ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗದಲ್ಲಿ ಮೋಡಬಿತ್ತನೆ

ಮಳೆ ತರಿಸುವ ಪ್ರಯತ್ನ ಇನ್ನೂ ಕೆಲ ಕಾಲ ಮುಂದುವರಿಕೆ
Last Updated 26 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ 78 ಗಂಟೆಗಳ ಮೋಡ ಬಿತ್ತನೆ ಕಾರ್ಯಾಚರಣೆ ನಡೆದಿದ್ದು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ತರಿಸುವ ಪ್ರಯತ್ನ ನಡೆಯಲಿದೆ.

‘ಮೈಸೂರು ಸುತ್ತಮುತ್ತಲಿನ ಭಾಗದಲ್ಲಿ ಮಳೆಯಾಗಿದ್ದರಿಂದ ಮೋಡ ಬಿತ್ತನೆಯ ಎರಡೂ ವಿಮಾನಗಳನ್ನು ಹುಬ್ಬಳ್ಳಿಗೆ ಕಳುಹಿಸಲಾಗಿತ್ತು. ಇದೀಗ ಮತ್ತೆ ಒಂದು ವಿಮಾನವನ್ನು ಮೈಸೂರಿಗೆ ತರಿಸಿಕೊಳ್ಳಲಾಗುತ್ತಿದ್ದು, ಬರ ಪೀಡಿತ ಮೂರು ಜಿಲ್ಲೆಗಳಲ್ಲಿ ಮೋಡ ಬಿತ್ತನೆ ನಡೆಸಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮುಖ್ಯ ಎಂಜಿನಿಯರ್‌ ಡಾ. ಎಚ್‌. ಎಸ್‌. ಪ್ರಕಾಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೋಡ ಬಿತ್ತನೆ ಸ್ಥಗಿತಗೊಂಡಿರಲಿಲ್ಲ. ಹುಬ್ಬಳ್ಳಿಯಿಂದ ಬಾಗಲಕೋಟೆ, ಬೀದರ್‌, ವಿಜಯಪುರ, ಕಲಬುರ್ಗಿ, ಕೊಪ್ಪಳ ರಾಯಚೂರು ಮತ್ತು ಬಳ್ಳಾರಿ ಭಾಗದಲ್ಲಿ ಮೋಡಗಳ ಲಭ್ಯತೆ ನೋಡಿಕೊಂಡು ಮೋಡ ಬಿತ್ತನೆ ಕಾರ್ಯಾಚರಣೆ ನಡೆಯುತ್ತಿತ್ತು. ಜುಲೈ 27ರಿಂದ ಆರಂಭವಾಗಿದ್ದ ಈ ಮೊಡಬಿತ್ತನೆ ಇನ್ನೂ ಎರಡು ತಿಂಗಳು ನಡೆಯಲಿದೆ’ ಎಂದರು.

ನಾಲ್ವರು ತಜ್ಞರ ತಂಡ: ಮೋಡ ಬಿತ್ತನೆ ಯಶಸ್ವಿಯಾಗಿದೆಯೇ ಎಂಬುದನ್ನು ತಿಳಿಯಲು ಪುಣೆಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್ ಮ್ಯಾನೇಜ್‌ಮೆಂಟ್‌ (ಐಐಟಿಎಂ) ಸಂಸ್ಥೆಯ ಮೂವರು ವಿಜ್ಞಾನಿಗಳು ಹಾಗೂ ಹವಾಮಾನ ಇಲಾಖೆಯ ಒಬ್ಬರು ತಜ್ಞರನ್ನೊಳಗೊಂಡ ತಂಡ ಈಚೆಗೆ ರಾಜ್ಯಕ್ಕೆ ಭೇಟಿ ನೀಡಿ ಪುಣೆಗೆ ಹಿಂದಿರುಗಿದ್ದು, ಶೀಘ್ರ ವರದಿ ನೀಡಲಿದೆ.

‘ಕಳೆದ ವರ್ಷ ಮೋಡ ಬಿತ್ತನೆ ನಡೆದಿರಲಿಲ್ಲ. 2017ರಲ್ಲಿ ಮೋಡ ಬಿತ್ತನೆ ನಡೆದ ಬಳಿಕ ಅದರ ಫಲಶ್ರುತಿಯ ಅಧ್ಯಯನ ನಡೆಸಲಾಗಿತ್ತು. 3 ತಿಂಗಳ ಬಳಿಕ ವರದಿ ಬಂದಿತ್ತು. ಆಗ ಶೇ 27ರಷ್ಟು ಅಧಿಕ ಮಳೆ ಬಂದುದು ಗೊತ್ತಾಗಿತ್ತು. ಈ ಬಾರಿ ಮೋಡ ಬಿತ್ತನೆ ನಡೆಯುತ್ತಿರುವ ಸಂದರ್ಭದಲ್ಲೇ ಫಲಶ್ರುತಿಯೂ ಗೊತ್ತಾಗಬೇಕು ಎಂಬ ನಿಟ್ಟಿನಲ್ಲಿ ತಜ್ಞರು ಅಧ್ಯಯನ ನಡೆಸು
ತ್ತಿದ್ದಾರೆ’ ಎಂದು ಪ್ರಕಾಶ್ ಕುಮಾರ್‌ ತಿಳಿಸಿದರು.

‘ಕರಾವಳಿ ಭಾಗದಲ್ಲಿ ನೈಸರ್ಗಿಕ ಮಳೆ ಸುರಿಯುತ್ತಿದೆ. ಅಲ್ಲಿ ಮೋಡ ಬಿತ್ತನೆ ಮಾಡಿಯೇ ಇಲ್ಲ. ಮೋಡಗಳ ಲಭ್ಯತೆ ನೋಡಿಕೊಂಡು ಮಳೆ ಅತಿ ಕಡಿಮೆ ಸುರಿಯುವ ಪ್ರದೇಶಗಳಲ್ಲಿ ಮಳೆ ತರಿಸುವ ಪ್ರಯತ್ನ ನಿರಂತರ ಸಾಗಿದೆ. ತಜ್ಞರು ಪ್ರತಿದಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

***

₹ 91 ಕೋಟಿ :ಎರಡು ವರ್ಷಗಳ ಮೋಡಬಿತ್ತನೆ ವೆಚ್ಚ

₹ 45 ಕೋಟಿ : ಈ ವರ್ಷ ಮಾಡಲಿರುವ ವೆಚ್ಚ

300 ಗಂಟೆ :ಎರಡು ವಿಮಾನಗಳು ನಡೆಸಲಿರುವ ಕಾರ್ಯಾಚರಣೆ

78 ಗಂಟೆ :ಒಂದು ತಿಂಗಳಲ್ಲಿ ನಡೆದಿರುವ ಕಾರ್ಯಾಚರಣೆ

222 ಗಂಟೆ :ಈ ಬಾರಿಆಗಬೇಕಿರುವ ಕಾರ್ಯಾಚರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT