ಬಾಯಲ್ಲಷ್ಟೇ ಪಾರದರ್ಶಕ ಮಂತ್ರ!: ಮುಖ್ಯಮಂತ್ರಿ ದಿನಚರಿ ಮಾಹಿತಿಗೆ ತಿರುಮಂತ್ರ

7

ಬಾಯಲ್ಲಷ್ಟೇ ಪಾರದರ್ಶಕ ಮಂತ್ರ!: ಮುಖ್ಯಮಂತ್ರಿ ದಿನಚರಿ ಮಾಹಿತಿಗೆ ತಿರುಮಂತ್ರ

Published:
Updated:

ಬೆಂಗಳೂರು: ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಎಚ್‌.ಡಿ. ಕುಮಾರಸ್ವಾಮಿ ಪಾರದರ್ಶಕ ಆಡಳಿತದ ಮಂತ್ರವನ್ನು ಪಠಿಸುತ್ತಿದ್ದಾರೆ. ಇನ್ನೊಂದೆಡೆ, ಅವರ ದಿನಚರಿಯ ಸಾಮಾನ್ಯ ಮಾಹಿತಿ ನೀಡುವುದಕ್ಕೂ ಮುಖ್ಯಮಂತ್ರಿ ಸಚಿವಾಲಯ ನಿರಾಕರಿಸಿದೆ.

ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ದಿನದಿಂದ (ಮೇ 23) ಇಲ್ಲಿಯವರೆಗೆ ಯಾವ ಪ್ರದೇಶಗಳಿಗೆ ಭೇಟಿ ನೀಡಿದ್ದರು ಎಂಬ ವಿವರಗಳನ್ನು ಸಾಮಾಜಿಕ ಕಾರ್ಯಕರ್ತ ಟಿ. ನರಸಿಂಹಮೂರ್ತಿ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದರು.

‘ಈ ವಿವರಗಳು ಮಾಹಿತಿ ಹಾಗೂ ದಾಖಲೆ ಪದದ ವ್ಯಾಪ್ತಿಯಲ್ಲಿ ಬರುವುದಿಲ್ಲ’ ಎಂಬ ನೆಪ ಹೇಳಿ ಮುಖ್ಯಮಂತ್ರಿ ಸಚಿವಾಲಯದ ಪ್ರಥಮ ಮೇಲ್ಮನವಿ ಅಧಿಕಾರಿ ಪಿ.ಎ.ಗೋಪಾಲ್‌ ಅವರು ಅರ್ಜಿಯನ್ನು ತಿರಸ್ಕರಿಸಿ ಪ್ರಕರಣ ಮುಕ್ತಾಯಗೊಳಿಸಿದ್ದಾರೆ.

‘ಕೊಡಗು ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದ ಕೂಡಲೇ ಕುಮಾರಸ್ವಾಮಿ ಭೇಟಿ ನೀಡಿರಲಿಲ್ಲ. ಆಡಳಿತ ನಡೆಸುವುದನ್ನು ಬಿಟ್ಟು ದೇವಸ್ಥಾನಗಳ ಸುತ್ತಾಟದಲ್ಲಿ ತಲ್ಲೀನರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಟೀಕೆ ಮಾಡಿದ್ದರು. 3 ದಿನಗಳ ಬಳಿಕವಷ್ಟೇ ಮುಖ್ಯಮಂತ್ರಿ ಪ್ರವಾಹ ಸಂತ್ರಸ್ತರ ಕಷ್ಟ ಆಲಿಸಿದ್ದರು. ಅದೇ ಹೊತ್ತಿಗೆ, ರಾಜ್ಯದಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ, ಅವರ ಭೇಟಿಯ ವಿವರ ಕೋರಿ ಆಗಸ್ಟ್‌ 18ರಂದು 13 ಅರ್ಜಿಗಳನ್ನು ಸಲ್ಲಿಸಿದೆ’ ಎಂದು ನರಸಿಂಹಮೂರ್ತಿ ತಿಳಿಸಿದರು.

‘ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಮಾಹಿತಿ ನೀಡಬೇಕು. ಆದರೆ, ಸಚಿವಾಲಯವು ಈ ಅವಧಿಯಲ್ಲಿ ವಿವರ ನೀಡಿರಲಿಲ್ಲ. ಹೀಗಾಗಿ, ಪ್ರಾಧಿಕಾರಕ್ಕೆ ಸೆಪ್ಟೆಂಬರ್‌ 19ರಂದು ಮೇಲ್ಮನವಿ ಸಲ್ಲಿಸಿದೆ. ಕಾಯ್ದೆಯಲ್ಲಿರುವ ನಿಯಮದ ಪ್ರಕಾರ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಮೇಲ್ಮನವಿ ಅಧಿಕಾರಿ ಪ್ರತಿಕ್ರಿಯಿಸಿದರು.

‘ಭೇಟಿಯ ವಿವರಗಳನ್ನು ಒಳಗೊಂಡ ದಾಖಲೆಗಳು ನನಗೆ ಬೇಡ. ಅವುಗಳ ಸಂಖ್ಯೆಯನ್ನಷ್ಟೇ ನೀಡಿ’ ಎಂದು ಕೋರಿ ಅ. 1ರಂದು ಮತ್ತೊಂದು ಅರ್ಜಿ ಹಾಕಿದೆ. ಈ ಸಂಬಂಧ ಅಧಿಕಾರಿ ಅ. 15 ಹಾಗೂ 30ರಂದು ವಿಚಾರಣೆ ನಡೆಸಿದರು. ಆದರೆ, ನಾನು ಕೋರಿದ ವಿವರ ನೀಡಲು ಮತ್ತೆ ನಿರಾಕರಿಸಿದರು. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಅವರ ಪ್ರತಿ ನಡೆಯೂ ಶಿಷ್ಟಾಚಾರದ ವ್ಯಾಪ್ತಿಗೆ ಒಳಪಡುತ್ತವೆ. ಈ ಬಗ್ಗೆ ತಿಳಿಯುವ ಹಕ್ಕು ನಾಗರಿಕರಿಗೆ ಇದೆ. ಮಾಹಿತಿ ನಿರಾಕರಣೆ ವಿಚಾರ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಇದೊಂದು ಜನರ ಹಕ್ಕನ್ನು ನಿರಾಕರಿಸುವ ಅಪಾಯಕಾರಿ ಬೆಳವಣಿಗೆ’ ಎಂದು ಅವರು ಹೇಳಿದರು.

**

ಮುಖ್ಯಮಂತ್ರಿ ಅವರ ಕನಸಿನಲ್ಲಿ ಏನು ಬರುತ್ತದೆ ಎಂದು ನಾನೇನಾದರೂ ಕೇಳಿದ್ದೇನೆಯೇ. ಆ ಪ್ರಶ್ನೆಗಾದರೆ ಉತ್ತರ ನೀಡುವುದು ಅಸಾಧ್ಯ.

-ಟಿ.ನರಸಿಂಹಮೂರ್ತಿ, ಸಾಮಾಜಿಕ ಕಾರ್ಯಕರ್ತ

**

ಎಲ್ಲಿಗೆಲ್ಲ ಸಿ.ಎಂ. ಭೇಟಿ: ಕೇಳಿದ ವಿವರಗಳು

* ‌ಹಿಂದೂ ದೇವಾಲಯಗಳು

* ಮಠಗಳು

* ಗುರುದ್ವಾರಗಳು

* ಪಾರ್ಸಿ ದೇವಾಲಯಗಳು

* ಬುದ್ಧ ದೇವಸ್ಥಾನಗಳು

* ಜೈನ ದೇವಸ್ಥಾನಗಳು

* ಮಸೀದಿಗಳು

* ಸರ್ಕಾರಿ ಶಾಲೆಗಳು

* ಸರ್ಕಾರಿ ಆಸ್ಪತ್ರೆಗಳು

* ಪುರುಷ ಹಾಗೂ ಮಹಿಳಾ ಸರ್ಕಾರಿ ವಸತಿ ನಿಲಯಗಳು

* ಪ್ರವಾಹಪೀಡಿತ ಪ್ರದೇಶಗಳು

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !