ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಸಾಲ ಮನ್ನಾ ಯೋಜನೆ ತೆರೆದ ಪುಸ್ತಕ’

ಪ್ರಧಾನಿ ಮೋದಿ ಹೇಳಿಕೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು
Last Updated 30 ಡಿಸೆಂಬರ್ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ರೈತರ ಸಾಲ ಮನ್ನಾ ಯೋಜನೆ ತೆರೆದ ಪುಸ್ತಕದಂತಿದೆ. ಈ ಯೋಜನೆಯ ಎಲ್ಲ ಮಾಹಿತಿಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಇಂತಹ ವ್ಯವಸ್ಥೆಯನ್ನು ಯಾವ ರಾಜ್ಯವೂ ರೂಪಿಸಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ರೈತರ ಸಾಲ ಮನ್ನಾ ಯೋಜನೆ ನಿರ್ಧಾರವನ್ನು ‘ಅಪಹಾಸ್ಯ’ ಎಂದು ಲೇವಡಿ ಮಾಡಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ಮೋದಿ ಹೇಳಿಕೆ ರೈತರೂ ಸೇರಿದಂತೆ ಇಡೀ ದೇಶದ ಜನರ ದಾರಿ ತಪ್ಪಿಸುವಂತಿದೆ’ ಎಂದಿದ್ದಾರೆ.

‘ಪ್ರಧಾನಿ ಹೇಳಿಕೆ ಅತ್ಯಂತ ದುರದೃಷ್ಟಕರ ಮತ್ತು ದೇಶದ ದೌರ್ಭಾಗ್ಯ’ ಎಂದಿರುವ ಕುಮಾರಸ್ವಾಮಿ, ‘ಸಾಲ ಮನ್ನಾ ಯೋಜನೆ ರೈತರ ಬಗ್ಗೆ ಮೈತ್ರಿ ಸರ್ಕಾರ ಹೊಂದಿರುವ ಬದ್ಧತೆ. ಆದರೆ, ವಾಸ್ತವದ ಅರಿವಿಲ್ಲದೆ ಯೋಜನೆ ಬಗ್ಗೆ ಪ್ರಧಾನಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’ ಎಂದು ನೋವು ವ್ಯಕ್ತಪಡಿಸಿದ್ದಾರೆ.

‘ಮೈತ್ರಿ ಸರ್ಕಾರ ತೆರಿಗೆದಾರರ ಹಣ ಪೋಲಾಗದಂತೆ ಎಚ್ಚರಿಕೆಯಿಂದ ಈ ಯೋಜನೆ ಜಾರಿಗೊಳಿಸಿದೆ. ಪ್ರತಿಯೊಬ್ಬ ಅರ್ಹ ರೈತರಿಗೆ ಹಣ ಸೇರುವಂತೆ ಮಾಡಿದೆ. ಸಹಕಾರಿ ವಲಯವೂ ಸೇರಿದಂತೆ ಎಲ್ಲ ಮಧ್ಯವರ್ತಿಗಳ ಹಾವಳಿ ಸಂಪೂರ್ಣವಾಗಿ ತಡೆಗಟ್ಟಲಾಗಿದೆ. ಯಾವುದೇ ದುರ್ಬಳಕೆ ಅವಕಾಶ ಸಿಗದಂತೆ ತಂತ್ರಾಂಶ ಅಳವಡಿಸಿಕೊಳ್ಳಲಾಗಿದೆ’ ಎಂದಿದ್ದಾರೆ.

‘ಈವರೆಗೆ ಸುಮಾರು 60 ಸಾವಿರ ರೈತರ ₹ 350 ಕೋಟಿ ಸಾಲ ಮನ್ನಾ ಮೊತ್ತವನ್ನು ನೇರವಾಗಿ ಅವರವರ ಬ್ಯಾಂಕ್ ಖಾತೆಗೆ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾದರಿಯಲ್ಲಿ ಜಮೆ ಮಾಡಲಾಗಿದೆ. ಮುಂದಿನ ವಾರ ಇನ್ನೂ ಒಂದು ಲಕ್ಷ ರೈತರ ಖಾತೆಗಳಿಗೆ ₹ 400 ಕೋಟಿ ಜಮೆ ಮಾಡುವ ಉದ್ದೇಶವಿದೆ’ ಎಂದೂ ಹೇಳಿದ್ದಾರೆ.

‘ವಾಣಿಜ್ಯ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ಸುಮಾರು 21 ಲಕ್ಷ ರೈತರ ಪೈಕಿ ಕೇವಲ 10 ದಿನಗಳಲ್ಲಿ 8.5 ಲಕ್ಷ ರೈತರು ತಮ್ಮ ಆಧಾರ್, ರೇಷನ್ ಕಾರ್ಡ್ ಹಾಗೂ ಪಹಣಿಯ ಮಾಹಿತಿ ಒದಗಿಸಿದ್ದಾರೆ. ಈ ಪ್ರಕ್ರಿಯೆ 2019ರ ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಯೋಜನೆಗೆ ಅರ್ಹರಾದ ಎಲ್ಲ ರೈತರನ್ನು ಈ ಅವಧಿಯ ಒಳಗೆ ನೊಂದಣಿ ಮಾಡಿಕೊಳ್ಳಲಾಗುವುದು’ ಎಂದಿದ್ದಾರೆ.

‘ವಾಸ್ತವ ಅಂಶಗಳು ಕಣ್ಣು ಮುಂದೆಯೇ ಇದ್ದರೂ, ಈವರೆಗೆ ಕೇವಲ 800 ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ’ ಎಂದೂ ಮುಖ್ಯಮಂತ್ರಿ ಬೇಸರ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT