ಬುಧವಾರ, ನವೆಂಬರ್ 13, 2019
28 °C

ಶಾಸಕರ ರಾಜೀನಾಮೆಗೆ ಶಾ ಕಾರಣವಲ್ಲ: ಸಿದ್ದರಾಮಯ್ಯ ವಿರುದ್ಧ ಸಿಎಂ ಗುಡುಗು

Published:
Updated:

ಬೆಂಗಳೂರು: ‘ನಮ್ಮ ನಾಯಕ ಅಮಿತ್ ಶಾ ರಾಜೀನಾಮೆಗೆ ಕಾಂಗ್ರೆಸಿಗರು ಒತ್ತಾಯಿಸುತ್ತಿರುವುದು ಮೂರ್ಖತನದ ಪರಮಾವಧಿ. ಅನರ್ಹ ಶಾಸಕರ ರಾಜೀನಾಮೆಗೂ ಶಾ ಅವರಿಗೂ ಯಾವುದೇ ಸಂಬಂಧ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಅಮಿತ್ ಶಾ ಸೂಚನೆ ಮೇರೆಗೆ ಶಾಸಕರು ರಾಜೀನಾಮೆ ನೀಡಿದ್ದು, ಈ ವಿಚಾರವನ್ನು ಕೇಂದ್ರ ನಾಯಕರು ನೋಡಿಕೊಂಡಿದ್ದರು ಎಂದು ನಾನು ಹೇಳಿಲ್ಲ’ ಎಂದು ಭಾನುವಾರ ಸ್ಪಷ್ಟಪಡಿಸಿದರು.

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶನದ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಶಾಸಕರು ರಾಜೀನಾಮೆ ನೀಡಿದ್ದರು. ಅವರು ಮುಂಬೈನಲ್ಲಿ ತಂಗಿದ್ದು ಸೇರಿದಂತೆ, ಎಲ್ಲ ವಿಚಾರವನ್ನೂ ಶಾ ಅವರೇ ನೋಡಿಕೊಂಡಿದ್ದಾರೆ’ ಎಂದು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ ಹೇಳಿದರು ಎನ್ನಲಾದ ವಿಡಿಯೊ ಸೋರಿಕೆಯಾಗಿದೆ.

ಈ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟ ಆರಂಭಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದು, ‘ಅಮಿತ್ ಶಾ ಬಗ್ಗೆ ನಾನು ಹೇಳಿಕೆ ನೀಡಿಲ್ಲ. ಅನರ್ಹರು ಅವರದ್ದೇ ಕಾರಣಕ್ಕೆ ರಾಜೀನಾಮೆ ನೀಡಿದ್ದು, ಅವರಿಗೆಲ್ಲ ಪಕ್ಷದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡುವುದಾಗಿ ಹೇಳಿಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಾನೇ ದೊಡ್ಡ ನಾಯಕ ಎಂದುಕೊಂಡು ಸುಳ್ಳು ಪ್ರಚಾರ ಮಾಡುತ್ತಿದ್ದು, ಅವರ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಯಾರೂ ಅವರಿಗೆ ಗೌರವ ಕೊಡುವುದಿಲ್ಲ, ಕಾಂಗ್ರೆಸ್‌ನವರೇ ಇಷ್ಟಪಡುವುದಿಲ್ಲ, ವಾಸ್ತವ ಪ್ರಜ್ಞೆಯೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಡಿಯೊ: ಬಿಜೆಪಿಯಿಂದ ಆಂತರಿಕ ತನಿಖೆ
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿರುವ ವಿಡಿಯೊ ಸೋರಿಕೆ ಬಗ್ಗೆ ಆಂತರಿಕ ತನಿಖೆ ನಡೆಸಲು ಬಿಜೆಪಿ ಮುಂದಾಗಿದೆ.

ಮತ್ತೊಂದೆಡೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಈ ವಿಡಿಯೊ ಸೋರಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋ‍ಪವನ್ನೂ ಮಾಡಿದೆ.

‘ಯಡಿಯೂರಪ್ಪ ಮಾತಾಡಿದ ವಿಡಿಯೊ ಬಿಡುಗಡೆ ಮಾಡಿದವರು ಸಿದ್ದರಾಮಯ್ಯ’ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

**

ಅನರ್ಹ ಶಾಸಕರಿಗೆ ಟಿಕೆಟ್ ನೀಡು<br/>ತ್ತೇನೆ ಎಂದು ಸಿ.ಎಂ ಎಲ್ಲೂ ಹೇಳಿಲ್ಲ. ಅವರ ರಕ್ಷಣೆಯ ಹೊಣೆ ನಮ್ಮದಲ್ಲ. ನಮ್ಮ ಮತ್ತು ಅವರ ನಡುವೆ ಸಾಕಷ್ಟು ರಾಜಕೀಯ ಅಂತರವಿದೆ.
-ಜಗದೀಶ ಶೆಟ್ಟರ್, ಕೈಗಾರಿಕಾ ಸಚಿವ

**

ಯಡಿಯೂರಪ್ಪ ಸತ್ಯವನ್ನೇ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ಗೆ ಏನು ಸಾಕ್ಷ್ಯ ಕೊಡುತ್ತಾರೋ ಕೊಡಲಿ. ತೀರ್ಪು ನ್ಯಾಯದ ಪರವೇ ಇರುತ್ತದೆ.
-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

**

ಸುಳ್ಳು ಹೇಳುವುದರಲ್ಲಿ ವೀರಪ್ಪ ಮೊಯಿಲಿ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ. ಮೊಯಿಲಿ ಟೇಪ್ ಹಗರಣದಿಂದ ಹಲವು ಪ್ರಕರಣಗಳು ಬಯಲಿಗೆ ಬಂದಿದ್ದರೂ ಏನೂ ಆಗಿಲ್ಲ.
-ಆರ್.ಅಶೋಕ, ಕಂದಾಯ ಸಚಿವ

**

ಕೆಲಸವಿಲ್ಲದೆ ಕಾಂಗ್ರೆಸ್‌ನವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದೆ ವಿಡಿಯೊ ವಿಚಾರ ಪ್ರಸ್ತಾಪಿಸುತ್ತಿದ್ದಾರೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಪ್ರತಿಕ್ರಿಯಿಸಿ (+)