ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಋಣ ಮುಕ್ತಿಗೆ ಮಾರ್ಚ್ ಗಡುವು

ಸಾಲಮನ್ನಾಕ್ಕೆ ಸಂಬಂಧಿಸಿದ ಪ್ರಕ್ರಿಯೆ ಡಿ. 5ರಿಂದ; ಗೊಂದಲ ನಿವಾರಣೆಗೆ ವಿಡಿಯೊ ಕಾನ್ಫರೆನ್ಸ್‌
Last Updated 27 ನವೆಂಬರ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಪ್ರಕ್ರಿಯೆಯನ್ನು 2019ರ ಮಾರ್ಚ್‌ 15ರೊಳಗೆ ಪೂರ್ಣಗೊಳಿಸಿ ರೈತರಿಗೆ ಋಣ ಮುಕ್ತ ಪ್ರಮಾಣಪತ್ರಗಳನ್ನು ನೀಡಬೇಕು ಎಂದುಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೈತರ ಸಾಲ ಮನ್ನಾ ಯೋಜನೆ ಕುರಿತಂತೆ ಕೆಲವು ವಲಯಗಳಲ್ಲಿ ಅನಗತ್ಯ ಅಪಪ್ರಚಾರ ನಡೆಯುತ್ತಿದೆ. ರೈತರ ಆತಂಕ ದೂರವಾಗಬೇಕು.
ಸಾಲ ಮನ್ನಾ ಪ್ರಕ್ರಿಯೆ ಸ್ಪಷ್ಟವಾಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ರೈತರಿಗೆ ಸ್ಪಷ್ಟ ಚಿತ್ರಣ ನೀಡಬೇಕು’ ಎಂದರು.

‘ಡಿಸೆಂಬರ್ 1 ರೊಳಗಾಗಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ, ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲಮನ್ನಾಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಡಿಸೆಂಬರ್ 5ರಿಂದ ಪ್ರಾರಂಭಿಸಬೇಕು’ ಎಂದರು.

ಸಾಲ ಮನ್ನಾ ಯೋಜನೆಯ ಸಮನ್ವಯಾಧಿಕಾರಿ ಮುನೀಷ್‌ ಮೌದ್ಗಿಲ್‌ ಅವರು ಇದೇ 29ರಂದು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ನಡೆಸಿ ಗೊಂದಲ ನಿವಾರಿಸಲಿದ್ದಾರೆ’ ಎಂದು ಅವರು ಹೇಳಿದರು.

**

ಕೊಡಗು ಸಂತ್ರಸ್ತರಿಗೆ ಮನೆ: ಪ್ರವಾಹಪೀಡಿತ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ 1,000 ಮನೆಗಳನ್ನು ಸರ್ಕಾರ ನಿರ್ಮಿಸಿಕೊಡಲಿದೆ. 120 ಎಕರೆ ಜಾಗದಲ್ಲಿ ಈ ಮನೆಗಳು ನಿರ್ಮಾಣವಾಗಲಿದ್ದು, ಪ್ರತಿ ಮನೆಗೆ ₹10 ಲಕ್ಷ ವೆಚ್ಚ ಮಾಡಲಾಗುತ್ತದೆ. ಈ ಕಾಮಗಾರಿಗೆ ಡಿಸೆಂಬರ್‌ 8ರಂದು ಚಾಲನೆ ನೀಡಲಿದ್ದೇನೆ’ ಎಂದು ಕುಮಾರಸ್ವಾಮಿ ತಿಳಿಸಿದರು.

**

ಈರುಳ್ಳಿಗೆ ಬೆಂಬಲ ಬೆಲೆ: ಈರುಳ್ಳಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಕ್ವಿಂಟಲ್‌ಗೆ ₹200 ಬೆಂಬಲ ಬೆಲೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ‘ಈ ವರ್ಷ 1.54 ಲಕ್ಷ ಹೆಕ್ಟೇರ್‌ನಲ್ಲಿ 29 ಲಕ್ಷ ಟನ್‌ ಈರುಳ್ಳಿ ಉತ್ಪಾದನೆಯಾಗಿದೆ. ಕಡಿಮೆ ಬೆಲೆ ಕಾರಣದಿಂದ 3.25 ಲಕ್ಷ ಟನ್‌ ಈರುಳ್ಳಿ ಮಾರಾಟವಾಗಿಲ್ಲ. ಹೀಗಾಗಿ, ಎಪಿಎಂಸಿಗೆ ₹75 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

**

ಸಹಕಾರಿ ಬ್ಯಾಂಕ್‌ಗಳು

l6 ಸಾವಿರ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ 21.8 ಲಕ್ಷ ರೈತರ ಸಾಲ ಮಾಹಿತಿ ದತ್ತಾಂಶ ಸೇರ್ಪಡೆ ಪ್ರಗತಿಯಲ್ಲಿ.

l1.8 ಲಕ್ಷ ರೈತರ ಆಧಾರ್ ಸಂಖ್ಯೆ, ಪಡಿತರ ಚೀಟಿ ಮತ್ತು ಸರ್ವೆ ಸಂಖ್ಯೆ ದೃಢೀಕರಣ ಮಾಡಲಾಗಿದೆ. ನವೆಂಬರ್‌ 30ರೊಳಗೆ 2.2 ಲಕ್ಷ ರೈತರು ಸಾಲ ಮನ್ನಾ ಅರ್ಹತೆ ಪಡೆಯಲಿದ್ದಾರೆ. ಅವರ ಸಾಲ ಮನ್ನಾಕ್ಕೆ ₹800 ಕೋಟಿ ಬಿಡುಗಡೆ.

**

ರಾಷ್ಟ್ರೀಕೃತ ಬ್ಯಾಂಕ್‌ಗಳು

* 33 ಬ್ಯಾಂಕ್‌ಗಳಿಂದ 20.8 ಲಕ್ಷ ರೈತರ ಮಾಹಿತಿ ಸಂಗ್ರಹ. ಅಂದರೆ ಶೇ 92ರಷ್ಟು ಮಾಹಿತಿ ಸಿಕ್ಕಿದೆ.

* ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳ 4000 ರೈತರಿಂದ ಸ್ವಯಂಘೋಷಿತ ದೃಢೀಕರಣ ಸಲ್ಲಿಕೆ

* ಸ್ವಯಂಘೋಷಿತ ದೃಢೀಕರಣ ಸಲ್ಲಿಕೆಗೆ ಆಧಾರ್ ಸಂಖ್ಯೆ, ಪಡಿತರ ಚೀಟಿ ಹಾಗೂ ಸರ್ವೆ ಸಂಖ್ಯೆ ಮಾಹಿತಿ ಸಲ್ಲಿಸಲು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ರೈತರನ್ನು ಕರೆಸಲಾಗುತ್ತದೆ.

**

ಗದರಿದ ತಮ್ಮ–ಬೆದರಿದ ಅಣ್ಣ

ಎಲ್ಲ ವಿಷಯಗಳ ಬಗ್ಗೆಯೂ ಮೂಗು ತೂರಿಸುತ್ತಿದ್ದ ತನ್ನ ಅಣ್ಣ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಭೆಯಲ್ಲಿ ಗದರಿದರು.

‘ಪ್ರವಾಹಪೀಡಿತ ಕೊಡಗು ಜಿಲ್ಲೆಗೆ ಎಷ್ಟು ಹಣ ಬಿಡುಗಡೆಯಾಗಿದೆ. ರಸ್ತೆ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆಯೇ’ ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ರೇವಣ್ಣ ಮಾಹಿತಿ ನೀಡಲು ಮುಂದಾದರು. ‘ಸಭೆ ಕರೆದಿದ್ದು ನಾನಾ ನೀವಾ, ಅಧಿಕಾರಿಗಳಿಗೆ ಮಾತನಾಡಲು ಬಿಡಿ. ನೀವೇ ಮಾತನಾಡಿದರೆ ಅವರೇನು ಮಾಡಬೇಕು’ ಎಂದು ಪ್ರಶ್ನಿಸಿದರು. ಆಗ ರೇವಣ್ಣ ಮೌನಕ್ಕೆ ಶರಣಾದರು.

ಮತ್ತೆ ಲೋಕೋಪಯೋಗಿ ಇಲಾಖೆಯ ವಿಷಯ ಪ್ರಸ್ತಾಪವಾಯಿತು. ಆಗ ರೇವಣ್ಣ, ‘ಸಕಲೇಶಪುರ ರಸ್ತೆ, ಹಾಸನ’ ಎಂದರು. ಆಗ ಕೋಪ ಮಾಡಿಕೊಂಡ ಕುಮಾರಸ್ವಾಮಿ, ‘ಬರೀ ನಿಮ್ಮ ಜಿಲ್ಲೆಯ ಬಗ್ಗೆ ಮಾತನಾಡಿದರೆ ಹೇಗೆ. ಎಲ್ಲ ಜಿಲ್ಲೆಗಳ ಮಾಹಿತಿ ಪಡೆಯಬೇಕು’ ಎಂದರು. ಹೀಗೆ ಹೇಳಿದ ಕೆಲವೇ ಕ್ಷಣಗಳಲ್ಲಿ ರೇವಣ್ಣ ಸಭೆಯಿಂದ ಹೊರನಡೆದರು. ಸ್ವಲ್ಪ ಹೊತ್ತು ಕಳೆದ ಬಳಿಕ ಬಂದರು.

**

ಪ್ರಮುಖ ಚರ್ಚೆಗಳು

* ಪ್ರಕೃತಿ ವಿಕೋಪಕ್ಕೆ ತುತ್ತಾದ ಜಿಲ್ಲೆಗಳಿಗೆ ₹200 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಮೊತ್ತವನ್ನು ಯಾವ ಕೆಲಸಗಳಿಗೆ ಬಳಕೆಯಾಗಿದೆ ಎಂಬ ಬಗ್ಗೆ ವಾರದೊಳಗೆ ವರದಿ ನೀಡಬೇಕು.

* ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಬೇಕು.

* ಬಸವ ವಸತಿ, ಪ್ರಧಾನ ಮಂತ್ರಿ ಆವಾಸ್, ಬಿ.ಆರ್.ಅಂಬೇಡ್ಕರ್, ವಾಜಪೇಯಿ ನಗರ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ವಸತಿಹೀನರಿಗೆ ಮನೆಗಳನ್ನು ನೀಡಲು ಸರ್ಕಾರದ 6,747 ಎಕರೆ ಹಾಗೂ ಖಾಸಗಿಯ 2 ಸಾವಿರ ಎಕರೆ ಜಾಗ ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT