ಅಂಗೈಯಲ್ಲೇ ಪೊಲೀಸ್‌ ಸೇವೆಗಳು; ನೂತನ ಆ್ಯಪ್‌ಗೆ ಚಾಲನೆ

7
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಚಾಲನೆ ; ಅಪರಾಧಗಳ ಮಾಹಿತಿ ನೀಡಲು

ಅಂಗೈಯಲ್ಲೇ ಪೊಲೀಸ್‌ ಸೇವೆಗಳು; ನೂತನ ಆ್ಯಪ್‌ಗೆ ಚಾಲನೆ

Published:
Updated:
ನೂತನ ಆ್ಯಪ್

ಬೆಂಗಳೂರು: ನಾಗರಿಕರಿಗೆ ತಮ್ಮ ಅಂಗೈಯಲ್ಲೇ ಇನ್ನು ಮುಂದೆ ಪೊಲೀಸ್ ಸೇವೆ ಸಿಗಲಿದೆ. ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿರಬೇಕು ಎಂಬ ಉದ್ದೇಶದಿಂದ ‘ಕರ್ನಾಟಕ ರಾಜ್ಯ ಪೊಲೀಸ್’ ಆ್ಯಪ್‌ ಅನ್ನು ಇಲಾಖೆ ರೂಪಿಸಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ನೂತನ ಆ್ಯಪ್‌ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಈ ಆ್ಯಪ್‌ ಮೂಲಕ ಜನಸಾಮಾನ್ಯರಿಗೆ ಪೊಲೀಸರು ಮತ್ತಷ್ಟು ಹತ್ತಿರವಾಗಲಿದ್ದಾರೆ. ಜನ ಹಾಗೂ ಪೊಲೀಸರು, ಈ ಆ್ಯಪ್‌ನ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಕೋರಿದರು.

ಕೋಮು ಸೌಹಾರ್ದತೆ ಕದಡಿದರೆ  ಕ್ರಮ

‘ನಾನು ಮುಖ್ಯಮಂತ್ರಿ ಆಗಿರುವವರೆಗೂ ರಾಜ್ಯದಲ್ಲಿ ಕೋಮು ಗಲಭೆ ಆಗಬಾರದು. ಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಆ ಸಂಘಟನೆ, ಈ ಸಂಘಟನೆ ಎಂದು ಹೆಸರು ಹೇಳುವುದಿಲ್ಲ. ಯಾವುದೇ ಸಂಘಟನೆ ಹಾಗೂ ಅದರ ಸದಸ್ಯರು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಬಾರದು. ಪ್ರಚೋದನಾ ಕೃತ್ಯಗಳು ಪುನರಾವರ್ತನೆಯಾದರೆ ಕಠಿಣ ಕ್ರಮ ಎದುರಿಸಬೇಕಾದಿತು’ ಎಂದು ಎಚ್ಚರಿಸಿದರು.

ಅಧಿಕಾರಿಗಳೇ ಹೊಣೆ

ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ‘ಕೋಮು ಗಲಭೆ ಹಾಗೂ ಯಾವುದೇ ಗಂಭೀರ ಅಪರಾಧಗಳು ನಡೆದರೆ, ಆಯಾ ಜಿಲ್ಲೆ ಹಾಗೂ ಕಮಿಷನರೇಟ್‌ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಅಪರಾಧಗಳ ಸಂಖ್ಯೆವಾರು ದೇಶದಲ್ಲೇ ಕರ್ನಾಟಕ 10 ಸ್ಥಾನದಲ್ಲಿದೆ. ಎಚ್ಚರಿಕೆಯಿಂದ ಕೆಲಸ ಮಾಡಿ, ಅಪರಾಧ ಸಂಖ್ಯೆ ಇಳಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ರಾಜ್ಯದಲ್ಲಿ 14 ಸಾವಿರ ಕಾನ್‌ಸ್ಟೆಬಲ್ ಹುದ್ದೆ ಖಾಲಿ ಇದ್ದು, ಭರ್ತಿಗೆ ಕ್ರಮ ಕೈಗೊಳ್ಳಲಿದ್ದೇವೆ. ಪೊಲೀಸ್ ಗೃಹ ಯೋಜನೆಯಡಿ 11 ಸಾವಿರ ಮನೆಗಳ ನಿರ್ಮಾಣ 2020ರ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದರು.

‘ರಾಜ್ಯದಲ್ಲಿ ಉಪ ಗಸ್ತು (ಸಬ್‌ ಬೀಟ್) ಜಾರಿಯಲ್ಲಿದ್ದು, ಅಪರಾಧಗಳು ಹತೋಟಿಗೆ ಬಂದಿವೆ. ಇದೇ ಮಾದರಿಯಲ್ಲೇ ದೇಶದ ಎಲ್ಲ ರಾಜ್ಯಗಳಲ್ಲಿ ಸಬ್ ಬೀಟ್‌ ವ್ಯವಸ್ಥೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ರಾಜ್ಯ ಸರ್ಕಾರದ ಹೆಮ್ಮೆ’ ಎಂದರು.

ಮೊಬೈಲ್‌ ನಿರ್ಬಂಧ: ಪೊಲೀಸ್‌ ಅಧಿಕಾರಿಗಳು ಸಭೆಯೊಳಗೆ ಮೊಬೈಲ್‌ ತೆಗೆದುಕೊಂಡು ಹೋಗುವುದನ್ನು ಇದೇ ಮೊದಲ ಬಾರಿಗೆ ನಿರ್ಬಂಧಿಸಲಾಗಿತ್ತು. ಎಲ್ಲ ಅಧಿಕಾರಿಗಳು, ಸಭಾಭವನದ ಹೊರಗೆಯೇ ಮೊಬೈಲ್‌ ಇಟ್ಟು ಹೋಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !