ಗುರುವಾರ , ಆಗಸ್ಟ್ 22, 2019
27 °C
ವಿಜಯಪುರದಲ್ಲಿ ಯಶಸ್ವಿ, ಮೈಸೂರು ಭಾಗದಲ್ಲಿ ವಿಫಲ

ಬಿತ್ತನೆಗೆ ಮೋಡಗಳೇ ಇಲ್ಲ!

Published:
Updated:

ಬೆಂಗಳೂರು: ರಾಜ್ಯದಲ್ಲಿ ಎರಡು ವಿಮಾನಗಳ ಮೂಲಕ ಮೋಡ ಬಿತ್ತನೆ ನಡೆಯುತ್ತಿದ್ದರೂ, ಮಳೆ ಸುರಿಸುವ ಮೋಡಗಳ ಕೊರತೆ ಎದುರಾಗಿದೆ. ಹೀಗಾಗಿ ರಾಜ್ಯದ ದಕ್ಷಿಣ ಭಾಗದಲ್ಲಿ ಮೋಡ ಬಿತ್ತನೆಗೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ.

‘ದಕ್ಷಿಣ ಒಳನಾಡು, ಮಂಡ್ಯ–ಮೈಸೂರು ಸುತ್ತಮುತ್ತ ಮೋಡ ಬಿತ್ತನೆಗೆ ಅಗತ್ಯವಾದ ಮೋಡಗಳು ಕಾಣಿಸುತ್ತಿಲ್ಲ. ಆದರೂ ತಾಂತ್ರಿಕ ಪರಿಣಿತರ ಮಾಹಿತಿ ಪಡೆದುಕೊಂಡು ಮೋಡ ಲಭ್ಯತೆ ನೋಡಿಕೊಂಡು ಬಿತ್ತನೆ ಕಾರ್ಯ ನಡೆಯುತ್ತಿದೆ’ ಎಂದು ಮೋಡ ಬಿತ್ತನೆ ಯೋಜನೆಯ ಹೊಣೆ ಹೊತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಎಂಜಿನಿಯರ್‌ ಡಾ.ಎಚ್‌.ಎಸ್.ಪ್ರಕಾಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಡಗು ಭಾಗದಲ್ಲಿ ಸಾಕಷ್ಟು ಮಳೆಯಾಗಿದೆ. ಅಲ್ಲಿ ಮೋಡಬಿತ್ತನೆ ಮಾಡಿದರೆ ತೊಂದರೆ ಉಂಟಾಗುತ್ತದೆ. ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿಯಬೇಕಿದ್ದರೆ ಅಲ್ಲಿ ಮಳೆ ತರಿಸುವ ಮೋಡಗಳು ಕಾಣಿಸಬೇಕು. ಆದರೆ ಅದರ ಕೊರತೆ ಇದೆ. ಹೀಗಿದ್ದರೂ ಫಲಿತಗೊಳ್ಳುವ ಸಾಮರ್ಥ್ಯದ ಮೋಡ ಕಂಡ ತಕ್ಷಣ ಅಲ್ಲಿ ಬೀಜ ಬಿತ್ತನೆಯ ಪ್ರಯತ್ನ ಸಾಗಿದೆ. ಮಲೆನಾಡು ಪ್ರದೇಶದಲ್ಲೂ ಇದೇ ಪ್ರಯತ್ನ ನಡೆದಿದೆ. ವಿಜಯಪುರ ಭಾಗದಲ್ಲಿ ಮೋಡ ಬಿತ್ತನೆಗೆ ಯಶಸ್ಸು ದೊರೆತಿರುವುದು ಗೊತ್ತಾಗಿದೆ’ ಎಂದು ಅವರು ಹೇಳಿದರು.

‘ಹುಬ್ಬಳ್ಳಿ, ಬೆಳಗಾವಿ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿದ್ದರೂ, ಕೊಪ್ಪಳ, ರಾಯಚೂರು ಮತ್ತಿತರ ಕಡೆಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಮೋಡ ಬಿತ್ತನೆಯ ನಮ್ಮ ಗುರಿ ಹೈದರಾಬಾದ್‌ ಕರ್ನಾಟಕ ಭಾಗದತ್ತ ಇದ್ದು, ಸೂಕ್ತ ಮೋಡ ಲಭ್ಯತೆ ನೋಡಿಕೊಂಡು ಬಿತ್ತನೆ ನಡೆಯಲಿದೆ. ಹುಬ್ಬಳ್ಳಿ ಮತ್ತು ಮೈಸೂರು ವಿಮಾನನಿಲ್ದಾಣಗಳಲ್ಲಿ ಎರಡು ವಿಮಾನಗಳು ಸಜ್ಜಾಗಿ ನಿಂತಿವೆ. ಸಂದೇಶ ಬಂದ ತಕ್ಷಣ ಅವುಗಳು ಮೋಡ ಬಿತ್ತನೆ ಮಾಡಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಈ ಪ್ರಯತ್ನಕ್ಕೆ ಯಶಸ್ಸು ಸಿಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ’ ಎಂದರು.

ಮೈಸೂರು, ಮಲೆನಾಡಿನಲ್ಲಿ ಮೋಡಬಿತ್ತನೆಗೆ ಸೂಚನೆ
ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿರುವ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಮೋಡಬಿತ್ತನೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಮೋಡ ಬಿತ್ತನೆ ನಡೆದ ಭಾಗದಲ್ಲಿ ಅದು ಯಶಸ್ವಿಯಾಗಿರುವ ಲಕ್ಷಣ ಇದೆ. ಈ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆ ಸುರಿಯುವ ವಿಶ್ವಾಸ ಇದೆ ಎಂದರು.

Post Comments (+)