ಭಾನುವಾರ, ನವೆಂಬರ್ 17, 2019
28 °C

'ಕೈ'ಗೆ ಸಿಕ್ಕಿತು ಆಡಿಯೊ ಅಸ್ತ್ರ: ಯಡಿಯೂರಪ್ಪ, ಶಾ ರಾಜೀನಾಮೆಗೆ ಆಗ್ರಹ

Published:
Updated:

ಬೆಂಗಳೂರು:‌ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಅನರ್ಹ ಶಾಸಕರ ಪರವಾಗಿ ಆಡಿರುವ ಮಾತುಗಳ ಆಡಿಯೊದಿಂದ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ಶಾಸಕರಿಗೆ ಆಮಿಷವೊಡ್ಡಿ ಮೈತ್ರಿ ಸರ್ಕಾರ ಬೀಳಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಯಡಿಯೂರಪ್ಪ ಕಾರಣರಾಗಿದ್ದು ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ ನಾಯಕರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಆಡಿಯೊ ಮುಂದಿಟ್ಟುಕೊಂಡು ಕೋರ್ಟ್ ಹಾಗೂ ಬೀದಿಯಲ್ಲಿ ಹೋರಾಟ ನಡೆಸಲು ಕಾಂಗ್ರೆಸ್‌ ನಾಯಕರು ತಯಾರಿ ನಡೆಸಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರ ಎಚ್‌.ಡಿ. ಕುಮಾರಸ್ವಾಮಿ ಕೂಡ ಇದಕ್ಕೆ ಸಾಥ್‌ ನೀಡಿದ್ದಾರೆ.

ಅನರ್ಹರ ಶಾಸಕರ ಪರವಾಗಿ ಆಡಿರುವ ಮಾತನ್ನು ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು ತಮ್ಮ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ. 

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ರಾಜಭವನಕ್ಕೆ ತೆರಳಿದ ಕಾಂಗ್ರೆಸ್‌ ನಾಯಕರು, ರಾಜ್ಯ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ ಅಧಿಕಾರಕ್ಕೆ ಬಂದಿರುವುದು ಸಾಬೀತಾಗಿದೆ. ಒಂದು ಕ್ಷಣವೂ ಇದು ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ಉಳಿಸಿಕೊಂಡಿಲ್ಲ, ತಕ್ಷಣ ಸರ್ಕಾರ ವಜಾಗೊಳಿಸಬೇಕು ಎಂದಿದ್ದಾರೆ.

‘ಯಡಿಯೂರಪ್ಪ ಮಾತನಾಡಿದ್ದು ದೇಶಕ್ಕೇ ಗೊತ್ತಾಗಿದೆ. ನಾನೊಬ್ಬನೇ ಸರ್ಕಾರ ಬೀಳಿಸಿಲ್ಲ, ಅಮಿತ್ ಶಾ ಮಾರ್ಗದರ್ಶನದಂತೆ ಮಾಡಿದ್ದೇನೆ ಅಂದಿದ್ದಾರೆ. ಅಮಿತ್ ಶಾ ಅವರೇ ಶಾಸಕರ ಉಸ್ತುವಾರಿ ಹೊತ್ತಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯ 10ನೇ ಶೆಡ್ಯೂಲ್ ಅನ್ನೇ ಇವರು ಉಲ್ಲಂಘಿಸಿದ್ದಾರೆ. ಒಬ್ಬ ಮುಖ್ಯಮಂತ್ರಿ, ಮತ್ತೊಬ್ಬರು ದೇಶದ ಗೃಹ ಮಂತ್ರಿ. ಇಬ್ಬರು ಸೇರಿಯೇ ಸಂವಿಧಾನ ಬುಡಮೇಲು ಮಾಡಲು ಹೊರಟಿದ್ದಾರೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

*
ಯಡಿಯೂರಪ್ಪ ಅವರು 100 ದಿನಗಳನ್ನು ಒಂದು ಅದ್ಭುತ ವಿಡಿಯೊ ಮೂಲಕ ಆಚರಿಸಿದ್ದಾರೆ. ತಾವು ನಡೆಸಿದ ಆಪರೇಷನ್‌ ಕಮಲಕ್ಕೆ ಸಾಕ್ಷ್ಯ ಒದಗಿಸಿದ್ದಾರೆ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

*
ಅಮಿತ್ ಶಾ ಜತೆಗೆ ಸೇರಿಕೊಂಡೇ ಆಪರೇಷನ್‌ ಕಮಲ ಮಾಡಿದ್ದನ್ನು ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ, ಇದಕ್ಕೆ ಈಗ ಏನು ಉತ್ತರ ಕೊಡುತ್ತೀರಿ?
-ಎಚ್‌. ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

*
ಶಾಸಕರು ರಾಜೀನಾಮೆ ಕೊಡದೇ ಇದ್ದರೆ ನಮ್ಮ ಸರ್ಕಾರ ಹೇಗೆ ಬರುತ್ತಿತ್ತು. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಸಭೆಯಲ್ಲಿ ಹೇಳಿದ್ದು ಹೌದು.
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)