ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತೆ ಪಶ್ಚಾತಾಪ ಪಡುವಂತೆ ಕೆಲಸ ಮಾಡುತ್ತೇವೆ: ಕುಮಾರಸ್ವಾಮಿ

ಮೈತ್ರಿ ಪರ್ವ ಸಾಧನೆಗಳ ಕೈಪಿಡಿ ಬಿಡುಗಡೆ
Last Updated 20 ಜೂನ್ 2019, 18:41 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ಮತ ಹಾಕದೇ ಸೋಲಿಸಿದ ಬಗ್ಗೆ ಜನತೆ ಪಶ್ಚಾತಾಪಪಡುವಂತೆ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇವೆ. ದೇಶದಲ್ಲೇ ನಂಬರ್‌ 1 ಆಗಲು ಆಡಳಿತದಲ್ಲಿ ಹೊಸ ಪರಿವರ್ತನೆಗಳನ್ನು ತರುತ್ತೇವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ‘ಮೈತ್ರಿ ಪರ್ವ’ ಸರ್ಕಾರದ 1 ವರ್ಷದ ಸಾಧನೆಗಳ ಅವಲೋಕನದ ಕುರಿತ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಜನತೆ ಬೆಂಬಲಿಸದ ಕಾರಣ ಮೈತ್ರಿ ಪಕ್ಷಗಳು ಅತಿ ಕಡಿಮೆ ಸ್ಥಾನಗಳನ್ನು ಪಡೆಯಬೇಕಾಯಿತು ಎಂದರು.

ಲೋಕಸಭೆಯಲ್ಲಿ ತಾವು ತೆಗೆದುಕೊಂಡ ನಿರ್ಧಾರ ತಪ್ಪು ಎಂಬುದು ಮತದಾರರಿಗೆ ಮನವರಿಕೆ ಆಗಬೇಕು ಮತ್ತು ಅದಕ್ಕಾಗಿ ಪಶ್ಚಾತಾಪ ಪಡಬೇಕು. ಆ ರೀತಿಯಲ್ಲಿ ಜನರ ಮನಸ್ಸು ಗೆಲ್ಲುವಂತೆ ಕೆಲಸ ಮಾಡುತ್ತೇವೆ. ಇದಕ್ಕಾಗಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಶಾಶ್ವತ ಯೋಜನೆಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು.

ಇದರ ಭಾಗವಾಗಿ ₹ 56 ಸಾವಿರ ಕೋಟಿ ವೆಚ್ಚದಲ್ಲಿ ನದಿ ಮೂಲದಿಂದಲೇ ನೀರು ಪಡೆದು ಮನೆ ಮನೆಗೆ ತಲುಪಿಸುವ ‘ಜಲಧಾರೆ’ ಯೋಜನೆಯನ್ನು ಜಾರಿ ಮಾಡಲಾಗುವುದು. ಇದಕ್ಕಾಗಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದರು.

ಶಾಸಕರು, ಮಂತ್ರಿಗಳಿಂದಲೂ ಗ್ರಾಮ ವಾಸ್ತವ್ಯ: ‘ಇನ್ನು ಮುಂದೆ ಶಾಸಕರು ಮತ್ತು ಮಂತ್ರಿಗಳಿಗೆ ನಿಯಮಿತವಾಗಿ ‘ಗ್ರಾಮ ವಾಸ್ತವ್ಯ’ ಮಾಡುವಂತೆ ಸೂಚಿಸಿದ್ದೇನೆ.ಇದರಿಂದ ಸಾರ್ವಜನಿಕರ ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

‘ನಾನು ತೋರಿಕೆಗಾಗಲಿ, ಪ್ರಚಾರಕ್ಕಾಗಲಿ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕು ಎಂಬುದು ಮುಖ್ಯ ಉದ್ದೇಶ. ಶಾಸಕರು ಮತ್ತು ಮಂತ್ರಿಗಳಿಂದಲೂ ಇದನ್ನೇ ಅಪೇಕ್ಷಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ನಗರದ ಅಭಿವೃದ್ಧಿಗಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಮುಂದಿನ ತಿಂಗಳು ‘ಬೆಂಗಳೂರು ಮೆಟ್ರೊಪಾಲಿಟನ್‌ ಪ್ರಾಧಿಕಾರ’ದ ಸಭೆಯನ್ನು ನಡೆಸಲಾಗುವುದು. ಈ ಸಭೆಯಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಸರ್ಕಾರ ಅಸ್ಥಿರ ಪ್ರಯತ್ನ ನಿಂತಿಲ್ಲ: ‘ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ನಿಲ್ಲಿಸಿಲ್ಲ. ಈಗಲೂ ಮುಂದುವರಿದಿದೆ. ನಮ್ಮ ಶಾಸಕರಿಗೆ ಆಮಿಷವೊಡ್ಡಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷ್ಯ ಇದ್ದರೆ ಕೊಡಿ ಎನ್ನುತ್ತಾರೆ. ಆದರೆ, ಈಗಾಗಲೇ ಅವರೇ ಮಾತನಾಡಿರುವ ಟೇಪ್‌ ಇಡೀ ರಾಜ್ಯವೇ ಕೇಳಿದೆ’ ಎಂದೂ ಕುಮಾರಸ್ವಾಮಿ ಹೇಳಿದರು.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ, 23 ಲಕ್ಷ ರೈತರ ಸಾಲ ಮನ್ನಾ ಮಾಡುವ ಮೂಲಕ ಕುಮಾರಸ್ವಾಮಿಯವರು ದೇಶಕ್ಕೇ ಮಾದರಿಯಾಗಿದ್ದಾರೆ ಎಂದರು.

ಪಂಚತಾರಾ ಸಂಸ್ಕೃತಿಯೂ ಗೊತ್ತು, ಗುಡಿಸಲೂ ಗೊತ್ತು
‘ನನಗೆ ಪಂಚತಾರಾ ಸಂಸ್ಕೃತಿಯೂ ಗೊತ್ತು, ಗುಡಿಸಿಲು ವಾಸವೂ ಗೊತ್ತು. ಎಲ್ಲಿದ್ದರೂ ನಿದ್ದೆ ಬರುತ್ತದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

‘ಪಂಚತಾರಾ ಹೊಟೇಲ್‌ನಿಂದ ಅಧಿಕಾರ ನಡೆಸುವ ಮುಖ್ಯಮಂತ್ರಿ ಎಂಬ ಬಿಜೆಪಿ ನಾಯಕರ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರಿಗೆ ನಿದ್ದೆ ಬರದೇ ಮೌರ್ಯ ಹೊಟೇಲ್‌ ಬಳಿ ಮಲಗಿದ್ದರು. ಬೆಳಿಗ್ಗೆ ಚೆಡ್ಡಿ ಹಾಕಿಕೊಂಡು ವಾಕಿಂಗ್‌ ಮಾಡಿದರು’ ಎಂದು ವ್ಯಂಗ್ಯವಾಡಿದರು.

**

ಕುಮಾರಸ್ವಾಮಿ ಆಡಳಿತವನ್ನು ಮನೆ ಬಾಗಿಲಿಗೆ ತಲುಪಿಸಲು ಹೃದಯ ಶ್ರೀಮಂತಿಕೆಯಿಂದ ಕೆಲಸ ಮಾಡಿದ್ದಾರೆ.
-ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT