ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವರು: ದೇವೇಗೌಡ

Last Updated 18 ನವೆಂಬರ್ 2018, 9:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಬ್ಬು ಬೆಳೆಗಾರರ ಸಮಸ್ಯೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಗೆಹರಿಸುವರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ರೈತರ ಸಭೆಯನ್ನು ಮಂಗಳವಾರ ಕರೆದಿದ್ದಾರೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರಣಿ ನಿರತ ರೈತರ ಮನವೊಲಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿದರೂ ಪ್ರಯೋಜನಾ ಆಗಲಿಲ್ಲ. ಕಬ್ಬು ಬೆಳೆಗಾರರು ಮಾತ್ರವಲ್ಲ ಎಲ್ಲ ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ’ ಎಂದರು.

‘ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅವರು ಬೆಳೆ ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಎರಡು ಲಕ್ಷ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಈಗ ಆತ್ಮಹತ್ಯೆ ಮಾಡಿಕೊಂಡ ರೈತರ ಸಾಲ ಎಷ್ಟಿತ್ತು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಾರೆ. ಕೆಲವರು 16–18 ಲಕ್ಷ ಸಾಲ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

‘ಅಡಿಕೆ, ತೆಂಗು, ಹೊಗೆಸೊಪ್ಪು ಬೆಳೆ ನಾಶವಾಗಿದೆ ಎಂದು ಪ್ರಧಾನಿ ಅವರ ಬಳಿ ಹೋಗಿದ್ದೆವು. ಆದರೆ ಯಾವುದೇ ಪ್ರಯೋಜನಾ ಆಗಲಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಹಾಗೆ ರೈತರ ಮೇಲೆ ಗೋಲಿಬಾರ್ ಮಾಡಿಲ್ಲ. ದೇಶದಲ್ಲಿ ಯಾವುದೇ ಸರ್ಕಾರ 45 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿಲ್ಲ, ಕುಮಾರಸ್ವಾಮಿ ಮಾಡಿದ್ದಾರೆ. ರೈತರ ವಿಷಯದಲ್ಲಿ ರಾಜಕೀಯ ಬೇಡ. ಈ ವಿಷಯದಲ್ಲಿ ನೀವು (ಮಾಧ್ಯಮ) ಪ್ರಚೋದನೆ ಮಾಡಲು ಹೋಗಬೇಡಿ’ ಎಂದರು

ಮಾಸಾಂತ್ಯಕ್ಕೆ ಸಂಪುಟ ವಿಸ್ತರಣೆ:‘ನಮಗಿರುವ ಅನುಭವದ ಆಧಾರದ ಮೇಲೆ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯ ಆಗದಂತೆ ನಡೆಸಿಕೊಂಡು ಹೋಗುತ್ತೇವೆ. ಪಾಲಿಕೆ ಮೇಯರ್‌ ಸ್ಥಾನವನ್ನು ಬಿಟ್ಟುಕೊಡಲಾಗಿದೆ. ಆ ವಿಷಯದಲ್ಲಿ ನಾನೇ ಸಿದ್ದರಾಮಯ್ಯ ಅವರಿಗೆ ಫೋನ್‌ ಮಾಡಿದ್ದೆ. ಈ ತಿಂಗಳ ಅಂತ್ಯದೊಳಗೆ ಖಾಲಿ ಇರುವ ಸಚಿವ ಸಂಪುಟ ಸ್ಥಾನಗಳನ್ನು ತುಂಬಲಾಗುವುದು. ದಿನೇಶ್ ಗುಂಡೂರಾವ್, ವೇಣುಗೋಪಾಲ್, ಕುಮಾರಸ್ವಾಮಿ ಅವರು ಚರ್ಚೆ ಮಾಡುತ್ತಾರೆ. ನಾನು ಮತ್ತು ಸಿದ್ದರಾಮಯ್ಯ ಬಹುತೇಕ ವಿಷಯಗಳ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳುತ್ತೇವೆ’ ಎಂದರು.

‘ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕಡಿವಾಣ ಹಾಕಲು ನಾವು ಮತ್ತು ಕಾಂಗ್ರೆಸ್ ಒಟ್ಟಾಗಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ಪರಸ್ಪರ ಸಹಮತದಿಂದ ಸೀಟು ಹಂಚಿಕೊಳ್ಳುತ್ತೇವೆ. ಬೇರೆ ರಾಜ್ಯಗಳಲ್ಲಿ ಮೈತ್ರಿ ಪಕ್ಷಗಳು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಸೀಟು ಹಂಚಿಕೊಳ್ಳಲಿವೆ. ಬಿಜೆಪಿ ರಾಷ್ಟ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲು ಆಡಿಟರ್‌ ಜನರಲ್ ಆಫ್ ಇಂಡಿಯಾ ಕಾರಣ. 2ಜಿ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಬಗ್ಗೆ ಅವರು ನೀಡಿದ ವರದಿ ಕಾರಣ. ಈ ಸರ್ಕಾರದವರು ಆಡಿಟರ್ ಫೋಟೊ ಇಟ್ಟುಕೊಳ್ಳಬೇಕು‘ ಎಂದರು.

ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ ಎಂದ ಮೋದಿ ಅವರು, ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ನಿವಾರಣೆ ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ ಎಂದರು. ಅನಿತಾ ಕುಮಾರಸ್ವಾಮಿ ಸಚಿವರಾಗುವರೇ ಎಂಬ ‍ಪ್ರಶ್ನಗೆ ಕಾದು ನೋಡಿ ಎಂದರು.ಚುನಾವಣೆ ಇನ್ನೂ ಆರು ತಿಂಗಳು ಇದೆ, ಅಲ್ಲಿಯ ವರೆಗೆ ರಾಜ್ಯದಾದ್ಯಂತ ಓಡಾಡಿ, ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿ ಇನ್ನೂ ಶಕ್ತಿ ಉಳಿದಿದ್ದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.

ಕೇಂದ್ರದಲ್ಲಿ ಮತ್ತೆ ಅತಂತ್ರ ಸರ್ಕಾರ ಬರಲಿದೆಯೇ ಮೂರು ನಾಲ್ಕು ಮಂದಿ ಪ್ರಧಾನಿ ಆಗುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಈ ಹಿಂದೆ ಬಿಜೆಪಿಗೆ ಬಹುಮತ ಇದ್ದರೂ ಮೂರು ಮಂದಿ ಸಿಎಂ ಆಗಲಿಲ್ಲವೇ’ ಎಂದರು.

ತನಿಖೆ ನಡೆಸುವ ಮುನ್ನ ರಾಜ್ಯ ಸರ್ಕಾರದ ಅನುಮತಿ ಪಡೆಯುವಂತೆ ಆಂಧ್ರಪ್ರದೇಶ ಕಾನೂನು ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಿಂದೆ ವಾಜಪೇಯಿ ಅವರು ಐದು ವರ್ಷಗಳ ಕಾಲ ಆಡಳಿತ ಮಾಡಿದಾಗ ಇಂತಹ ಪರಿಸ್ಥಿತಿ ಇರಲಿಲ್ಲ. ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಅಭಿಪ್ರಾಯ ಜನ ಸಮಾನ್ಯರಲ್ಲಿದೆ. ಆದ್ದರಿಂದ ರಾಜ್ಯಗಳು ನಿರ್ಬಂಧಿಸುವ ಕೆಲಸ ಮಾಡುತ್ತಿವೆ. ಆದರೆ ಸಿಬಿಐ ತನಿಖೆಗೆ ರಾಜ್ಯ ನಿರ್ಬಂಧ ಹೇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT