ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರರಿಗೂ ಮಣೆ ಹಾಕಿದ ಮತದಾರ

ರಾಮನಗರ ಜಿಲ್ಲೆಯಲ್ಲಿ ಏಳು ಬಾರಿ ಸ್ವತಂತ್ರ ಅಭ್ಯರ್ಥಿಗೆ ಗೆಲುವಿನ ಮಾಲೆ–ಗೆಲುವಿನ ಬಳಿಕ ಕಾಂಗ್ರೆಸ್‌ ಸೇರ್ಪಡೆ
Last Updated 12 ಏಪ್ರಿಲ್ 2018, 10:43 IST
ಅಕ್ಷರ ಗಾತ್ರ

ರಾಮನಗರ: ಸದ್ಯಕ್ಕೆ ಚುನಾವಣೆ ಎಂದರೆ ಬಲಾಢ್ಯರು, ಪಕ್ಷ–ಪಕ್ಷಗಳ ನಡುವಿನ ಕದನ ಎಂಬಂತೆ ಆಗಿದೆ. ಆದರೆ ಯಾವ ಪಕ್ಷಗಳ ಹಂಗೂ ಇಲ್ಲದೆ ಸ್ವತಂತ್ರರಾಗಿ ಗೆದ್ದು ಬೀಗಿದವರ ಉದಾಹರಣೆಗಳೂ ಸಾಕಷ್ಟಿವೆ. ರಾಮನಗರ ಜಿಲ್ಲೆಯಲ್ಲೂ ಏಳು ಬಾರಿ ಪಕ್ಷೇತರರು ಗೆದ್ದು ತೋರಿಸಿದ್ದಾರೆ.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ಗೆದ್ದ ಅಭ್ಯರ್ಥಿಗಳನ್ನು ಕಾಂಗ್ರೆಸ್ ತನ್ನತ್ತ ಸೆಳೆದುಕೊಂಡಿದೆ. ಅವರಲ್ಲಿ ಹೆಚ್ಚಿನವರು ಮುಂದೆ ಕೈ ಪಾಳಯದಿಂದ ಗೆದ್ದು ಶಾಸಕರಾಗಿದ್ದಾರೆ ಎನ್ನುತ್ತವೆ ಅಂಕಿ–ಅಂಶಗಳು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಎರಡು ವಿಧಾನಸಭೆ ಚುನಾವಣೆಗಳಲ್ಲಿ ಅಂತಹ ಘಟನೆಗಳಿಗೆ ಸಾಕ್ಷಿಯಾಗಿದೆ. 1967ರ ಚುನಾವಣೆಯಲ್ಲಿ ಟಿ.ವಿ. ಕೃಷ್ಣಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೆ. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹುರಿಯಾಳು ಬಿ.ಜೆ. ಲಿಂಗೇಗೌಡ ಅವರನ್ನು 1884 ಮತಗಳ ಅಂತರದಿಂದ ಮಣಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡುತ್ತಾರೆ. ಕೃಷ್ಣಪ್ಪ 24,875 ಮತಗಳನ್ನು ಪಡೆದರೆ, ಲಿಂಗೇಗೌಡರು 22,991 ಮತಗಳನ್ನಷ್ಟೇ ಪಡೆಯುವ ಮೂಲಕ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ. ಶಾಸಕರಾಗಿ ಆಯ್ಕೆಯಾದ ಕೃಷ್ಣಪ್ಪ 1972ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮತ್ತೆ ಗೆಲುವು ದಾಖಲಿಸುತ್ತಾರೆ. 1978ರ ಚುನಾವಣೆಯಲ್ಲಿ ಲಿಂಗೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತರಾದರೂ 19,190 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ರಾಮು ಎದುರು ಪರಾಭವಗೊಳ್ಳುತ್ತಾರೆ.

1999ರ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಮತ್ತೆ ಗೆಲುವು ದಾಖಲಿಸುತ್ತಾರೆ. ಅದು ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ಸಿ.ಪಿ. ಯೋಗೇಶ್ವರ್. ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದ ಅವರು 18,828 ಮತಗಳ ಅಂತರದಿಂದ ಕಾಂಗ್ರೆಸ್‌ನ ಸಾದತ್‌ ಅಲಿ ಖಾನ್‌ ಹಾಗೂ ಇತರ ಇಬ್ಬರು ಅಭ್ಯರ್ಥಿಗಳನ್ನೂ ಪರಾಭವಗೊಳಿಸುತ್ತಾರೆ. ಯೋಗೇಶ್ವರ್‌ ಬರೋಬ್ಬರಿ 50,716 ಮತಗಳನ್ನು ಪಡೆದರೆ, ಸಾದತ್ 31, 888 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಬದುಕು ಕಂಡುಕೊಳ್ಳಲು ಹೊರಟಿದ್ದ ಯೋಗೇಶ್ವರ್ ಮೊದಲ ಬಾರಿಗೆ ಶಾಸಕರಾಗುವ ಮೂಲಕ ರಾಜಕೀಯದಲ್ಲೂ ಮುಂದುವರಿಯುತ್ತಾರೆ. 2004ರ ಚುನಾವಣೆಯಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್‌ ಸಿಗುತ್ತದೆ. ಅಲ್ಲಿಯೂ ಮತ್ತೆ ಶಾಸಕರಾಗಿ ಗೆಲುವು ಕಾಣುತ್ತಾರೆ.

ಶಿಕ್ಷಣ ತಜ್ಞರಾದ ಎಸ್. ಕರಿಯಪ್ಪ 1962ರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದವರು. ಅಂದಿನ ಚುನಾ
ವಣೆಯಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಿ. ತಿಮ್ಮೇಗೌಡರ ವಿರುದ್ಧ 1,593 ಮತಗಳ ಅಂತರದಿಂದ ಗೆಲುವು ದಾಖಲಿಸಿದರು. ಕರಿಯಪ್ಪ 21,085 ಮತಗಳನ್ನು ಪಡೆದರೆ, ತಿಮ್ಮೇಗೌಡರು 19,492 ಮತ ಗಳಿಸಿದರು.

1967ರ ಚುನಾವಣೆಯಲ್ಲಿಯೂ ಈ ಇಬ್ಬರು ಮುಖಾಮುಖಿಯಾದರು. ಆದರೆ ಫಲಿತಾಂಶ ಮಾತ್ರ ತದ್ವಿರುದ್ಧವಾಗಿ ಬಂದಿತು. ಈ ಬಾರಿಯೂ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕರಿಯಪ್ಪ 3,576 ಮತಗಳ ಅಂತರದಿಂದ ತಿಮ್ಮೇಗೌಡರ ವಿರುದ್ಧ ಪರಾಭವಗೊಂಡರು. 1972ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಅವರು ಶಾಸಕರಾಗಿ ಆಯ್ಕೆಯಾದರು. 1978ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರಕ್ಕೆ ವಲಸೆ ಹೋದ ಕರಿಯಪ್ಪ 403 ಮತಗಳ ಅಲ್ಪ ಅಂತರದಿಂದ ಪರಾಭವಗೊಂಡರು.

1967ರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸಾತನೂರು ಕ್ಷೇತ್ರದಿಂದ ಎಚ್.ಪುಟ್ಟದಾಸ ಎಂಬುವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಅವರು 499 ಮತಗಳ ಅಲ್ಪ ಅಂತರದಿಂದ ಗೆಲುವು ದಾಖಲಿಸಿದರು. ವಿಜೇತ ಅಭ್ಯರ್ಥಿಯು 13,199 ಮತ ಪಡೆದರೆ, ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಎಸ್. ಹೊನ್ನಯ್ಯ 12,700 ಮತ ಪಡೆದು ನಿರಾಸೆ ಅನುಭವಿಸಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪುಟ್ಟದಾಸ 13,862 ಮತಗಳ ಭಾರಿ ಅಂತರದಿಂದ ಜಿ.ಸಿ.ಚಂದ್ರಶೇಖರ್ ಅವರನ್ನು ಮಣಿಸಿ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು.

ರಾಮನಗರ ವಿಧಾನಸಭಾ ಕ್ಷೇತ್ರದಿಂದಲೂ ಒಮ್ಮೆ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿ ಇತಿಹಾಸ ಬರೆದಿದ್ದಾರೆ. 1967ರ ಚುನಾವಣೆಯಲ್ಲಿ ಇಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಬಿ.ಆರ್. ಧನಂಜಯ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಟಿ.ವಿ. ರಾಮಣ್ಣ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಧನಂಜಯ ಬರೋಬ್ಬರಿ 22,893 ಮತ ಪಡೆದರೆ, ರಾಮಣ್ಣ 10,151 ಮತ ಗಳಿಸಲಷ್ಟೇ ಶಕ್ತವಾಗಿದ್ದರು.

ಶಿವಕುಮಾರ್‌ಗೆ ಸಿಕ್ಕ ಗೆಲುವು

ಸಾತನೂರು ಕ್ಷೇತ್ರದಿಂದ 1989ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದ ಡಿ.ಕೆ. ಶಿವಕುಮಾರ್‌ಗೆ 1994ರ ಚುನಾವಣೆಯಲ್ಲಿ ಪಕ್ಷವು ಟಿಕೆಟ್ ನಿರಾಕರಿಸಿತ್ತು. ಆದರೆ ಎದೆಗುಂದದ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆಲುವು ದಾಖಲಿಸಿದರು. ಶಿವಕುಮಾರ್ 48,270 ಮತಗಳನ್ನು ಪಡೆದರೆ, ಜನತಾ ದಳದ ಅಭ್ಯರ್ಥಿ ಯು.ಕೆ. ಸ್ವಾಮಿ 47,702 ಮತ ಪಡೆದರು. ಮರು ಚುನಾವಣೆಯಲ್ಲಿ ಶಿವಕುಮಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾದರು.

ಚನ್ನಪ್ಪರಿಗೂ ಜಯ
ಮಾಗಡಿ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಅವರ ತಂದೆ ಎಚ್‌.ಜಿ. ಚನ್ನಪ್ಪ ಅವರೂ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ರಾಜಕೀಯ ಜೀವನದಲ್ಲಿ ಮುನ್ನಡೆ ಕಂಡವರು.

1967ರ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ಅವರು 72ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಸಿ.ಆರ್. ರಂಗೇಗೌಡರನ್ನು 10,210 ಮತಗಳಿಂದ ಪರಾಭವಗೊಳಿಸುವ ಮೂಲಕ ಕಳೆದ ಚುನಾವಣೆಯ ಸೋಲಿನ ಸೇಡು ತೀರಿಸಿಕೊಂಡರು. ಚನ್ನಪ್ಪ 19,948 ಮತಗಳನ್ನು ಪಡೆದರೆ ರಂಗೇಗೌಡರು 10,210 ಮತ ಗಳಿಸಲಷ್ಟೇ ಶಕ್ತವಾದರು. ನಂತರದ ಚುನಾವಣೆಗಳಲ್ಲಿ ಚನ್ನಪ್ಪ ಬೇರೆ ಬೇರೆ ಪಕ್ಷಗಳಿಂದ ಮತ್ತೆರಡು ಬಾರಿ ಶಾಸಕರಾಗಿ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT