ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ.ಇಬ್ರಾಹಿಂ ವಿರುದ್ಧ ಮಹಮ್ಮದೀಯರ ಕನ್ನಡ ವೇದಿಕೆ ಅಸಮಾಧಾನ

ರಂಜಾನ್‌ ಪ್ರಾರ್ಥನೆಗೆ ಅವಕಾಶ ಕೋರಿಕೆ ಸರಿಯಲ್ಲ ಎಂಬ ಅಭಿಪ್ರಾಯ
Last Updated 17 ಮೇ 2020, 13:14 IST
ಅಕ್ಷರ ಗಾತ್ರ

ಬೆಂಗಳೂರು: ರಂಜಾನ್‌ ಆಚರಣೆಗೆ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಮಾಡಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಅವರ ನಡೆಗೆ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

‘ಇಬ್ರಾಹಿಂ ಅವರ ಪತ್ರ ಓದಿದರೆ ಅಚ್ಚರಿ ಮತ್ತು ದಿಗ್ಭ್ರಮೆ ಏಕಕಾಲಕ್ಕೆ ಉಂಟಾಗುತ್ತದೆ. ಹಿರಿಯ ನಾಯಕರಾಗಿ, ಸಮಾಜದ ಏಳಿಗೆ ಬಯಸುವ ವ್ಯಕ್ತಿಯಾಗಿ ಅವರು ಇಂತಹ ಪತ್ರ ಬರೆಯಬಾರದಿತ್ತು’ ಎಂದು ವೇದಿಕೆಯ ಅಧ್ಯಕ್ಷ ಸಮಿಉಲ್ಲಾಖಾನ್ ಹೇಳಿದ್ದಾರೆ.

‘ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡುವ ಸಂದರ್ಭ ಬಂದರೆ, ಅಲ್ಲಿ ವ್ಯಕ್ತಿಗತ ಅಂತರ ನಿಯಮ ಪಾಲಿಸುವುದು ಕಷ್ಟ ಎಂಬುದು ಎಲ್ಲ ಮುಸ್ಲಿಮರಿಗೆ ಗೊತ್ತಿರುವ ಸತ್ಯ. ಕೊರೊನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಣ್ಣಲ್ಲಿ ಮುಸ್ಲಿಮರು ಈಗಾಗಲೇ ಅವಮಾನ, ಅನುಮಾನದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದನ್ನು ಲೆಕ್ಕಿಸದೆ, ಇಬ್ರಾಹಿಂ ಅವರು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕೋರಿರುವುದು ಸರಿಯಲ್ಲ. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

‘ಹಬ್ಬಕ್ಕಾಗಿ ಬಟ್ಟೆ ಖರೀದಿಸಬೇಡಿ ಎಂದು ಈಗಾಗಲೇ ಮುಸ್ಲಿಂ ಧರ್ಮಗುರುಗಳು ಹೇಳಿದರೆ, ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ ಎಂದು ಚಿಂತಕರು ಕರೆ ನೀಡಿದ್ದಾರೆ. ಮುಸ್ಲಿಮರು ಆರೋಗ್ಯ ರಕ್ಷಿಸಿಕೊಳ್ಳಲಿ, ಅವರು ಅಪಪ್ರಚಾರಕ್ಕೆ ಬಲಿಯಾಗದಿರಲಿ ಎಂಬ ಸದಾಶಯ ಇದರ ಹಿಂದಿದೆ’ ಎಂದು ವೇದಿಕೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT