ಆಡಿಯೊ, ವಿಡಿಯೊ ಮಿಕ್ಸಿಂಗ್‌ನಲ್ಲಿ ಸಿ.ಎಂ. ಸಿದ್ಧಹಸ್ತ: ಬಿ. ಶ್ರೀರಾಮುಲು ವ್ಯಂಗ್ಯ

7

ಆಡಿಯೊ, ವಿಡಿಯೊ ಮಿಕ್ಸಿಂಗ್‌ನಲ್ಲಿ ಸಿ.ಎಂ. ಸಿದ್ಧಹಸ್ತ: ಬಿ. ಶ್ರೀರಾಮುಲು ವ್ಯಂಗ್ಯ

Published:
Updated:

ಬಳ್ಳಾರಿ: ’ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಆಡಿಯೊ, ವಿಡಿಯೊ, ಡಬ್ಬಿಂಗ್‌ ಮತ್ತು ಮಿಮಿಕ್ರಿ ಮಿಕ್ಸಿಂಗ್‌ ಮಾಡುವುದರಲ್ಲಿ ಸಿದ್ಧ ಹಸ್ತರು. ಕುರ್ಚಿ ಉಳಿಸಿಕೊಳ್ಳಲು ಬಿ.ಎಸ್‌. ಯಡಿಯೂರಪ್ಪನವರು ಮಾತನಾಡಿದ್ದಾರೆ ಎನ್ನಲಾದ ನಕಲಿ ಆಡಿಯೊ ಬಿಡುಗಡೆ ಮಾಡಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಶಾಸಕ ಬಿ. ಶ್ರೀರಾಮುಲು ಆರೋಪಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಬರುವ ಮುಂಚೆ ಸಿನಿಮಾ ಕ್ಷೇತ್ರದಲ್ಲಿ ಇದ್ದರು. ಹೀಗಾಗಿ ಅವರಿಗೆ ಎಲ್ಲ ರೀತಿಯ ಕಲೆ ಗೊತ್ತು. ಈಗ ಅವರ ಮಗನಿಗೂ ಸಿನಿಮಾ ತರಬೇತಿ ನೀಡಿದ್ದಾರೆ. ಒಂದು ಕಡೆ ಯಡಿಯೂರಪ್ಪ ಮಾತನಾಡಿರುವ ಆಡಿಯೊ ಎಂದು ಅವರೇ ಹೇಳುತ್ತಾರೆ. ಇನ್ನೊಂದೆಡೆ ಅದರ ಬಗ್ಗೆ ತನಿಖೆ ನಡೆಯಬೇಕು ಎನ್ನುತ್ತಾರೆ. ಇದು ಅವರ ದ್ವಂದ್ವ ನಿಲುವು ತೋರಿಸುತ್ತದೆ’ ಎಂದರು.

‘ರಾಜ್ಯದ ಜನ ಉತ್ತಮ ಬಜೆಟ್‌ಗಾಗಿ ಕಾಯುತ್ತಿದ್ದರು. ಆದರೆ, ಕುಮಾರಸ್ವಾಮಿ ಬಜೆಟ್‌ ಮಂಡನೆಗಿಂತ ಮೊದಲೇ ಆಡಿಯೊ ಬಿಡುಗಡೆ ಮಾಡಿ ಜನರ ಗಮನ ಬೇರೆಡೆ ಹೋಗುವಂತೆ ಮಾಡಿದ್ದಾರೆ. ಬಿಜೆಪಿ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲು ಸಿ.ಎಂ. ಯಡಿಯೂರಪ್ಪ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆಡಿಯೊ ಗಂಭೀರತೆ ಹೆಚ್ಚಿಸಲು ಸಭಾಧ್ಯಕ್ಷ ರಮೇಶ್‌ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ’ ಎಂದು ಹೇಳಿದರು.

‘ತಮ್ಮನ್ನು ತಾವು ಕ್ಲರ್ಕ್‌ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಅವರ ಪಕ್ಷ ಚುನಾವಣೆಯಲ್ಲಿ ಗೆದ್ದಿರುವುದು 37 ಸ್ಥಾನ. ಅವರಿಗೆ ವಾಸ್ತವವಾಗಿ ಕ್ಲರ್ಕ್‌ ಹುದ್ದೆ ಕೊಡಬೇಕಿತ್ತು. ಆದರೆ, ಜಿಲ್ಲಾಧಿಕಾರಿ ಹುದ್ದೆ ಕೊಡಲಾಗಿದೆ. ಐಷಾರಾಮಿ ಹೋಟೆಲ್‌ನಲ್ಲಿ ಜೀವನ ನಡೆಸುತ್ತಿರುವ ಸಿ.ಎಂ. ಅದರ ಕೋಟ್ಯಂತರ ರೂಪಾಯಿ ಬಿಲ್‌ ಪಿ.ಡಬ್ಲ್ಯೂ.ಡಿ. ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳ ತಲೆಗೆ ಕಟ್ಟುತ್ತಿದ್ದಾರೆ’ ಎಂದು ಆರೋಪ ಮಾಡಿದರು. 

‘ಸಂಖ್ಯಾ ಬಲವಿಲ್ಲದ ಸರ್ಕಾರದ ಬಜೆಟ್‌ ಮಂಡನೆಗೆ ನಮ್ಮ ವಿರೋಧವಿತ್ತು ಹೊರತು ಬೇರೆ ಉದ್ದೇಶವಿರಲಿಲ್ಲ. ’ಆಪರೇಷನ್‌ ಕಮಲ’ಕ್ಕೆ ನಮ್ಮ ಪಕ್ಷ ಕೈ ಹಾಕಿಲ್ಲ. ಅವರ ಪಕ್ಷದ ಅತೃಪ್ತ ಶಾಸಕರು ಅಸಮಾಧಾನಗೊಂಡು ಬೇರೆಲ್ಲೋ ಹೋಗಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ. ನಾವು ಯಾರನ್ನೂ ಸಂಪರ್ಕಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !