ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಸಿ.ಎಂ ಸೂಚನೆ

ಜನರು ಅಲೆಯುವಂತೆ ಮಾಡಬೇಡಿ; ಅಧಿಕಾರಿಗಳಿಗೆ ಕಟ್ಟಪ್ಪಣೆ
Last Updated 12 ಜೂನ್ 2019, 18:30 IST
ಅಕ್ಷರ ಗಾತ್ರ

ಬೆಂಗಳೂರು:ಮುಂಗಾರು ಆರಂಭಗೊಂಡಿರುವುದರಿಂದ ರೈತರಿಗೆ ತಕ್ಷಣವೇ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಬುಧವಾರ ಆರಂಭವಾದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಒಗಳು ಮತ್ತು ಸರ್ಕಾರದ ಕಾರ್ಯದರ್ಶಿಗಳ ಎರಡು ದಿನಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಅಗತ್ಯವಿರುವಷ್ಟು ರಸಗೊಬ್ಬರ ಮತ್ತು ಬಿತ್ತನೆ ಬೀಜ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಗ್ರಾಮ ವಾಸ್ತವ್ಯ ಗಿಮಿಕ್‌ ಅಲ್ಲ: ಗ್ರಾಮ ವಾಸ್ತವ್ಯ ಗಿಮಿಕ್‌ ಅಲ್ಲ. ಸರ್ಕಾರ ಮತ್ತು ಜನರ ಮಧ್ಯೆ ಇರುವ ಕಂದಕವನ್ನು ಹೋಗಲಾಡಿಸಲು ಮತ್ತು ಆಡಳಿತದಲ್ಲಿ ಚುರುಕು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.

ಈ ಬಾರಿಯ ಗ್ರಾಮ ವಾಸ್ತವ್ಯ ಹಿಂದಿನಂತೆ ಮಾಡುವುದಿಲ್ಲ. ಕೆಲವು ಮಾರ್ಪಾಡುಗಳನ್ನು ಮಾಡಿದ್ದೇವೆ. ಗ್ರಾಮ ವಾಸ್ತವ್ಯದ ವೇಳೆ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಗ್ರಾಮದಲ್ಲೇ ಇದ್ದು, ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ರಾತ್ರಿ ಅದೇ ಗ್ರಾಮದಲ್ಲಿ ಇದ್ದು, ಮಾರನೇ ದಿನ ಬೇರೆ ಗ್ರಾಮಗಳಿಗೆ ಹೋಗುತ್ತೇನೆ ಎಂದು ವಿವರಿಸಿದರು.

ಎಲ್ಲ ಸಮಸ್ಯೆಗಳಿಗೂ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗುವುದು. ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದಾಗ ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದರೂ ಅದು ಮುಂದುವರಿಯಲಿಲ್ಲ. ಈಗ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶೇ 90 ರಷ್ಟು ಬಡವರಿದ್ದಾರೆಯೇ?: ಒಟ್ಟು ಪಡಿತರ ಕಾರ್ಡ್‌ಗಳಲ್ಲಿ ಶೇ 90 ರಷ್ಟು ಬಿಪಿಎಲ್‌ ಕಾರ್ಡ್‌ಗಳಿವೆ ಎಂಬ ಮಾಹಿತಿ ನೀಡಲಾಗಿದೆ. ಪ್ರಗತಿಪರ ರಾಜ್ಯದಲ್ಲಿ ಶೇ 90 ರಷ್ಟು ಬಿಪಿಎಲ್‌ ಕಾರ್ಡ್‌ಗಳಿದ್ದರೆ, ಅಷ್ಟು ಸಂಖ್ಯೆಯಲ್ಲಿ ಬಡವರಿದ್ದಾರೆ ಎಂದಾಯಿತು. ಇದು ಹೇಗೆ ಸಾಧ್ಯ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಪ್ರಶ್ನಿಸಿದರು.

ಬಿಪಿಎಲ್‌ ಕಾರ್ಡ್‌ ವಿತರಿಸುವ ಮಾನದಂಡವನ್ನು ಬದಲಿಸಬೇಕಾಗುತ್ತದೆ ಎಂದೂ ಅವರು ಸಲಹೆ ನೀಡಿದರು.

ಬತ್ತಿದ ಕೆರೆಗಳು, ತುಂಬದ ಜಲಾಶಯಗಳು

ಶೇ 68 ರಷ್ಟು ಕೆರೆಗಳು ಬತ್ತಿ ಹೋಗಿದ್ದು,ಈ ಬಾರಿ ಮುಂಗಾರು ಪ್ರವೇಶ ಇನ್ನೂ ಆಗಿಲ್ಲ. ಮಳೆಗಾಲದಲ್ಲಿ ಮೊದಲು ತುಂಬುವ ಕಬಿನಿಗೆ ಒಳ ಹರಿವೇ ಇಲ್ಲದ ಕಾರಣ ಸದ್ಯಕ್ಕೆ ಭರ್ತಿ ಆಗುವ ಲಕ್ಷಣ ಕಾಣುತ್ತಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ಸಭೆಗೆ ತಿಳಿಸಿದರು.

ರಾಜ್ಯದಲ್ಲಿ ಅಂತರ್ಜಲದ ಮಟ್ಟವೂ 10 ವರ್ಷಗಳಲ್ಲಿ ಅತಿ ಕಡಿಮೆ ಮಟ್ಟಕ್ಕೆ ತಲುಪಿದೆ. ಈ ಬಾರಿ ಮುಂಗಾರು ಮಳೆ ಆಗದಿದ್ದರೆ, ಆಗುವ ಸಮಸ್ಯೆಗಳ ಬಗ್ಗೆ ರೆಡ್ಡಿ ಸಭೆಗೆ ವಿವರಿಸಿದರು.

ಇದಕ್ಕೆ ಶಾಶ್ವತ ಪರಿಹಾರವೇನು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು, ರಾಜ್ಯದಲ್ಲಿ ಜಲ ಬಳಕೆಗೆ ಸಂಬಂಧಿಸಿದಂತೆ ದೀರ್ಘಾವಧಿ ಯೋಜನೆಗಾಗಿ ‘ಜಲನೀತಿ’ಯನ್ನು ರೂಪಿಸಬೇಕು ಎಂಬ ಸಲಹೆಯನ್ನು ಅಧಿಕಾರಿಗಳು ನೀಡಿದರು. ಈ ಸಂಬಂಧ ಇದೇ 18 ರಂದು ಸಭೆ ನಡೆಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT