಂಪನಿ: ಕ್ಯಾತಿ ಕ್ಲೈಮೆಟ್‌ ಮಾಡಿಫಿಕೇಷನ್‌ ಕನ್ಸಲ್ಟಂಟ್‌ ನಿರ್ದೇಶಕರು ರಾಜಕಾರಣಿಗಳ ಮಕ್ಕಳು. ಈ ಕಾರಣಕ್ಕೆ ವಿವಾದ ಸೃಷ್ಟಿಯಾಗಿದೆ. ಕಾಂಗ್ರೆಸ್‌ ನಾಯಕ ಕೆ.ಬಿ.ಕೋಳಿವಾಡ ಪುತ್ರ ಪ್ರಕಾಶ್‌ ಕೋಳಿವಾಡ, ಉಪಮುಖ್ಯಮಂತ್ರಿ ಗೋವಿಂದಕಾರಜೋಳ ಅವರ ಪುತ್ರ ಅರವಿಂದ ಕಾರಜೋಳ ಕಂಪನಿ ನಿರ್ದೇಶಕರು ಮತ್ತು ಪಾಲುದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT