ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಬೆಸುಗೆ ಗಟ್ಟಿಗೊಳಿಸುವ ಉಪ ಚುನಾವಣೆ: ಎಚ್‌.ಡಿ. ಕುಮಾರಸ್ವಾಮಿ

ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆಗೂ ಮೊದಲು ಮುಖ್ಯಮಂತ್ರಿ ಬಣ್ಣನೆ
Last Updated 16 ಅಕ್ಟೋಬರ್ 2018, 17:30 IST
ಅಕ್ಷರ ಗಾತ್ರ

ಶಿವಮೊಗ್ಗ:ಜೆಡಿಎಸ್–ಕಾಂಗ್ರೆಸ್ ಶಾಶ್ವತ ಮೈತ್ರಿಗೆ ಉಪ ಚುನಾವಣೆ ನಾಂದಿ ಹಾಡಿದೆ.ಇದು ದೈವದ ಆಟ. 2019 ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಣ್ಣಿಸಿದರು.

ಜೆಡಿಎಸ್‌–ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆಗೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಚುನಾವಣೆ ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ. ಮೈತ್ರಿ ಶಕ್ತಿಯ ಪರೀಕ್ಷೆ. ಅಪವಿತ್ರ ಮೈತ್ರಿ ಎಂದು ಆರೋಪಿಸುವ ಬಿಜೆಪಿಗೆ ಉಪ ಚುನಾವಣೆಯ ಮೂಲಕ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಇದು ಅಭಿವೃದ್ಧಿಯ ಮೈತ್ರಿ ಎಂಬುದನ್ನು ನಿರೂಪಿಸಲಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ 25 ಅಥವಾ 26 ಸ್ಥಾನ ಗೆಲ್ಲಲುಇದು ವೇದಿಕೆಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಲಮನ್ನಾಕ್ಕೆ ಕಡ್ಡಿ ಆಡಿಸುತ್ತಿದ್ದಾರೆ

ರೈತರ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾಕ್ಕೆ ಕೆಲವರು ಕಡ್ಡಿ ಆಡಿಸದಿದ್ದರೆ ಈಗಾಗಲೇ ಮನ್ನಾ ಪ್ರಕ್ರಿಯೆ ಆರಂಭವಾಗುತ್ತಿತ್ತು. ಬಿಜೆಪಿ ರೈತ ವಿರೋಧಿ. ಸಮ್ಮಿಶ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಥಿತ ಸಂಚು ನಡೆಸುತ್ತಿದೆ. ಮಾಧ್ಯಮಗಳನ್ನೂ ದಾರಿ ತಪ್ಪಿಸುತ್ತಿದೆ. ಪ್ರತಿ ಬಾರಿ ಸರ್ಕಾರಕ್ಕೆ ಡೆಡ್‌ಲೈನ್ ನೀಡುವ ಚಾಳಿ ಬೆಳೆಸಿಕೊಂಡಿದ್ದಾರೆ. ಅವರ ಎಲ್ಲ ಆಟಗಳಿಗೂ ಉಪ ಚುನಾವಣೆಯ ಫಲಿತಾಂಶ ಪೂರ್ಣ ವಿರಾಮ ನೀಡಲಿದೆ ಎಂದು ಭವಿಷ್ಯ ನುಡಿದರು.

ನವೆಂಬರ್ ಮೊದಲ ವಾರದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹಣ ಪಾವತಿಸಲಾಗುವುದು. ಪ್ರತಿ ರೈತರ ₹ 2.25 ಲಕ್ಷದವರೆಗಿನ ಸಾಲ ಕಟ್ಟಲಾಗುವುದು ಎಂದರು.

ಮಧು ಬಂಗಾರಪ್ಪ ಅವರನ್ನು ಹರಕೆಯ ಕುರಿ ಮಾಡಲಾಗುತ್ತಿದೆ ಎಂದು ಆರೋಪಿಸುವ ಬಿಜೆಪಿಗೆ ಜನರು ಉತ್ತರ ನೀಡುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಮಧು ಸೋಲುಕಂಡ ಮಾತ್ರಕ್ಕೆ ಗೆಲ್ಲುವ ಸಾಮರ್ಥ್ಯ ಇಲ್ಲ ಎಂದು ಬೀಗಬಾರದು. ಜೆಡಿಎಸ್‌ ವರಿಷ್ಠ ದೇವೇಗೌಡರೂ ಮೂರು ಬಾರಿ ಸೋಲು ಕಂಡಿದ್ದಾರೆ. 8 ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಶಾಸಕರಿದ್ದರೂ, ಮತ ಚಲಾಯಿಸುವವರು ಮತದಾರರು ಎಂಬ ಸತ್ಯ ಅರ್ಥಮಾಡಿಕೊಳ್ಳಬೇಕು. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಮೊದಲು ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.

‘ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರು ನನ್ನನ್ನು ಮಗನಂತೆ ಕಂಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೇರಲು ಆಶೀರ್ವಾದ ಮಾಡಿದ್ದರು. ಅವರ ಕುಟುಂಬಕ್ಕೆ ಸಹಕಾರ ನೀಡಲು ಉಪ ಚುನಾವಣೆ ವರದಾನವಾಗಿದೆ. ಸವಾಲಾಗಿ ಸ್ವೀಕರಿಸಿದ್ದು, ಹೆಚ್ಚಿನ ಸಮಯ ಈ ಲೋಕಸಭಾ ಕ್ಷೇತ್ರದಲ್ಲೇ ಕಳೆಯುವೆ. ಮಧು ಗೆಲುವಿಗೆ ಶ್ರಮಿಸುವೆ’ ಎಂದು ಭರವಸೆ ನೀಡಿದರು.

ದೇಶದಲ್ಲಿ ಪರಿವರ್ತನೆಯ ಅಗತ್ಯವಿದೆ. ಜಿಲ್ಲೆಗೆ ಹೊಸ ರಾಜಕೀಯದ ಆವಶ್ಯಕತೆ ಇದೆ. ಕೆಲವರು ಈ ಜಿಲ್ಲೆ ಗುತ್ತಿಗೆ ತೆಗೆದು ಕೊಂಡವರಂತೆ ಆಡುತ್ತಿದ್ದಾರೆ. ಜಿಲ್ಲೆ ಯಾರ ಸ್ವತ್ತೂ ಅಲ್ಲ ಎಂದು ಯಡಿಯೂರಪ್ಪಗೆ ಕುಟುಕಿದರು.

ಬಿಜೆಪಿಯ ಹಿಂದುತ್ವದ ವಿರುದ್ಧ ಹರಿಹಾಯ್ದ ಮುಖ್ಯಮಂತ್ರಿ, ‘ಬಿಜೆಪಿ ಹಿಂದುತ್ವ ಗುತ್ತಿಗೆ ಪಡೆದಿದೆಯೇ? ಅಭಿವೃದ್ಧಿಗಿಂತ ಅವರಿಗೆ ಭಾವನಾತ್ಮಕ ವಿಷಯಗಳೇ ಬಂಡವಾಳ. ನಾವೂ ಹಿಂದುಗಳು, ಆದರೆ, ಎಲ್ಲರನ್ನೂ ಸರಿಸಮವಾಗಿ ಕಾಣುತ್ತೇವೆ’ ಎಂದುಬಿಜೆಪಿ ಮುಖಮಡರನ್ನು ಟೀಕಿಸಿದರು.

**

ಡಿ ನೋಟಿಫಿಕೇಷನ್ ಆರಂಭಿಸಿಲ್ಲ ಎನ್ನುವುವು ಮೈತ್ರಿ ಸರ್ಕಾರದ ವಿರುದ್ಧ ಯಡಿಯೂರಪ್ಪ ಅಸಹನೆಗೆ ಪ್ರಮುಖ ಕಾರಣ.

-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT