ಮಳೆ ಬಾಧಿತ ಜಿಲ್ಲೆಗಳಿಗೆ ₹ 200 ಕೋಟಿ ಬಿಡುಗಡೆ

7

ಮಳೆ ಬಾಧಿತ ಜಿಲ್ಲೆಗಳಿಗೆ ₹ 200 ಕೋಟಿ ಬಿಡುಗಡೆ

Published:
Updated:

ಬೆಂಗಳೂರು: ಭಾರಿ ಮಳೆಯಿಂದ ಪ್ರವಾಹ, ಭೂಕುಸಿತದಿಂದ ತೊಂದರೆಗೆ ಸಿಲುಕಿರುವ ಕೊಡಗು, ದಕ್ಷಿಣ–ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಕ್ಷಣವೇ ₹ 200 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಪ್ರವಾಹ ಮತ್ತು ಭೂಕುಸಿತದಿಂದ ತೊಂದರೆಗೀಡಾಗಿರುವ ಜಿಲ್ಲೆಗಳ ವಸ್ತು ಸ್ಥಿತಿ ಕುರಿತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಈ ಜಿಲ್ಲೆಗಳಲ್ಲಿ ಆಗಿರುವ ನಷ್ಟದ ಕುರಿತು ಎರಡು ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೂ ಕುಮಾರಸ್ವಾಮಿ ಸೂಚಿಸಿದರು.

ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿಯೇ ವಾಸ್ತವ್ಯ ಹೂಡಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. 29 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು 1755 ಜನರಿಗೆ ಆಶ್ರಯ ನೀಡಲಾಗಿದೆ.
ಕೊಡಗಿನಲ್ಲಿ ಇಬ್ಬರು, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದರು.

ಕೊಡಗಿನಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ಸೇನೆಯ ನೆರವು ಪಡೆಯಲಾಗುತ್ತಿದೆ. ಇವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಯತ್ನಿಸಲಾಯಿತಾದರೂ ಹವಾಮಾನ ವೈಪರೀತ್ಯದಿಂದಾಗಿ ಸಾಧ್ಯವಾಗಿಲ್ಲ. ಶುಕ್ರವಾರ ಬೆಳಿಗ್ಗೆ ಅವರ ರಕ್ಷಣೆಗೆ ಮರು ಪ್ರಯತ್ನ ನಡೆಸಲಾಗುವುದು.  ಇವರಿಗೆ ಆಹಾರದ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿಗಳ ವರದಿ ಆಧರಿಸಿ, ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ₹ 237.55 ಕೋಟಿ ಅನುದಾನ ಲಭ್ಯವಿದ್ದು, ಕೂಡಲೇ ಪರಿಹಾರ ಒದಗಿಸಲು ಯಾವುದೇ ಕೊರತೆ ಇಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !