ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷ್ಣಾ’ದಲ್ಲಿ ಕಣ್ಣೀರ ಕಥೆಗಳ ದರ್ಶನ

ನೊಂದವರ ಬದುಕಿಗೊಂದು ಸಾಂತ್ವನದ ಸ್ಪರ್ಶ
Last Updated 1 ಸೆಪ್ಟೆಂಬರ್ 2018, 17:00 IST
ಅಕ್ಷರ ಗಾತ್ರ

ಬೆಂಗಳೂರು: ಅಂಗವಿಕಲರು, ವೃದ್ಧರು, ಮಹಿಳೆಯರು, ಮಕ್ಕಳು, ಅಂಧರು, ಬಾಣಂತಿಯರು, ಮಗಳಿಗೆ ಅಳಿಯ ದಿನಾ ಹೊಡೆಯುತ್ತಾನೆ ಎಂದು ಅಲವತ್ತುಕೊಂಡ ಮಾವ, ಸರದಿಯಲ್ಲಿ ನಿಂತ ವಿಧವೆಯರು, ರೋಗಿಗಳು... ಹೀಗೆ ನೂರಾರು ದುಃಖಿತರ ಕಣ್ಣೀರ ಕಥೆಗಳಿಗೆ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ ಸಾಕ್ಷಿಯಾಯಿತು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರ ನೂರು ದಿನ ಪೂರೈಸಿದ ಬೆನ್ನಲ್ಲೇ ಶ್ರಾವಣ ಶನಿವಾರ ನಡೆಸಿದ ಅಧಿಕೃತ ಜನತಾ ದರ್ಶನ ಅಕ್ಷರಶಃ ಕರಳು ಕಿತ್ತು ಬರುವಂತಹ ನೋವುಗಳ ಮಹಾಪೂರದಲ್ಲಿ ಮಿಂದು ಹೋಯಿತು.

ಮಧ್ಯಾಹ್ನ 12.10ಕ್ಕೆ ಆರಂಭವಾದ ದರ್ಶನವನ್ನು ರಾತ್ರಿ 10 ಗಂಟೆಯವರೆಗೂ ನಡೆಸಿ, ದೂರು ದುಮ್ಮಾನಗಳಿಗೆ ಕಿವಿಯಾದರು. ಮಧ್ಯಾಹ್ನ ಒಂದು ಸ್ಯಾಂಡ್‌ವಿಚ್‌ ಸೇವಿಸಿದ್ದನ್ನು ಬಿಟ್ಟರೆ ಕೂತಲ್ಲಿಂದ ಕದಲದೆ ಎಲ್ಲರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.

ಹೆರಿಗೆ ಸಮಯದಲ್ಲಿ ಆಸ್ಪತ್ರೆ ಬಿಲ್‌ ಅನ್ನು ಬೇಕಾಬಿಟ್ಟಿ ಏರಿಸಿದ್ದರಿಂದ ಕಂಗಾಲಾಗಿ ಹಸುಗೂಸನ್ನು ಎದೆಗವುಚಿಕೊಂಡು ಬಂದಿದ್ದ ಶಿರಾದ ನಾಗಮಣಿಗೆ ಸ್ಥಳದಲ್ಲೇ ₹ 2 ಲಕ್ಷದ ಚೆಕ್‌ ಕೊಟ್ಟ ಅವರು, ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ 11 ವರ್ಷದ ಲೋಹಿತ್‌ನ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿದರಲ್ಲದೇ, ಸ್ಥಳದಲ್ಲೇ ₹ 10 ಸಾವಿರದ ಚೆಕ್‌ ನೀಡಿದರು. ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಚಿಕ್ಕಬಳ್ಳಾಪುರದ ನಾಗಮಣಿಯವರ ಇಂಜೆಕ್ಷನ್‌ ಖರ್ಚು ಭರಿಸುವ ವ್ಯವಸ್ಥೆ ಮಾಡಿದರು.

ಜಗಳೂರಿನ ಅಂಗವಿಕಲರೊಬ್ಬರನ್ನು, ‘ಏನಪ್ಪಾ ನೀನು ಈ ಹಿಂದೆ ಜನತಾ ದರ್ಶನಕ್ಕೆ ಬಂದಿದ್ದೆಯಲ್ಲವಾ, ಮತ್ತೇಕೆ ಬಂದೆ, ಯಾಕೆ ಕೆಲಸ ಆಗಿಲ್ಲವೇ’ ಎಂದು ಪ್ರಶ್ನಿಸಿದರು. ಇದಕ್ಕೆ ಆತ, ‘ಇಲ್ಲಾ ಸ್ವಾಮಿ’ ಎಂದಾಗ ಸಂಬಂಧಿಸಿದ ಅಧಿಕಾರಿಗಳಿಗೆ ಫೋನಾಯಿಸಿ, ‘ಒಮ್ಮೆ ಜನತಾ ದರ್ಶನಕ್ಕೆ ಬಂದವರು ಯಾರೂ ಮತ್ತೆ ಬರುವಂತಾಗಬಾರದು. ಇದು ಎಲ್ಲಾ ಇಲಾಖೆಗಳಿಗೂ ಅನ್ವಯವಾಗುತ್ತದೆ’ ಎಂದು ಖಡಕ್‌ ಆದೇಶ ನೀಡಿದರು.

ಹಾವೇರಿಯ ತರುಣಿ ಸಂಜನಾ ಗೋಳೋ ಎಂದು ಅಳುತ್ತಲೇ, ‘ನಾನು ಸಿವಿಲ್‌ ಎಂಜಿನಿಯರಿಂಗ್‌ ಪದವೀಧರೆ. ನಿರುದ್ಯೋಗಿ, ಸೋಮವಾರದೊಳಗೆ ನನಗೆ ನೀವು ಕೆಲಸ ಕೊಡಿಸಲೇಬೇಕು’ ಎಂದು ರಚ್ಚೆ ಹಿಡಿದಾಗ, ‘ಯಾಕೊ ಮಗಾ (ಸಂಜನಾ), ತಲೆ ಕೆಡಿಸಿಕೊಳ್ಳಬೇಡ. ಇಲ್ಲೇ ಕೂತ್ಕೊ. ನಿನಗೆ ಸೋಮವಾರದೊಳಗೆ ಕೆಲಸ ಕೊಡಿಸುವ ಜವಾಬ್ದಾರಿ ನಂದು’ ಎಂದು ಕೆಲಸ ಕೊಡಿಸುವ ವ್ಯವಸ್ಥೆ ಮಾಡಿಸಿದರು.

‘ಕೈ ಸಾಲ ಮಾಡಿದ್ದೀನಿ. ಆದರೆ, ಅಸಲಿಗಿಂತಲೂ ಹೆಚ್ಚಾಗಿ ಲಕ್ಷಗಟ್ಟಲೆ ಬಡ್ಡಿ ತೀರಿಸಿದ್ದೀನಿ’ ಎಂದು ಕನಕಪುರದ ಮಹಿಳೆಯೊಬ್ಬರು ಕಣ್ಣೀರಿಟ್ಟಾಗ ಜಿಲ್ಲಾಧಿಕಾರಿಗೆ ಫೋನಾಯಿಸಿ, ‘ಸಂತ್ರಸ್ತೆ ನಿಮ್ಮ ಬಳಿ ಬರುತ್ತಾರೆ. ಅವರಿಂದ ಕಂಪ್ಲೇಂಟ್‌ ಬರೆಸಿಕೊಳ್ಳಿ, ಸಾಲ ಕೇಳುತ್ತಿರುವವರನ್ನು ಕೂಡಲೇ ಬಂಧಿಸಿ’ ಎಂದು ತಾಕೀತು ಮಾಡಿದರು.

ಬಂದವರ ಗೋಳಿನ ಗಾಥೆಗಳನ್ನೆಲ್ಲಾ ಶಾಂತವಾಗಿ ಕೇಳಿ ಅವರ ಎದೆಭಾರ ಇಳಿಸಿದ ಕುಮಾರಸ್ವಾಮಿ, ಆಗಿಂದ್ದಾಗ್ಗೆ ತಾವು ಕೂತ ಕುರ್ಚಿಯಲ್ಲಿ ಸರಿದಾಡುತ್ತಾ ಬೆನ್ನು ನೋವನ್ನು ನುಂಗಿಕೊಳ್ಳಲು ಒದ್ದಾಡುತ್ತಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಇದ್ದಾಗಲೆಲ್ಲಾ ಪ್ರತಿ ಶನಿವಾರ ತಪ್ಪದೇ ಜನತಾ ದರ್ಶನ ನಡೆಸುತ್ತೇನೆ. ಯಾರಿಗೂ ನಿರಾಸೆ ಉಂಟು ಮಾಡುವುದಿಲ್ಲ. ಈ ತನಕ ಯಾರಿಗೂ ನಿರಾಸೆ ಉಂಟು ಮಾಡಿಯೂ ಇಲ್ಲ. ಅದು ರಾತ್ರಿ 11 ಗಂಟೆಯಾದರೂ ಸರಿ, ಒಂದು ಗಂಟೆಯೇ ಆದರೂ ಸರಿ. ಎಲ್ಲರ ಅಹವಾಲು ಆಲಿಸಿಯೇ ತೀರುತ್ತೇನೆ’ ಎಂದರು.

ನಾಯಿ ದಾಳಿಗೆ ಅಸಹಾಯಕತೆ

‘ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿದ ಸಂದರ್ಭದಲ್ಲಿ ನಾವು ಏನಾದರೂ ಮಾಡಲು ಮುಂದಾದರೆ ಪ್ರಾಣಿ ದಯಾ ಸಂಘದವರು ನಮ್ಮನ್ನು ಪ್ರಶ್ನಿಸುತ್ತಾರೆ. ಏನು ಮಾಡುವುದು’ ಎಂದು ಕುಮಾರಸ್ವಾಮಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಕುಬ್ಜೆಯ ಕಥೆಗೆ ಮಿಡಿದ ಮುಖ್ಯಮಂತ್ರಿ

‘ನಾನು ಅಂಗವಿಕಲೆ, ಜನ ನನ್ನನ್ನು ನೋಡಿ ಆಡಿಕೊಳ್ತಾರೆ, ಎರಡೂವರೆ ಅಡಿ ಎತ್ತರ ಇದ್ದಾಳೆ, ಇವಳಿಗೆ ಮಗು ಬೇರೆ ಕೇಡು ಎಂದು ಛೇಡಿಸುತ್ತಾರೆ’ ಎಂದು ಕಣ್ಣೀರಿಟ್ಟ ದೊಡ್ಡಮೇಟಿ ಕುರ್ಕೆಯ ಹಿರೇದಾಸರಹಳ್ಳಿ ಜೆ.ಸಿ.ಪುರದ ಸರಸ್ವತಿ ಸಾಲಗಾರರ ಕಾಟದಿಂದ ನೊಂದು ಬೆಂದಿದ್ದೇನೆ’ ಎಂದು ಮುಖ್ಯಮಂತ್ರಿಗಳ ಎದುರು ಗೋಳು ತೋಡಿಕೊಂಡರು.

ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ, ‘ನೀನು ಸೋಮವಾರ ಇಲ್ಲಿಗೇ ಬಾರಮ್ಮಾ ₹ 50 ಸಾವಿರ ಕೊಡಿಸುತ್ತೇನೆ. ಋಣಮುಕ್ತಳಾಗು' ಎಂದು ಹರಸಿ ಕಳುಹಿಸಿದರು.

ಕಣ್ಣೀರು ಹಾಕಿದ ದೇಶಪಾಂಡೆ...

ಕೆಲ ಹೊತ್ತು ಮುಖ್ಯಮಂತ್ರಿಗಳ ಜೊತೆ ಕೂತಿದ್ದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸಾರ್ವಜನಿಕರ ಸಮಸ್ಯೆಗಳನ್ನು ಕಂಡು ಕಣ್ಣೀರು ಸುರಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿಗಳ ಈ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದು ಹುರಿದುಂಬಿಸಿದರು.

‘ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ಅದೊಂದು ಕಾಲವಿತ್ತು. ಆದರೆ, ಈಗಿಲ್ಲ. ಕುಮಾರಸ್ವಾಮಿ ಹಾಗೇ ಮಾತ್ ಮಾತ್ನಲ್ಲಿ ಆ ರೀತಿ ಹೇಳಿದ್ದಾರೆ’ ಅಷ್ಟೇ ಎಂದರು.

ಅಧಿಕಾರಿಗಳೇನು ಉದ್ದು ಹುರಿಯುತ್ತಾರಾ?

‘ಕುಮಾರಸ್ವಾಮಿಯ ಜನತಾದರ್ಶನ ನಿಜವಾಗಿಯೂ ಶ್ಲಾಘನೀಯವೇ ಸರಿ. ಆದರೆ, ನಮ್ಮ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಅಧಿಕಾರಿಗಳು ತಂತಮ್ಮ ಕ್ಷೇತ್ರಗಳಲ್ಲಿ ಏನು ಉದ್ದು ಹುರಿಯುತ್ತಾರೆಯೇ...’

ಇದು ಧಾರವಾಡದಿಂದ ಬಂದಿದ್ದ ಶಿರಹಟ್ಟಿಯವರ ಪ್ರಶ್ನೆ.

‘ಕುಮಾರಸ್ವಾಮಿ ನಮ್ಮ ಸಮಸ್ಯೆ ಆಲಿಸುತ್ತಿದ್ದಾರೆ. ಆದರೆ, ಈ ಅಧಿಕಾರಿಗಳಿದ್ದಾರಲ್ಲಾ, ಇವರ ಬೆನ್ನ ಮೇಲೆ ಚಾಟಿ ಬೀಸಿದರೆ ನಾವ್ಯಾರೂ ಇಲ್ಲಿಗೆ ಬರೋ ಉಸಾಬರೀನೆ ಇರಲ್ರೀ ಸರ’ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT