ಐ.ಟಿ ಅಧಿಕಾರಿಗಳು ಸತ್ಯ ಹರಿಶ್ಚಂದ್ರರಲ್ಲ: ಕುಮಾರಸ್ವಾಮಿ ವಾಗ್ದಾಳಿ

ಬುಧವಾರ, ಏಪ್ರಿಲ್ 24, 2019
31 °C
‘ಬಿಜೆಪಿ ಮುಖಂಡರ ಮನೆಗಳ ಮೇಲೆಯೂ ದಾಳಿ ನಡೆಸಲಿ’

ಐ.ಟಿ ಅಧಿಕಾರಿಗಳು ಸತ್ಯ ಹರಿಶ್ಚಂದ್ರರಲ್ಲ: ಕುಮಾರಸ್ವಾಮಿ ವಾಗ್ದಾಳಿ

Published:
Updated:
Prajavani

ಕಾರವಾರ: ‘ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳೇನು ಸತ್ಯ ಹರಿಶ್ಚಂದ್ರರಲ್ಲ. ಅವರ ಕಥೆಗಳು ನಮಗೆ ಗೊತ್ತಿಲ್ಲವೇ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಆನಂದ ಅಸ್ನೋಟಿಕರ್ ಗುರುವಾರ ನಾಮಪತ್ರ ಸಲ್ಲಿಸುವಾಗ ಅವರು ಜತೆಗಿದ್ದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಐ.ಟಿ ಅಧಿಕಾರಿಗಳೇ ಬುಧವಾರ ₹ 15 ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ. ಅವರ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ಇಂದು (ಏ.4) ಬೆಳಿಗ್ಗೆಯೂ ದಾಳಿ ನಡೆಸಿದಾಗ ₹ 1.50 ಕೋಟಿ ಹಣ ಪತ್ತೆಯಾಗಿದೆ. ಅವರೇ ದರೋಡೆಕೋರರು. ಅಭ್ಯರ್ಥಿಗಳು, ಸಾರ್ವಜನಿಕರಿಗೆ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಹಾಸನ ಹಾಗೂ ಮಂಡ್ಯದಲ್ಲಿ ದಾಳಿ ನಡೆಸುವ ಅಧಿಕಾರಿಗಳು, ಬಿಜೆಪಿ ಮುಖಂಡರ ಮನೆಗಳ ಮೇಲೆಯೂ ದಾಳಿ ನಡೆಸಲಿ’ ಎಂದು ಒತ್ತಾಯಿಸಿದರು.

‘ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಮಂಡ್ಯದಲ್ಲಿ ಪ್ರಚಾರ ಮುಗಿಸಿ, ಕೆಆರ್‌ಎಸ್‌ ಬಳಿ ಊಟಕ್ಕೆ ಹೋಗಿದ್ದ ಹೋಟೆಲ್‌ನ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎದುರಾಳಿ ಅಭ್ಯರ್ಥಿಗಳು ಎಷ್ಟೊಂದು ಪ್ರಮಾಣದಲ್ಲಿ ಹಣ ಹಂಚುತ್ತಾರೆ, ಅವರನ್ನು ಪ್ರಶ್ನಿಸಲು ಯಾರೂ ಇಲ್ಲ. ನೂರಾರು ವಾಹನಗಳು ಅವರ ಹಿಂದೆ ಹೋಗುತ್ತವೆ. ಅವರನ್ನು ಕೇಳೋರೇ ಇಲ್ಲ’ ಎಂದು ಅಸಮಾಧಾನ ಹೊರ ಹಾಕಿದರು.

‘ರಾಜ್ಯದ ಮುಖ್ಯಮಂತ್ರಿಯಾಗಿರುವ ನನ್ನನ್ನೂ ಈವರೆಗೆ ಸುಮಾರು 13 ಚುನಾವಣಾ ಚೆಕ್‌ಪೋಸ್ಟ್‌ಗಳಲ್ಲಿ ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ, ಚುನಾವಣಾ ಆಯೋಗದ ಆದೇಶ ಪಾಲಿಸಬೇಕು ಎನ್ನುತ್ತಾರೆ. ಗೋಕರ್ಣದಲ್ಲಿ ತಿಂಡಿ ತಿಂದು ಹೊರಟ ಮೇಲೆಯೂ ಎರಡು ಕಡೆ ತಡೆದು ಪರಿಶೀಲಿಸಿದರು. ಈ ಬಾರಿ ಚುನಾವಣಾ ಆಯೋಗದ ಅಧಿಕಾರಿಗಳು ವರ್ಗವಾದಷ್ಟು ಹಿಂದೆಂದೂ ಆಗಿರಲಿಲ್ಲ. ಪೊಲೀಸರು, ಕಿರಿಯ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗಿದೆ. ಹೀಗೆ ಮಾಡಿದರೆ ಚುನಾವಣಾ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇದಕ್ಕೆ ಚುನಾವಣೆ ಎನ್ನುತ್ತಾರಾ’ ಎಂದು ಪ್ರಶ್ನಿಸಿದರು. 

ಇದಕ್ಕೂ ಮೊದಲು ನಗರದಲ್ಲಿ ನಡೆದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ವಿರುದ್ಧ ಹರಿಹಾಯ್ದರು. 

‘ಈ ಬಾರಿ ಬಿಜೆಪಿ ಮಾತ್ರವಲ್ಲ, ಯಾವುದೇ ಪಕ್ಷವೂ ಸ್ವತಂತ್ರವಾಗಿ ಅಧಿಕಾರ ಪಡೆಯುವುದಿಲ್ಲ. ನಾಲ್ಕು ಜನ ಬೀದಿಯಲ್ಲಿ ನಿಂತು ಮೋದಿ ಮೋದಿ ಎಂದು ಕೂಗಿದ ಮಾತ್ರಕ್ಕೆ ಬದಲಾವಣೆಯಾಗುವುದಿಲ್ಲ. ಪ್ರಾದೇಶಿಕ ಪಕ್ಷಗಳನ್ನು ‘ಕಿಚಡಿ’ ಎಂದು ತಮಾಷೆ ಮಾಡಿದ್ದ ನರೇಂದ್ರ ಮೋದಿಯೇ ಖುದ್ದು 13 ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಚುನಾವಣೆ ಎದುರಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !