ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಸಮೀಪ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ನಿರ್ಮಾಣ

ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಶನಿವಾರ ಯಡಿಯೂರಪ್ಪರಿಂದ ಭೂಮಿಪೂಜೆ
Last Updated 26 ಜೂನ್ 2020, 12:26 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ 23 ಎಕರೆ ವಿಸ್ತೀರ್ಣದ ಸೆಂಟ್ರಲ್ ಪಾರ್ಕ್ ಕಾಮಗಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಭೂಮಿಪೂಜೆ ನೆರೆವೇರಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೋವಿಡ್ 19 ಕಾರಣದಿಂದ ಈ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ನೆರೆವೇರಿಸಲಾಗುತ್ತಿದೆ. ಹೆಚ್ಚು ಜನರನ್ನು ಸೇರಿಸುತ್ತಿಲ್ಲ, ಸೇರುವ ಜನರಲ್ಲಿಯೇ ಅಂತರವನ್ನು ಕಾಯ್ದುಕೊಂಡು ಗೊಂದಲವಿಲ್ಲದೆ ಕಾರ್ಯಕ್ರಮವನ್ನು ನಡೆಸಲಾಗುವುದು. ಇದೇ ವೇಳೆ ಕೆಂಪೇಗೌಡರ ಮಾದರಿ ಪ್ರತಿಮೆಯನ್ನೂ ಮುಖ್ಯಮಂತ್ರಿಗಳು ಅನಾವರಣಗೊಳಿಸುವರು ಎಂದರು.

ಕಾರ್ಯಕ್ರಮವನ್ನು ವರ್ಚುವಲ್ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಯುಟ್ಯೂಬ್ ಸೇರಿ ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಗಳಲ್ಲಿಯೂ http://bit.ly/kdbkar ಲಿಂಕ್ ಅನ್ನು ಕ್ಲಿಕ್ ಮಾಡಿ ಪ್ರತಿಯೊಬ್ಬರೂ ವೀಕ್ಷಿಸಬಹುದು. ಎಲ್ಲ ಸಂಸದರು ಮತ್ತು ಶಾಸಕರೂ ಆನ್‌ಲೈನ್‌ನಲ್ಲಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಹಾಗೆ ಮಾಡುತ್ತಿದೇವೆ. ಬದಲಿಗೆ ಸಚಿವರು, ಶಾಸಕರು, ಸಂಸದರಿಗೆ ಈ ಲಿಂಕನ್ನು ಕಳಿಸಿದ್ದೇವೆ. ಎಲ್ಲರೂ ತಮ್ಮ ತಮ್ಮ ಮೊಬೈಲುಗಳಲ್ಲೇ ಕಾರ್ಯಕ್ರಮವನ್ನು ವೀಕ್ಷಿಸಿ ಕೆಂಪೇಗೌಡರಿಗೆ ನಮನ ಸಲ್ಲಿಸಬಹುದಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅವರೂ ಸೇರಿ ಪ್ರತಿಪಕ್ಷ ನಾಯಕರು, ಸಂಬಂಧಿತ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಭೂಮಿಪೂಜೆ ನೆರೆವೇರಿದ ಒಂದೇ ವರ್ಷದಲ್ಲಿ ಇಡೀ ಕಾಮಗಾರಿಯನ್ನು ಮುಗಿಸಿ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುವುದು. ಈ ಯೋಜನೆಗೆ ಒಟ್ಟು ₹:78 ಕೋಟಿ ವೆಚ್ಚವಾಗುತ್ತಿದದ್ದು, ಯೋಜನೆ ಪೂರ್ಣಗೊಂಡ ಬಳಿಕ ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರದವರೇ ನಿರ್ವಹಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಪ್ರತಿಮೆ ಎತ್ತರವನ್ನು ವೈಜ್ಞಾನಿಕವಾಗಿ 108 ಅಡಿಗೆ ನಿಗದಿ ಮಾಡಲಾಗಿದೆ. ತಾಂತ್ರಿಕವಾಗಿಯೂ ತುಂಬಾ ಹೋಮ್ ವರ್ಕ್ ಮಾಡಿದ್ದೇವೆ. ಎತ್ತರ ವಿಷಯದಲ್ಲಿ ಯಾರೊಂದಿಗೂ ಪೈಪೋಟಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇಡೀ ಯೋಜನೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರದಿಂದಲೇ ಖರ್ಚು ಮಾಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿಎಂಗೆ ಪತ್ರ ಬರೆದಿರುವ ಬಗ್ಗೆಯೂ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸ್ಮಾರಕವನ್ನು ಸರ್ಕಾರವೇ ಮಾಡಬೇಕು ಎಂದು ಸಿಎಂ ತೀರ್ಮಾನಿಸಿದ್ದರು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ಈ ಕಾರ್ಯ ಆಗಬೇಕೆಂಬ ಇಚ್ಛೆ ಅವರದಾಗಿತ್ತು ಎಂದು ತಿಳಿಸಿದರು.

ವಿಧಾನಸೌಧ-ವಿಕಾಸಸೌಧ ನಡುವೆ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧಿ, ಗುಜರಾತ್ ರಾಜ್ಯದ ನರ್ಮದಾ ನದಿ ತೀರದಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆಯನ್ನು ತಯಾರಿಸಿರುವ ಖ್ಯಾತ ಶಿಲ್ಪಿ ರಾಮಸುತಾರ ಅವರೇ ಕೆಂಪೇಗೌಡರ ಪ್ರತಿಮೆ ವಿನ್ಯಾಸ ಸಿದ್ಧಪಡಿಸುತ್ತಿದ್ದಾರೆ. ಜತೆಗೆ ಕೆಂಪೇಗೌಡರು ಮತ್ತು ಬೆಂಗಳೂರಿನ ಇತಿಹಾಸಕ್ಕೆ ಚ್ಯುತಿ ಬಾರದಂತೆ ಐಡೆಕ್ ಸಂಸ್ಥೆ ಈ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ತಮ್ಮ ಪ್ರಖರ ದೂರದೃಷ್ಟಿಯಿಂದ 500 ವರ್ಷಗಳ ಹಿಂದೆಯೇ ಎಲ್ಲ ಜಾತಿ ಧರ್ಮದವರಿಗೂ ಸಲ್ಲುವ ಬೆಂಗಳೂರಿನಂಥ ಆಧುನಿಕ ಮಹಾನಗರವನ್ನು ಕಟ್ಟಿದ ಮಹಾಪುರುಷನನ್ನು ಮುಂದಿನ ತಲೆಮಾರಿಗೂ ಪರಿಚಯಿಸಬೇಕೆಂಬ ಏಕೈಕ ಉದ್ದೇಶದಿಂದ ಈ ಸ್ಮಾರಕ ನಿರ್ಮಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ನಗರವನ್ನು ಕಟ್ಟುವುದರ ಜತೆಗೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಈ ನಗರವನ್ನು ಜಾಗತಿಕ ಗಮನ ಸೆಳೆಯುಂತೆ ರೂಪಿಸಿದವರು ಕೆಂಪೇಗೌಡರು. ಪೇಟೆ, ಮಾರುಕಟ್ಟೆ, ಕೆರೆಕಟ್ಟೆ, ಕೋಟೆ, ನೀರನ ಪೂರೈಕೆಗೆ ನಾಲೆಗಳು, ನಗರಕ್ಕೆ ಗಡಿಗಳು.. ಹೀಗೆ ಎಲ್ಲ ರೀತಿಯಲ್ಲೂ ಸರ್ವಶ್ರೇಷ್ಟ ನಗರವನ್ನು ಕಟ್ಟಿದ ಹೆಗ್ಗಳಿಕೆ ಅವರದ್ದು ಎಂದ ಡಿಸಿಎಂ, ಇವೆಲ್ಲ ಅಂಶಗಳನ್ನು ಆಮೂಲಾಗ್ರವಾಗಿ ಸಂಶೋಧನೆ ಮಾಡಿ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ ಎಂದರು.

ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವೇ ವಿಧಾನಮಂಡಲದಲ್ಲಿ ನಿರ್ಣಯವೊಂದನ್ನು ಅಂಗೀಕರಿಸಿ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು ಎಂದು ಕೇಂದ್ರ ಸರಕಾರಕ್ಕೆ ಶೀಫಾರಸು ಮಾಡಿತ್ತು. ಈ ಶಿಫಾರಸನ್ನು ಅಂಗೀಕರಿಸಿದ್ದ ಕೇಂದ್ರವು ವಿಮಾನ ನಿಲ್ದಾಣಕ್ಕೆ ನಾಡಪ್ರಭುಗಳ ಹೆಸರನ್ನೇ ಇಟ್ಟಿತ್ತು. ಬಳಿಕ ಆ ನಿಲ್ದಾಣದ ಮುಂದೆ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಬೇಕೆಂಬ ಒತ್ತಾಯವಿತ್ತಾದರೂ ಬಹವರ್ಷಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. ಮತ್ತೆ ಅಧಿಕಾರಕ್ಕೆ ಬಂದ ಕೂಡಲೇ ಅವರು ಪ್ರತಿಮೆ ಸ್ಥಾಪನೆ ಸೇರಿದಂತೆ ಅಲ್ಲಿ ಸೆಂಟ್ರಲ್ ಪಾರ್ಕ್ ನಿರ್ಮಾಣಕ್ಕೂ ಅನುಮೋದನೆ ನೀಡಿ ಅನುದಾನವನ್ನೂ ಒದಗಿಸಿದರು ಎಂದು ಡಿಸಿಎಂ ಮಾಹಿತಿ ನೀಡಿದರು.

ಕೆಂಪಾಪುರ ಅಭಿವೃದ್ಧಿ: ಕೆಂಪೇಗೌಡರ ವೀರ ಸಮಾಧಿಯುಳ್ಳ ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ಜಾಗತಿಕ ಮಟ್ಟದ ಐತಿಹಾಸಿಕ ಪ್ರವಾಸಿ ತಾಣವಾಗಿ ರೂಪಿಸಲಾಗುತ್ತಿದೆ. ಇಡೀ ಗ್ರಾಮವನ್ನು ಕೆಂಪೇಗೌಡರ ಹೆಸರಿನಲ್ಲಿ ಅಭಿವೃದ್ಧಿ ಮಾಡಲಾಗುವುದು, ಸ್ಥಳೀಯರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ಸೂಕ್ತ ವ್ಯವಸ್ಥೆ, ಕೆಂಪಾಪುರ ಕೆರೆಯ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಈ ತಾಣವನ್ನು ಸರ್ವಋತು ಪ್ರವಾಸಿತಾಣವನ್ನಾಗಿ ರೂಪಿಸಬೇಕೆಂಬ ಕನಸನ್ನು ಸಾಕಾರ ಮಾಡಲು ಪ್ರಯತ್ನಗಳನ್ನು ಆರಂಭಿಸಲಾಗಿದೆ. ಐಡೆಕ್ ತಜ್ಞರು ಈಗಾಗಲೇ ಈ ನಿಟ್ಟಿನಲ್ಲಿ ಅಧ್ಯಯನಶೀಲರಾಗಿದ್ದು, ಅವರು ವರದಿ ಕೊಟ್ಟ ನಂತರ ಸಮಗ್ರ ಯೋಜನೆಯನ್ನು ರೂಪಿಸಿ ಜಾರಿಗೆ ತರಲಾಗುವುದು. ಇದರ ಜತೆಯಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇದರ ಜತೆಯಲ್ಲಿಯೇ ಆವತಿ, ಶಿವಗಂಗೆ, ಬೆಂಗಳೂರು, ಮಾಗಡಿ ಸೇರಿದಂತೆ ಕೆಂಪೇಗೌಡರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅವೆಲ್ಲ ಜಾಗಗಳನ್ನು ಗುರುತಿಸಿ ಅವರ ಹೆಸರಿನಲ್ಲಿಯೇ ಒಂದು ಸರ್ಕ್ಯೂಟ್ ಮಾಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಡಿಸಿಎಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT