ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ ಪ್ಯಾಟ್ ಬಳಕೆ ಪ್ರಾತ್ಯಕ್ಷಿಕೆ

ಜಿಲ್ಲೆಯಾದ್ಯಂತ ಮತದಾರರಿಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ
Last Updated 4 ಏಪ್ರಿಲ್ 2018, 12:25 IST
ಅಕ್ಷರ ಗಾತ್ರ

ಗದಗ: ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ಚುನಾವಣಾ ಆಯೋಗ ಮತದಾನ ಖಾತ್ರಿಗಾಗಿ ವಿವಿ ಪ್ಯಾಟ್ ಉಪಕರಣ ಅಭಿವೃದ್ಧಿಪಡಿಸಿದ್ದು, ಇದರ ಬಳಕೆ ಕುರಿತು ಮತದಾರರಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಹೇಳಿದರು.ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ವಿವಿಪ್ಯಾಟ್ ಯಂತ್ರದ ಬಳಕೆ ಕುರಿತು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಈ ಉಪಕರಣ ಬಳಸಲಾಗುತ್ತದೆ. ಈ ಮೊದಲು ಇವಿಎಂ ಮತ್ತು ಬ್ಯಾಲೆಟ್ ಯೂನಿಟ್ ಯಂತ್ರಗಳಿದ್ದವು. ಅವುಗಳಿಗೆ ವಿವಿಪ್ಯಾಟ್ ಸಾಧನ ಅಳವಡಿಸಲಾಗಿದ್ದು, ಇದೊಂದು ಬ್ಯಾಟರಿ ಹೊಂದಿದ ಪ್ರಿಂಟರ್‌ ಆಗಿದೆ. ವಿವಿ ಪ್ಯಾಟ್‌ನಲ್ಲಿ ದಾಖಲಾದ ಮಾಹಿತಿ 5 ವರ್ಷಗಳ ಕಾಲ ಉಳಿದಿರುತ್ತದೆ. ಮತಗಟ್ಟೆಗಳಲ್ಲಿ ಎಲ್ಲ ಮತದಾರರಿಗೆ ಇದರ ತಿಳಿವಳಿಕೆ ನೀಡಲು ಕ್ರಮ ವಹಿಸಬೇಕು’ ಎಂದು ಅವರು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ಮಾತನಾಡಿ, ‘ಯಾವುದೇ ನೆಟ್‌ವರ್ಕ್‌ ಬಳಸಿ ಇವಿಎಂ ಅಥವಾ ವಿವಿಪ್ಯಾಟ್ ಉಪಕರಣ ನಿರ್ವಹಣೆ ಮಾಡಲಾಗುವುದಿಲ್ಲ. ಇದು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತದೆ. ಮತದಾರರರು, ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತದಾನ ಆಗಿರುವುದನ್ನು ಖಾತ್ರಿ ಪಡಿಸಿಕೊಳ್ಳಲು, ಚುನಾವಣಾ ಆಯೋಗ ಈ ಉಪಕರಣ ಒದಗಿಸಿದೆ’ ಎಂದರು.

ಗಿರಿತಿಮ್ಮಣ್ಣವರ, ಎಸ್.ಎಂ. ಕಲ್ಲೂರು, ಬಸವರಾಜ ಅಸುಂಡಿ ಅವರು ವಿವಿ ಪ್ಯಾಟ್‌ ಯಂತ್ರದ ಉದ್ದೇಶ, ನಿರ್ವಹಣೆ, ಬಳಕೆ, ಬ್ಯಾಟರಿ ಅಳವಡಿಕೆ, ಪರಿಶೀಲನೆ ಕುರಿತು ತರಬೇತಿ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಟಿ. ದಿನೇಶ ಇದ್ದರು.

**

ವಿವಿಪ್ಯಾಟ್‌ ಬಳಕೆ ಕುರಿತು ಜಿಲ್ಲೆಯ ಎಲ್ಲ ಮತದಾರರಿಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು  ಬೂತ್ ಮಟ್ಟದಲ್ಲಿ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ – ಮನೋಜ್‌ ಜೈನ್‌, ಜಿಲ್ಲಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT