ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾ ₹ 10,000 ತುರ್ತು ನೆರವು: ಸಿ.ಎಂ

ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
Last Updated 12 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಧರ್ಮಸ್ಥಳ (ಮಂಗಳೂರು): ‘ತುರ್ತು ಪರಿಹಾರವಾಗಿ ಸಂತ್ರಸ್ತ ಪ್ರತಿ ಕುಟುಂಬಕ್ಕೆ ತಲಾ ₹ 10,000 ನೆರವನ್ನು ವಿತರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಬೆಳ್ತಂಗಡಿ ತಾಲ್ಲೂಕಿನ ಕುಕ್ಕಾವು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ ಬಳಿಕ ಧರ್ಮಸ್ಥಳದ ಅತಿಥಿ ಗೃಹದಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

ಮನೆ ಬಾಡಿಗೆ ಭತ್ಯೆ: ಸಂತ್ರಸ್ತ ಕುಟುಂಬಗಳಿಗೆ ಮನೆ ದುರಸ್ತಿ ಮತ್ತು ಹೊಸ ಮನೆ ನಿರ್ಮಾಣ ಆಗುವವರೆಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹ 5,000 ಮನೆ ಬಾಡಿಗೆ ವೆಚ್ಚ ನೀಡಲಾಗುವುದು. 10ರಿಂದ 12 ತಿಂಗಳಿನವರೆಗೆ ಬಾಡಿಗೆ ವೆಚ್ಚ ಪಾವತಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 40,000 ಕುಟುಂಬಗಳು ಮನೆ ಕಳೆದುಕೊಂಡಿವೆ. ಎಲ್ಲರಿಗೂ ಈ ಪರಿಹಾರ ಅನ್ವಯವಾಗುತ್ತದೆ. ಈಗ ವಾಸಿಸುತ್ತಿದ್ದ ಜಾಗದಲ್ಲಿ ಮತ್ತೆ ಮನೆ ನಿರ್ಮಿಸಲಾಗದ ಪರಿಸ್ಥಿತಿ ಇದ್ದು, ಸ್ವಂತ ನಿವೇಶನ ಇಲ್ಲದವರಿಗೆ ಸರ್ಕಾರದಿಂದ ನಿವೇಶನವನ್ನೂ ನೀಡಲಾಗುವುದು. ಮನೆ ದುರಸ್ತಿ ಅಥವಾ ಹೊಸ ಮನೆ ನಿರ್ಮಾಣದ ಆಯ್ಕೆಯನ್ನು ಸಂತ್ರಸ್ತರಿಗೆ ಬಿಡಬೇಕು ಎಂದರು.

ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ, ಜಮೀನುಗಳಿಗೆ ಆಗಿರುವ ಹಾನಿ, ಗೃಹೋಪಯೋಗಿ ವಸ್ತುಗಳಿಗೆ ಆಗಿರುವ ಹಾನಿ ಕುರಿತು ಅಂದಾಜು ಮಾಡಿ ವರದಿ ಸಲ್ಲಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ಪಡಿತರ ಮತ್ತು ಇತರೆ ಅಗತ್ಯ ವಸ್ತುಗಳ ವಿತರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ತೊಂದರೆ ಮಾಡದಂತೆ ತಾಕೀತು: ಕಾನೂನಿನ ಹೆಸರಿನಲ್ಲಿ ತೊಂದರೆ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಸಭೆಯಲ್ಲಿದ್ದ ಶಾಸಕ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ‘ಹಾನಿ ಅಂದಾಜು, ಪರಿಹಾರ ಮಂಜೂರಾತಿ ಸೇರಿದಂತೆ ಯಾವುದೇ ವಿಚಾರದಲ್ಲಿ ಸಂತ್ರಸ್ತರಿಗೆ ಕಾನೂನಿನ ನೆಪದಲ್ಲಿ ತೊಂದರೆ ನೀಡಬಾರದು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಧಿಕಾರಿಗಳಿಗೆ ರಜೆ ಇಲ್ಲ: ಜಿಲ್ಲೆಯಲ್ಲಿ ಒಂದು ವಿಶೇಷ ಸಂದರ್ಭ ಎದುರಾಗಿದೆ. ಈ ಸಮಯದಲ್ಲಿ ಅಧಿಕಾರಿಗಳು ರಜೆ ಪಡೆಯದೆ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಭೂಕುಸಿತ ಮತ್ತು ಪ್ರವಾಹದಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯ ವೈದ್ಯಕೀಯ ಕಾಲೇಜುಗಳ ನೆರವು ಪಡೆದು ಪ್ರತಿ ಪ್ರದೇಶಕ್ಕೂ ನಾಲ್ಕರಿಂದ ಐವರು ವೈದ್ಯರನ್ನು ನಿಯೋಜಿಸಬೇಕು. ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರಿಗೆ ಸೂಚಿಸಿದರು.

*ಪ್ರವಾಹ, ಭೂಕುಸಿತದಿಂದ ರಾಜ್ಯದಲ್ಲಿ 40,000 ಮನೆಗಳಿಗೆ ಹಾನಿಯಾಗಿದೆ. ಆದ್ದರಿಂದ ಮನೆ ನಿರ್ಮಾಣಕ್ಕೆ ನೀಡುವ ಪರಿಹಾರದ ಮೊತ್ತವನ್ನು ₹ 5 ಲಕ್ಷಕ್ಕೆ ಮಿತಿಗೊಳಿಸಿದ್ದೇವೆ

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT