ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಕೃಷಿಗೆ ಕಾರ್ಮಿಕರ ಕೊರತೆ

ಜೀವನ ನಿರ್ವಹಣೆಗಾಗಿ ನಗರಕ್ಕೆ ವಲಸೆ ಹೋಗುತ್ತಿರುವ ಯುವಕರು
Last Updated 19 ಮೇ 2018, 10:32 IST
ಅಕ್ಷರ ಗಾತ್ರ

ಶೃಂಗೇರಿ: ಶೃಂಗೇರಿ ತಾಲ್ಲೂಕಿನಲ್ಲಿ ಹದವಾಗಿ ಮಳೆ ಬೀಳುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ರೈತರು ನಾಟಿಗೆ ಸಿದ್ಧತೆಯನ್ನು ಪ್ರಾರಂಭಿಸಿದ್ದಾರೆ.

ಭತ್ತದ ಗದ್ದೆ ಸಸಿಮುಡಿ ತಯಾರಿಕೆಯಲ್ಲಿ ತೊಡಗಿರುವ ರೈತರು, ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಡಿಕೆ ಮತ್ತು ಕಾಫಿ ಬೆಳೆಗೆ ರಾಸಾಯನಿಕ ಗೊಬ್ಬರ ನೀಡುತ್ತಿದ್ದು, ಅಡಿಕೆ ತೋಟಗಳಿಗೆ ಜೌಷಧಿ ಸಿಂಪಡಣೆ ಕಾರ್ಯ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

ಶೃಂಗೇರಿ ತಾಲ್ಲೂಕಿನಲ್ಲಿ ವಾರ್ಷಿಕ 150 ರಿಂದ 200 ಇಂಚು ವಾಡಿಕೆ ಮಳೆಯಾಗುತ್ತಿತ್ತು. ಇಲ್ಲಿನ ಪ್ರಮುಖ ಬೆಳೆ
ಗಳು ಭತ್ತ, ಅಡಿಕೆ, ಕಾಫಿ, ತೆಂಗು, ಏಲಕ್ಕಿ ಪ್ರಮುಖ ಬೆಳೆಗಳಾಗಿವೆ.

ಪಾಳು ಬಿದ್ದ ಗದ್ದೆಗಳು: ತಾಲ್ಲೂಕಿನಲ್ಲಿ ಈ ಹಿಂದೆ ಗದ್ದೆಗಳಲ್ಲಿ ಗೌರಿ, ಜಯ, ರತ್ನಸೂಡಿ, ಐಇಟಿ, ಕೊಯಮುತ್ತೂರು, ಸಣ್ಣವಾಳ್ಯ, ಹೆಗ್ಗೆ, ಇಂಟಾನ್, ವಾಳ್ಯ ಮೊದಲಾದ ಬೀಜಗಳನ್ನು ಭತ್ತದ ಫಸಲಿಗೆ ಬಳಸಲಾಗುತ್ತಿತ್ತು. ಮನೆಗೆ ಬೇಕಾದಷ್ಟು ಭತ್ತವನ್ನು ಸಂಗ್ರಹಿಸಿ ಉಳಿದ ಭತ್ತವನ್ನು ಮಾರಾಟ ಮಾಡುತ್ತಿದ್ದ ಕಾಲವಿತ್ತು. ಪ್ರಸ್ತುತ ಸರ್ಕಾರದ ಬೆಂಬಲ ಬೆಲೆ ಸಾಕಾಗದೇ ಹಾಗೂ ಕಾರ್ಮಿಕರ ಕೊರತೆಯಿಂದ ಬೆಳೆಯುವ ಭತ್ತದ ಬೆಳೆ ಶೇ 25ಕ್ಕೆ ಕುಸಿತಗೊಂಡಿದೆ ಎನ್ನುತ್ತಾರೆ ಇಲ್ಲಿನ ಹಿರಿಯ ರೈತರು.

ಕೈಕೊಡುತ್ತಿರುವ ಅಡಿಕೆ ಬೆಳೆ: ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಹಳದಿ ಎಲೆ ಹಾಗೂ ಬೇರುಹುಳದ ಬಾಧೆಯಿಂದ ಇಳುವರಿ ಕುಂಠಿತಗೊಂಡಿದ್ದು, ಈ ವರ್ಷ ಬಿಸಿಲಿನ ತಾಪದಿಂದ ಸಾಕಷ್ಟು ಮರಗಳು ಹಾನಿಗೊಂಡು ಮುಂದಿನ ಫಸಲಿನ ಬಗ್ಗೆ ರೈತರಲ್ಲಿ ಆತಂಕ ಉಂಟಾಗಿದೆ. ಹಿಂದಿನ ವರ್ಷ ಮಾರುಕಟ್ಟೆಯಲ್ಲಿ ಅಡಿಕೆಗೆ ಹೆಚ್ಚು ಬೆಲೆಯಿದ್ದು, ಪ್ರಸ್ತುತ ಅದರ ಬೆಲೆ ಕುಂಠಿತಗೊಂಡಿದೆ. ಇದರಿಂದ ರೈತರ ಸ್ಥಿತಿ ಅತಂತ್ರವಾಗಿದೆ.

ಸೊರಗು ರೋಗದಿಂದ ಸೊರಗುತ್ತಿರುವ ಕಾಳುಮೆಣಸು: ಮಾರುಕಟ್ಟೆಯಲ್ಲಿ ಕಾಳುಮೆಣಸಿಗೆ ಉತ್ತಮ ಬೆಲೆಯಿದ್ದು ಸೊರಗು ರೋಗದಿಂದ ತೋಟಗಳು ಬಸವಳಿದಿದೆ. ಆದರೂ ಕೂಡಾ ತಾಲೂಕಿನ ರೈತರು ನಿರಾಶೆಗೊಳ್ಳದೇ ಕಾಳು ಮೆಣಸು ಬಳ್ಳಿಗಳನ್ನು ನೆಡಲು ತಯಾರಿ ನಡೆಸುತ್ತಿದ್ದಾರೆ. ತೋಟಗಾರಿಕಾ ಇಲಾಖೆಯಿಂದ ಕಳೆದ ಹಲವು ವರ್ಷಗಳಿಂದ ಉತ್ತಮವಾದ ಕಾಳುಮೆಣಸು ಬಳ್ಳಿ ಮತ್ತು ಅದಕ್ಕೆ ಬರುವಂತಹ ರೋಗವನ್ನು ತಡೆಗಟ್ಟಲು ಟ್ರೈಕೊಡ್ರಮಾ, ಸುಡೋನೋ
ಮನಸ್ಸ್ ನೀಡುತ್ತಿದ್ದು ರೈತರಿಗೆ ಅನುಕೂಲವಾಗಿದೆ.

ಎರಡನೇ ವಾಣಿಜ್ಯ ಬೆಳೆಯಾದ ಕಾಫಿ: ತಾಲ್ಲೂಕಿನಲ್ಲಿ ಕಾಫಿತೋಟ ಹಲವಾರು ಎಕರೆ ಇದ್ದರೂ ಕೂಡಾ ಒತ್ತುವರಿಯ ಪ್ರಭಾವದಿಂದ ತೋಟದ ವಿಸ್ತೀರ್ಣ ಹೆಚ್ಚಿದೆ. ಹಾಗಾಗಿ, ಕಾಫಿ ಬೆಳೆಗೆ ರೈತರು ಹೆಚ್ಚಿನ ಒತ್ತು ನೀಡುತ್ತಿದ್ದು ಶೃಂಗೇರಿ
ಯಲ್ಲಿ ಕಾಫಿ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕು ಎಂಬುದು ರೈತರ ಬಹುದಿನದ ಬೇಡಿಕೆ. ಕೊಪ್ಪದ ಕಾಫಿ ಮಂಡಳಿ
ಯಿಂದ ತಾಲ್ಲೂಕಿನ ರೈತರಿಗೆ ಬೆಳೆ ವಿಸ್ತರಣೆಗೆ ಯಂತ್ರೋಪಕರಣ ಖರೀದಿ, ತುಂತುರು ಮತ್ತು ಹನಿ ನೀರಾವರಿ ಹಾಗೂ ಕೆರೆನಿರ್ಮಾಣ ಮಾಡಲು ಸಾಕಷ್ಟು ಸಹಾಯಧನವನ್ನು ನೀಡುತ್ತಿದೆ.

ವೃದ್ಧರು ಹೆಣಗಬೇಕಾಗಿದೆ

ರೈತರಿಗೆ ತೋಟದ ಬೆಳೆಗಳನ್ನು ಉಳಿಸಲು ಕಾರ್ಮಿಕರ ಕೊರತೆ ಎದುರಾಗಿದೆ. ತಾಲ್ಲೂಕಿನ ಉಪ ಬೆಳೆಯಾದ ಏಲಕ್ಕಿ,ಬಾಳೆ ಮಂಗನ ಪಾಲಾಗುತ್ತಿದೆ. ಮನೆಯ ಮಕ್ಕಳು ಜೀವನ ನಿರ್ವಹಣೆಗಾಗಿ ನಗರಕ್ಕೆ ಹೋಗುವುದು ಸಾಮಾನ್ಯವಾಗಿದೆ. ಮನೆಯಲ್ಲಿರುವ ವೃದ್ಧರು ಕೃಷಿ ಬೆಳೆಗಳನ್ನು ಉಳಿಸಿಕೊಳ್ಳಲು ಹೆಣಗಬೇಕಾಗಿದೆ ಎನ್ನುತ್ತಾರೆ ಕೃಷಿಕ ರಮೇಶ್ ಭಟ್ ಕೊಡತಲು

ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT