ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ತಂದಾದರೂ ರೈತರಿಗೆ ಯೋಜನೆ: ಯಡಿಯೂರಪ್ಪ

Last Updated 26 ಜನವರಿ 2020, 19:47 IST
ಅಕ್ಷರ ಗಾತ್ರ

ಮೈಸೂರು: ‘ಸಾಲ ತಂದಾದರೂ ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಉತ್ತಮ ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ಭರವಸೆ ನೀಡಿದರು.

ಸುತ್ತೂರು ಜಾತ್ರೆಯ ಸಮಾರೋಪದಲ್ಲಿ ಮಾತನಾಡಿ, ‘ಮಾರ್ಚ್‌ 5 ರಂದು ಬಜೆಟ್‌ ಮಂಡಿಸಲಿದ್ದೇನೆ. ರೈತರ ಹಿತ ಕಾಪಾಡಲು ಸಾಧ್ಯವಾಗುವ ಎಲ್ಲಾ ಪ್ರಯತ್ನ ಮಾಡುವೆ. ಬೇರೆ ಯೋಜನೆಗಳಿಗೆ ಹಣ ಕಡಿಮೆಯಾದರೂ ಪರವಾಗಿಲ್ಲ, ರೈತರ ಜೀವನದಲ್ಲಿ ಬದಲಾವಣೆ ತರುವುದಕ್ಕೆ ಬದ್ಧನಾಗಿದ್ದೇನೆ. ಅದಕ್ಕಾಗಿ ಹಣ ಹೊಂದಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ’ ಎಂದರು.

‘ನಾನು ಹೆಚ್ಚು ಮಾತನಾಡಿ ಜನರನ್ನು ತೃಪ್ತಿಪಡಿಸುವ ಅಗತ್ಯವಿಲ್ಲ. ರೈತ ನೆಮ್ಮದಿಯಿಂದ ಬದುಕಬೇಕು. ಆತನ ಬೆಳೆಗೆ ಸೂಕ್ತ ಬೆಲೆ ಸಿಗಬೇಕಿದೆ. ಸರ್ಕಾರದ ಖಜಾನೆ ಈ ನಾಡಿನ ಅನ್ನದಾತನ ಕಣ್ಣು ಒರೆಸಲು ಇರುವಂತದ್ದು’ ಎಂದು ಅವರು ನುಡಿದರು.

ಭಾವಿ ಸಚಿವ ಸುಧಾಕರ್: ವೇದಿಕೆಯಲ್ಲಿದ್ದ ಶಾಸಕ ಡಾ.ಕೆ.ಸುಧಾಕರ್ ಅವರ ಹೆಸರು ಪ್ರಸ್ತಾವಿಸುವಾಗ ‘ಬರುವ ಕೆಲವೇ ದಿನಗಳಲ್ಲಿ ಸಚಿವರಾಗಲಿರುವ ಸುಧಾಕರ್‌ ಅವರೇ’ ಎನ್ನುವ ಮೂಲಕ ಸಚಿವ ಸ್ಥಾನ ಖಚಿತಪಡಿಸಿದರು.

11 ಮಂದಿಗೆ ಸ್ಥಾನ: ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಧಾಕರ್, ‘ವೇದಿಕೆಯಲ್ಲಿ ಮುಖ್ಯಮಂತ್ರಿಯವರು ಸಚಿವ ಸ್ಥಾನದ ಬಗ್ಗೆ ಮಾತನಾಡಿದ್ದು ಸಂತಸ ಉಂಟು ಮಾಡಿದೆ. ಗೆದ್ದಿರುವ 11 ಮಂದಿಗೂ ಸಚಿವ ಸ್ಥಾನ ಸಿಗಲಿದೆ’ ಎಂದರು.

‘ಹುಣಸೂರಿನಲ್ಲಿ ಸ್ಪರ್ಧೆ ಮಾಡುವುದು ಬೇಡವೆಂದು ವಿಶ್ವನಾಥ್ ಅವರಿಗೆ ಮುಖ್ಯಮಂತ್ರಿ ಹೇಳಿದ್ದರು. ಆದರೆ, ಕ್ಷೇತ್ರ ಬಿಟ್ಟುಕೊಡುವುದಿಲ್ಲವೆಂದು ಸ್ಪರ್ಧಿಸಿದರು. ಈಗ ಸೋತಿದ್ದಾರೆ. ಸಚಿವ ಸ್ಥಾನ ನೀಡುವುದಕ್ಕೆ ಕಾನೂನಿನ ತೊಡಕುಗಳಿವೆ’ ಎಂದರು.

‘ಸದನದಲ್ಲಿ ಉತ್ತರಿಸುವೆ’

‘ರಾಜ್ಯದ ಖಜಾನೆ ಖಾಲಿಯಾಗಿದೆ’ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಮಾರ್ಚ್‌ನಲ್ಲಿ ಬಜೆಟ್‌ ಮಂಡಿಸಿ ಸದನದಲ್ಲೇ ಅವರಿಗೆ ಉತ್ತರಿಸುವೆ. ಖಜಾನೆ ಖಾಲಿಯಾಗಿದೆಯೇ, ಇಲ್ಲವೇ ಎಂಬುದು ಬಜೆಟ್‌ ಬಳಿಕ ಸಿದ್ದರಾಮಯ್ಯನವರಿಗೆ ತಿಳಿಯಲಿದೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT