ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯಲ್ಲಿ ಭಾಗವಹಿಸಿ ತಮ್ಮ ಆದೇಶ ತಾವೇ ಉಲ್ಲಂಘಿಸಿದ ಮುಖ್ಯಮಂತ್ರಿ!

ಸರ್ಕಾರದ ಆದೇಶ ಉಲ್ಲಂಘಿಸಿ ಮುಖ್ಯಸಚೇತಕರ ಪುತ್ರಿಯ ಅದ್ಧೂರಿ ವಿವಾಹ
Last Updated 15 ಮಾರ್ಚ್ 2020, 19:25 IST
ಅಕ್ಷರ ಗಾತ್ರ
ADVERTISEMENT
""

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡುವ ಭೀತಿ ಇರುವುದರಿಂದಾಗಿ ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧದ ನಡುವೆಯೂ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿಡಾ.ಪೂಜಾ ವಿವಾಹ ಇಲ್ಲಿನ ಖಾನಾಪುರ ರಸ್ತೆಶಗುನ್‌ ಗಾರ್ಡನ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದರು.

ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಪಾಲ್ಗೊಳ್ಳುವ ಮೂಲಕ ತಮ್ಮ ಆದೇಶವನ್ನೇ ತಾವೇ ಉಲ್ಲಂಘಿಸಿದರು! ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜವಳಿ ಸಚಿವ ಶ್ರೀಮಂತ ಪಾಟೀಲ, ಶಾಸಕರು, ಜನಪ್ರತಿನಿಧಿಗಳು ಹಾಗೂ ಇಡೀ ಜಿಲ್ಲಾಡಳಿತವೇ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಗರಿಷ್ಠ 100 ಮಂದಿಗೆ ಸೀಮಿತಗೊಳಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮನವೊಲಿಸುವ ಕೆಲಸವನ್ನು ಮಾಡಬೇಕಾಗಿದ್ದ ಅಧಿಕಾರಿಗಳು ಕೂಡ ಪಾಲ್ಗೊಂಡಿದ್ದರು!

ಮುಖ್ಯಸಚೇತಕ ಮಹಾಂತೇಶ ಕಮಟಗಿಮಠ ಮದುವೆಯಲ್ಲಿ ಭಾಗವಹಿಸಿದ್ದ ಜನ

ಹೆಚ್ಚಿನ ಜನಸಂದಣಿಯ ಕಾರ್ಯಕ್ರಮಗಳನ್ನು ನಿಯಂತ್ರಿಸಬೇಕು ಎನ್ನುವುದು ಸರ್ಕಾರದ ಆದೇಶ. ಆದರೆ, ಬೆಳಿಗ್ಗೆಯಿಂದಲೂ ಜನರು ಸೇರುತ್ತಿದ್ದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರಭಾಕರ ಕೋರೆ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಗಣೇಶ ಹುಕ್ಕೇರಿ, ಮಹೇಶ ಕುಮಠಳ್ಳಿ, ಆನಂದ ಮಾಮನಿ, ಶಾಮನೂರು ಶಿವಶಂಕರಪ್ಪ, ಆರ್‌.ಬಿ. ತಿಮ್ಮಾಪೂರ, ವಿವಿಧ ಮಠಗಳ ಮಠಾಧೀಶರು, ಪ್ರತಿಪಕ್ಷಗಳ ನಾಯಕರು, ಮುಖಂಡರು ತಂಡೋಪ ತಂಡವಾಗಿ ಪಾಲ್ಗೊಂಡಿದ್ದರು.

ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸುವ ಬ್ಯಾನರ್‌ಗಳನ್ನುಎರಡು ಕಡೆಗಳಲ್ಲಿ ಹಾಕಲಾಗಿತ್ತು. ಬಂದವರೆಲ್ಲರೂ ಕೈಗೆ ಸ್ಯಾನಿಟೈಸರ್ ಹಾಕಿಕೊಂಡು ಹೋಗುವಂತಹ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್‌ (ಮುಖಗವಸು)ಗಳ ಕೊರತೆ ಇದ್ದಿದ್ದರಿಂದ, ಕೆಲವರಷ್ಟೇ ಧರಿಸಿದ್ದರು.

ಇಲ್ಲಿನ ಆಟೊನಗರದಲ್ಲಿ ನಿಗದಿಯಾಗಿದ್ದ ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳಕಟ್ಟಡದ ಉದ್ಘಾಟನಾ ಸಮಾರಂಭವನ್ನು, ಮುಖ್ಯಮಂತ್ರಿ ಮೊದಲಾದ ಗಣ್ಯರು ಭಾಗವಹಿಸಿದರೆ ಹೆಚ್ಚು ಜನರ ಸೇರುವ ಸಾಧ್ಯತೆ ಇದ್ದಿದ್ದರಿಂದ ಮುಂದೂಡಲಾಗಿತ್ತು. ಮುಖ್ಯಮಂತ್ರಿ ಬೆಳಗಾವಿ ಪ್ರವಾಸ ರದ್ದುಪಡಿಸಿದ್ದಾರೆಂದು ಶುಕ್ರವಾರ ಪ್ರಕಟಣೆಯನ್ನೂ ನೀಡಲಾಗಿತ್ತು.

ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಗೆ ನಿರಾಕರಿಸಿದ ಮುಖ್ಯಮಂತ್ರಿ, ‘ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಬೇಕು ಎಂದು ನಿರ್ಬಂಧ ವಿಧಿಸಲಾಗಿದೆ. ಮುದುವೆಗೂ ಹೆಚ್ಚಿನವರು ಸೇರಬಾರದು. ನನ್ನ ಹುಬ್ಬಳ್ಳಿ ಪ್ರವಾಸ ಮೊದಲೇ ನಿಗದಿಯಾಗಿತ್ತು. ಈ ಭಾಗಕ್ಕೆ‌ ಬರುತ್ತಿರುವ ಕಾರಣ ಕವಟಗಿಮಠ ಪುತ್ರಿ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದೇನೆ’ ಎಂದಷ್ಟೇ ಹೇಳಿದರು.

ತಪಾಸಣೆಗೆ ಒಳಗಾಗದ ಮುಖ್ಯಮಂತ್ರಿ!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಆರೋಗ್ಯ ಇಲಾಖೆಯವರು ಮುಂಜಾಗ್ರತಾ ಕ್ರಮವಾಗಿ ನಡೆಸುವ ತಪಾಸಣೆಗೆ ಒಳಗಾಗಲಿಲ್ಲ.

ಕೊರೊನಾ ವೈರಾಣು ಸೋಂಕು ಹರಡುವ ಭೀತಿಯಿಂದಾಗಿ ಆರೋಗ್ಯ ಇಲಾಖೆ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಯಂತ್ರ ಅಳವಡಿಸಿದೆ. ಸಿಬ್ಬಂದಿಯು, ಜ್ವರ ಪತ್ತೆ ಮಾಡುವ ಇನ್ಫ್ರಾರೆಡ್ ಥರ್ಮಾಮೀಟರ್ ಯಂತ್ರ ಬಳಸುತ್ತಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಮುಖ್ಯಮಂತ್ರಿ ಅವರನ್ನು ತಪಾಸಣೆಗೆ ಒಳಪಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಅಣಿಯಾಗಿದ್ದರು. ಆದರೆ, ವಿಶ್ರಾಂತಿ ಕೊಠಡಿಯಿಂದ ಹೊರ ಬಂದ ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿ, ಅಲ್ಲಿಂದ ತೆರಳಿದರು.

ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿ, ಮೂವರ ಆರೋಗ್ಯವೂ ಸ್ಥಿರವಾಗಿದೆ ಎಂದು ಸ್ಥಳದಲ್ಲೇ ವರದಿ ನೀಡಿದರು.

ಹಿರಿಯೂರು: ವಿವಾಹದಲ್ಲಿ ದೇವೇಗೌಡ ಭಾಗಿ

ಹಿರಿಯೂರು: ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ ಅವರ ಪುತ್ರನ ವಿವಾಹ ಇಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು. ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ವಿವಾಹಕ್ಕೆ ಸಾಕ್ಷಿಯಾದರು. ಮೂರು ಸಾವಿರಕ್ಕೂ ಹೆಚ್ಚು ಜನರು ವಿವಾಹದಲ್ಲಿ ಪಾಲ್ಗೊಂಡಿದ್ದರು. ಯಾರೊಬ್ಬರೂ ಮಾಸ್ಕ್ ಧರಿಸಿದಂತೆ ಕಂಡುಬರಲಿಲ್ಲ.

ಶಾಸಕಿ ಕೆ.ಪೂರ್ಣಿಮಾ, ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಚೌಡರೆಡ್ಡಿ ತೂಪಲ್ಲಿ ಅವರೂ ಇದ್ದರು. ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ನಿಯಂತ್ರಿಸುವ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲ.

ಶನಿವಾರ ರಾತ್ರಿ ನಡೆದ ಆರತಕ್ಷೆತೆಗೂ ಸಾವಿರಾರು ಜನರು ಪಾಲ್ಗೊಂಡಿದ್ದರು. ‘ಮದುವೆಯ ಹಿಂದಿನ ದಿನ ಸರ್ಕಾರದ ಆದೇಶ ಗಮನಕ್ಕೆ ಬಂದಿತು. ಆದರೆ, ತಿಂಗಳ ಹಿಂದೆಯೇ ಆಮಂತ್ರಣ ಪತ್ರಿಕೆ ಹಂಚಿದ್ದೆವು. ಸಮಾರಂಭಕ್ಕೆ ಬರಬೇಡಿ ಎಂದು ಅತಿಥಿಗಳಿಗೆ ಹೇಳುವುದಾದರೂ ಹೇಗೆ’ ಎಂದು ಪ್ರಶ್ನಿಸಿದ ಯಶೋಧರ, ‘ಕಲ್ಯಾಣ ಮಂಟಪದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೆವು. ಸ್ಥಳೀಯರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು’ ಎಂದರು.

ವೈದ್ಯನ ವಿರುದ್ಧ ಎಫ್‌ಐಆರ್‌

ಹಾವೇರಿ: ನಗರದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣವೊಂದು ದೃಢಪಟ್ಟಿದೆ ಎಂದು ವಾಟ್ಸ್‌ಆ್ಯಪ್‌ ಗ್ರೂಪ್‌ ವೊಂದರಲ್ಲಿ ಸುಳ್ಳು ಸಂದೇಶ ಹರಿಬಿಟ್ಟಿದ್ದ ಆಯುರ್ವೇದಿಕ್‌ ವೈದ್ಯ ಶರಣು ಅಂಗಡಿ ವಿರುದ್ಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತಪಾಸಣೆ ಕಡ್ಡಾಯ: ಶ್ರೀರಾಮುಲು

ಕಲಬುರ್ಗಿ:‘ಕೊರೊನಾ ಸೋಂಕಿನ ಕುರಿತ ವದಂತಿಗಳಿಗೆ ಜನರು ಕಿವಿಗೊಡಬಾರದು. ಶಂಕಿತರು ತಪಾಸಣೆಗೆ ಒಳಗಾಗದಿದ್ದರೆ ಅಂಥವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗು ವುದು. ನೆಗಡಿ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರು ಕಡ್ಡಾಯವಾಗಿ ತಪಾಸಣೆ ಮಾಡಿಸಿ ಕೊಳ್ಳಲೇಬೇಕು’ ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT