ರಕ್ಷಣಾ ಇಲಾಖೆ ಭೂಮಿ ಬಿಬಿಎಂಪಿಗೆ ಹಸ್ತಾಂತ

7
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌– ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಧ್ಯೆ ಸಹಮತ

ರಕ್ಷಣಾ ಇಲಾಖೆ ಭೂಮಿ ಬಿಬಿಎಂಪಿಗೆ ಹಸ್ತಾಂತ

Published:
Updated:

ಬೆಂಗಳೂರು: ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿರುವ ಭೂಮಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಉಂಟಾಗಿರುವ ಸಮಸ್ಯೆಯಿಂದ ನಗರದಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ತಕ್ಷಣ ಆರಂಭಿಸಲು ಅವಕಾಶ ನೀಡುವಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸೂಚನೆ ನೀಡಿದ್ದಾರೆ.

ಕಾಮಗಾರಿ ನಡೆಸಲು ಅಗತ್ಯವಿರುವ ಭೂಮಿಯನ್ನು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಗೆ (ಬಿಬಿಎಂಪಿ) ಹಸ್ತಾಂತರಿಸಬೇಕು ಎಂದೂ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಆ ಮೂಲಕ ನಗರದ ಹತ್ತು ಕಡೆಗಳಲ್ಲಿ ಬಿಬಿಎಂಪಿ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಮೇಲ್ಸೇತುವೆ, ರಸ್ತೆಗಳ ವಿಸ್ತರಣೆ, ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಇದ್ದ ವಿಘ್ನ ದೂರವಾಗಿದೆ.

ಎಂಟು ಕಡೆಗಳಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ರಕ್ಷಣಾ ಇಲಾಖೆಯು ಬಿಬಿಎಂಪಿಗೆ ಹಸ್ತಾಂತರಿಸಲಿದೆ. ಎರಡು ಕಡೆ ಗುತ್ತಿಗೆ ಆಧಾರದ ಮೇಲೆ ಜಮೀನು ನೀಡಲಿದೆ.

ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶನಿವಾರ ಮಹತ್ವದ ಸಭೆ ನಡೆಸಿದರು.

ಬಳಿಕ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ‘ಜುಲೈ 18ರಂದು ದೆಹಲಿಗೆ ಬಂದಿದ್ದ ಕುಮಾರಸ್ವಾಮಿ, ಭೂಮಿ ಸ್ವಾಧೀನ ವಿಷಯದಲ್ಲಿ ಗೊಂದಲ ಮುಂದುವರಿದಿರುವ ಕಾರಣ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆ ನಾನು ಚರ್ಚೆ ಮಾಡಿದ್ದೇನೆ. 10 ಯೋಜನೆಗಳಿಗೆ ಭೂಮಿ ಹಸ್ತಾಂತರಿಸಲು ಒಪ್ಪಿಗೆ ನೀಡಿದ್ದೇನೆ’ ಎಂದರು.

‘ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಾಯದೆ, ಕಾಮಗಾರಿಗೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

ರಕ್ಷಣಾ ಇಲಾಖೆಗೆ ಬದಲಿ ಜಮೀನು: ರಕ್ಷಣಾ ಇಲಾಖೆ ನಿಯಮಗಳ ಅನ್ವಯವೇ ಬಿಬಿಎಂಪಿಗೆ ಭೂಮಿ ಹಸ್ತಾಂತರಿಸಲು ಒಪ್ಪಿಗೆ ನೀಡಲಾಗಿದೆ. ನಾವು ನೀಡಿದ ಭೂಮಿಗೆ ಪರ್ಯಾಯವಾಗಿ, ಅಷ್ಟೇ ಮೌಲ್ಯದ ಭೂಮಿಯನ್ನು ರಕ್ಷಣಾ ಇಲಾಖೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಭೂಮಿ ವರ್ಗಾವಣೆ ಮಾಡಲು ಒಪ್ಪಿದ್ದಾರೆ’ ಎಂದರು.

‘ಒಟ್ಟು ₹ 282 ಕೋಟಿ ಮೌಲ್ಯದ 45,175 ಚದರ ಮೀಟರ್ ರಕ್ಷಣಾ ಇಲಾಖೆಯ ಭೂಮಿಯನ್ನು ಸಂಪೂರ್ಣವಾಗಿ ಬಿಬಿಎಂಪಿ ಮಾಲೀಕತ್ವಕ್ಕೆ ವಹಿಸಲಾಗುವುದು. ಉಳಿದಂತೆ, ಎರಡು ಕಡೆ 10,654 ಚ.ಮೀ. ಜಾಗವನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುವುದು’ ಎಂದೂ ಅವರು ತಿಳಿಸಿದರು.

ಬಿಬಿಎಂಪಿ ಮೇಯರ್ ಸಂಪತ್‍ರಾಜ್, ಕೇಂದ್ರ ರಕ್ಷಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಭಾಷ್‍ಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಇದ್ದರು.

 ರಕ್ಷಣಾ ಇಲಾಖೆ ಬಿಬಿಎಂಪಿಗೆ ಹಸ್ತಾಂತರಿಸಲಿರುವ ಭೂಮಿ

* ಈಜಿಪುರ ಒಳ ವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆ ವರೆಗೆ (2015ರ ಮಾಸ್ಟರ್ ಪ್ಲಾನ್‍ನಂತೆ) ರಸ್ತೆ ನಿರ್ಮಿಸಲು ₹ 133.04 ಕೋಟಿ ಮೌಲ್ಯದ 21,600 ಚ. ಮೀ. ಜಾಗ

*ಬ್ಯಾಟರಾಯನಪುರದ ರಾಷ್ಟ್ರೀಯ ಹೆದ್ದಾರಿ–7ರಿಂದ ಸಂಜೀವಿನಿನಗರವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ₹ 9.55 ಕೋಟಿ ಮೌಲ್ಯದ 3,790 ಚ.ಮೀ. ಜಮೀನು

* ರಾಷ್ಟ್ರೀಯ ಹೆದ್ದಾರಿ–7 ಮತ್ತು ಹೆಬ್ಬಾಳ ಸರೋವರ ಬಡಾವಣೆ ಮಧ್ಯೆ ಅಮ್ಕೋ ಬಡಾವಣೆ ಮೂಲಕ ಸಂಪರ್ಕ ರಸ್ತೆ ಕಲ್ಪಿಸಲು ₹ 4.73 ಕೋಟಿ ಮೌಲ್ಯದ 2003 ಚ.ಮೀ. ಜಾಗ.

* ಹೊಸೂರು–ಲುಸ್ಕರ್ ರಸ್ತೆ ವಿಸ್ತರಣೆಗೆ ₹ 103 ಕೋಟಿ ಮೌಲ್ಯದ 10,637 ಚ.ಮೀ. ಜಾಗ.

* ಹಾಸ್ಮ್ಯಾಟ್ ಆಸ್ಪತ್ರೆಯಿಂದ ವಿವೇಕನಗರ 1ನೇ ಮುಖ್ಯರಸ್ತೆವರೆಗಿನ ಅಗರ ರಸ್ತೆಯನ್ನು ಅಭಿವೃದ್ಧಿಪಡಿಸಲು ₹ 8.78 ಕೋಟಿ ಮೌಲ್ಯದ 1699 ಚ.ಮೀ. ಜಾಗ

* ಲೊಯರ್ ಅಗರ ರಸ್ತೆ ವಿಸ್ತರಿಸಲು ₹ 1.83 ಕೋಟಿ ಮೌಲ್ಯದ 331 ಚ.ಮೀ. ಜಾಗ

* ಡಿ.ಜೆ.ಹಳ್ಳಿಯ ಕಾವಲ್‍ಬೈರಸಂದ್ರದಿಂದ ಮೋದಿ ಗಾರ್ಡನ್‍ವರೆಗೆ ಪರ್ಯಾಯ ರಸ್ತೆ ನಿರ್ಮಿಸಲು ₹ 15.36 ಕೋಟಿ ಮೌಲ್ಯದ 4604 ಚ.ಮೀ. ಜಾಗ

* ಈಜಿಪುರ ಒಳ ವರ್ತುಲ ರಸ್ತೆ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್, 100 ಅಡಿ ಕೇಂದ್ರೀಯ ಸದನ ಜಂಕ್ಷನ್‍ಗೆ ಒಳಪಡುವ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ₹ 4.88 ಕೋಟಿ ಮೌಲ್ಯದ 497.90 ಚ.ಮೀ. ಜಾಗ

ಗುತ್ತಿಗೆ ಆಧಾರದ ಮೇಲೆ ಭೂಮಿ ವರ್ಗಾವಣೆ

* ಬಾಣಸವಾಡಿಯ ಮಾರುತಿ ಸೇವಾನಗರದಲ್ಲಿರುವ ರೈಲ್ವೆ ಮೇಲ್ಸೇತುವೆ ಹೆಚ್ಚುವರಿ ಲೂಪ್ ನಿರ್ಮಿಸಲು 446 ಚ.ಮೀ. ಜಾಗ

* ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು 10,207 ಚ.ಮೀ. ಜಾಗ

***

ಅಭಿವೃದ್ಧಿ ಯೋಜನೆಗೆ ಅಗತ್ಯವಾದ ಭೂಮಿ ನೀಡಲು ರಕ್ಷಣಾ ಸಚಿವರು ಒಪ್ಪಿದ್ದಾರೆ. ರಕ್ಷಣಾ ಇಲಾಖೆಗೆ  ಪರ್ಯಾಯ ಭೂಮಿ ನೀಡಲಾಗುವುದು
– ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

*

*

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !