ಪರಿಹಾರ ಕಾರ್ಯಕ್ಕೆ ಹೆಚ್ಚು ಅನುದಾನ: ಮುಖ್ಯಮಂತ್ರಿ ಆಗ್ರಹ

7
ಕೇಂದ್ರ ತಂಡದ ಜೊತೆ ಸಭೆ

ಪರಿಹಾರ ಕಾರ್ಯಕ್ಕೆ ಹೆಚ್ಚು ಅನುದಾನ: ಮುಖ್ಯಮಂತ್ರಿ ಆಗ್ರಹ

Published:
Updated:

ಬೆಂಗಳೂರು: ಕೊಡಗು, ದಕ್ಷಿಣಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದ್ದು ಪರಿಹಾರಕ್ಕಾಗಿ ಎರಡು ಪಟ್ಟು ಹೆಚ್ಚು ಅನುದಾನ ನೀಡಲು ಶಿಫಾರಸು ಮಾಡಬೇಕೆಂದು  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಗಳಿಗೆ ಭೇಟಿ ನೀಡಿದ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಅನಿಲ್‌ ಮಲ್ಲಿಕ್‌ ನೇತೃತ್ವದ ತಂಡವು ಶುಕ್ರವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿತು.

ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಮನೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಪುನರ್‌ ನಿರ್ಮಿಸಲು ರಾಜ್ಯ ವಿಕೋಪ ಪರಿಹಾರ ನಿಧಿಯಡಿ ಒದಗಿಸಲಾದ ಮೊತ್ತ ತೀರಾ ಕಡಿಮೆ. ಪ್ರತಿ ಬಾರಿಯೂ ವಿಕೋಪದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಡಿಮೆ ಅನುದಾನ ನೀಡುತ್ತಿದೆ. ಅದಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ರಾಜ್ಯ ಸರ್ಕಾರವೇ ಖರ್ಚು ಮಾಡುತ್ತಿದೆ. ಆದ್ದರಿಂದ, ಈ ಬಾರಿ ಎರಡು ಪಟ್ಟು ಅಧಿಕ ಅನುದಾನ ನೀಡಬೇಕು ಎಂದು ಕುಮಾರಸ್ವಾಮಿ ತಂಡಕ್ಕೆ ತಿಳಿಸಿದರು.

ಕಾಫಿ ಬೆಳೆ ನಾಶಕ್ಕೆ ಸಂಬಂಧಿಸಿದಂತೆ ಕಾಫಿ ಮಂಡಳಿ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಆದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಿ, ಮಾಹಿತಿ ಸಂಗ್ರಹಿಸಲು ಮಂಡಳಿ ಅಧಿಕಾರಿಗಳು ಸಮ್ಮತಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳುವುದು ಸೂಕ್ತ ಎಂದೂ ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಅನಿಲ್‌ ಮಲ್ಲಿಕ್‌, ‘ಕೇರಳಕ್ಕೆ ಈಗಾಗಲೇ ಮುಂಗಡ ಅನುದಾನ ಬಿಡುಗಡೆ ಮಾಡಲಾಗಿದ್ದು, ನೀವೂ (ಕರ್ನಾಟಕ) ಮನವಿ ಮಾಡಿದರೆ, ಕೇರಳದ ಮಾದರಿಯಲ್ಲಿ  ಮುಂಗಡ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು  ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಪರಿಶೀಲನೆ ನಡೆಸಲಾಗಿದೆ. ರಾಜ್ಯದಲ್ಲಿ ಜಿಪಿಎಸ್‌ ಆಧಾರಿತ ಬೆಳೆ ಸಮೀಕ್ಷೆ ಹಾಗೂ ಮಾಹಿತಿ ಸಂಗ್ರಹಣೆ ವಿಧಾನ ದೇಶದಲ್ಲಿಯೇ ಅತ್ಯುತ್ತಮವಾದುದು. ಹಾನಿಗೊಳಗಾದ ಯಾವ ಜಿಲ್ಲೆಯಲ್ಲಿಯೂ ಸರ್ಕಾರದ ವಿರುದ್ಧ ಜನರು ಪ್ರತಿಭಟನೆ ಮಾಡಲಿಲ್ಲ. ಇದು ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಕಾನೂನು ಸಚಿವ ಕೃಷ್ಣ ಬೈರೇಗೌಡ ಮತ್ತು ಹಿರಿಯ ಅಧಿಕಾರಿಗಳು ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !